More

    ತಾಮ್ರಪಟ ರಚನೆ ಕಾರ್ಯ ಶ್ಲಾಘನೀಯ

    ಬಾಗಲಕೋಟೆ: ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಕವಿ ಚಕ್ರವರ್ತಿ ರನ್ನನ ಗದಾಯುದ್ಧ ಕಾವ್ಯವನ್ನು ತಾಮ್ರಪಟದಲ್ಲಿ ದಾಖಲಿಸುವ ಕಾಯಕ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

    ಜಿಲ್ಲೆಯ ಮುಧೋಳ ನಗರದ ರನ್ನ ಸ್ಮಾರಕ ಭವನದಲ್ಲಿ ರಾಷ್ಟ್ರೀಯ ಸಂಶೋಧನಾ ವೇದಿಕೆ ಆಯೋಜಿಸಿದ ಸಂಶೋಧಕ ಡಾ.ಸಂಗಮೇಶ ಕಲ್ಯಾಣಿ ರಚಿಸಿದ ಕವಿಚಕ್ರವರ್ತಿ ರನ್ನನ ಕಾವ್ಯ ಗದಾಯುದ್ಧದ 5 ತಾಮ್ರಪಟ ಹಾಗೂ ಬಾದಾಮಿ ಚಾಲುಕ್ಯರ ಕುರಿತ ತಾಮ್ರಪಟಗಳು, ಅವಲೋಕನ, ಅವ್ವ ಹೇಳಿದ ಕಥೆಗಳು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

    ರನ್ನನ ಕಾವ್ಯಗಳಲ್ಲಿ ಇತಿಹಾಸವಿದೆ. ಗದಾಯುದ್ಧ ಸಾವಿರಾರು ವರ್ಷಗಳ ಹಳೆಯದಾದರೂ ಇನ್ನಷ್ಟು ಓದಬೇಕೆಂಬ ಹಂಬಲ ಇಮ್ಮಡಿಗೊಳ್ಳುತ್ತಲೇ ಇದೆ. ರನ್ನನ ಕಾವ್ಯ ಹಾಗೂ ಬಾದಾಮಿ ಚಾಲುಕ್ಯರ ಕಾಲದ ಇತಿಹಾಸವನ್ನು ಅಜರಾಮರವಾಗಿಡಲು ಸಂಶೋಧಕ ಡಾ.ಸಂಗಮೇಶ ಕಲ್ಯಾಣಿ ಅವರು ನಿರ್ಮಿಸುತ್ತಿರುವ ತಾಮ್ರಪಟಗಳು ಶಾಶ್ವತವಾಗಿ ಉಳಿಯಲಿವೆ. 250 ತಾಮ್ರಪಟಗಳು ಪೂರ್ಣಗೊಂಡ ಬಳಿಕ ಸರ್ಕಾರಕ್ಕೆ ಹಸ್ತಾಂತರ ಮಾಡುವುದು ಸ್ವಾಗತಾರ್ಹ ಎಂದರು.

    ಹಂಪಿ ವಿಶ್ರಾಂತ ಉಪಕುಲಪತಿ ಡಾ.ಎ.ಮುರಿಗೆಪ್ಪ ಮಾತನಾಡಿ, ರನ್ನನ ಕಾವ್ಯದಲ್ಲಿ ಅಗಾಧವಾದ ಶಕ್ತಿಯಿದೆ. ಆ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಗಳು ನಡೆಯಬೇಕಾಗಿದೆ. ರನ್ನನ ಕೃತಿಗಳ ಇತಿಹಾಸ ತಾಮ್ರಪಟಗಳಲ್ಲಿ ಮೂಡಿ ಬರುತ್ತಿರುವುದು ಕನ್ನಡ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಬದುಕಿನ ಬಹುಭಾಗ ಸಾಹಿತ್ಯದಲ್ಲಿ ರನ್ನ ಗದಾಯುದ್ಧ ಇಂದಿಗೂ ಕಾಣಬಹುದು ಎಂದು ಹೇಳಿದರು.

    ಜಮಖಂಡಿ ಶಾಸಕ ಡಾ.ಜಗದೀಶ ಗುಡಗುಂಟಿಮಠ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪುಸ್ತಕಗಳು ಬಹಳಷ್ಟು ವರ್ಷಗಳ ಉಳಿಯುವುದಿಲ್ಲ. ತಾಮ್ರಪಟಗಳ ನಿರ್ಮಾಣದಿಂದ ಹೊಸ ಮನ್ವಂತರ ಬಂದಿದೆ ಎಂದರು.

    ಬೆಂಗಳೂರಿನ ಬಾಲಕೃಷ್ಣ ಗುರೂಜಿ ಮಾತನಾಡಿ, ಭಾರತೀಯ ಸಂಸ್ಕೃತಿ ಉಳಿಯಲು ಹಿಂದಿನ ತಲೆಮಾರಿನ ದೇಸಿ ಪದ್ದತಿಗಳನ್ನು ಮರೆಯಬಾರದು. ಆ ಪದ್ಧತಿಗಳು ಮರಳಿ ಬರಬೇಕು ಎಂದರು.

    ಸಾಹಿತಿ ಗುರುರಾಜ ಪೋತ್ನಿಸ್ ಮಾತನಾಡಿ, ಕನ್ನಡ ಸಾಹಿತ್ಯ ಲೋಕಕ್ಕೆ ರನ್ನನ ಕೊಡುಗೆ ಅಪಾರವಾಗಿದೆ. ಕುಡುಚಿ-ಬಾಗಲಕೋಟೆ ರೈಲ್ವೆ ಯೋಜನೆಯಡಿ ಸೋರಗಾಂವಿ ಬಳಿ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ರನ್ನನ ಹೆಸರು ನಾಮಕರಣ ಮಾಡಬೇಕು ಎಂದು ಮನವಿ ಮಾಡಿದರು. ತಾಮ್ರಪಟದ ರಚನೆಕಾರ ಸಂಶೋಧಕ ಡಾ.ಸಂಗಮೇಶ ಕಲ್ಯಾಣಿ ಮಾತನಾಡಿ, 2025ರಲ್ಲಿ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ತಾಮ್ರಪಟಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು. ಸರ್ಕಾರಕ್ಕೆ ಹಸ್ತಾಂತರ ಮಾಡಲಾಗುವುದು ಎಂದರು.

    ಚಿಂತನಸಿರಿ ಗೌರವಾಧ್ಯಕ್ಷ ಡಾ.ಎಂ.ಆರ್.ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ವಿನೋದ ಹತ್ತಳ್ಳಿ, ತಾಲೂಕು ಕಾನಿಪ ಸಂಘದ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ, ಕಸಾಪ ಮುಧೊಳ ತಾಲೂಕು ಅಧ್ಯಕ್ಷ ಆನಂದ ಪೂಜಾರಿ, ಮಾಜಿ ಅಧ್ಯಕ್ಷ ಎನ್.ವಿ.ತುಳಸಿಗೇರಿ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪ ಸಬರದ, ರಾಮಚಂದ್ರ ತುಳಸಿಗೇರಿ, ಸಿ.ಎಂ.ಜೋಶಿ, ಚಿಂತನಸಿರಿ ಬಳಗದ ಡಾ.ಡಿ.ಎಂ.ಬೆಣ್ಣೂರು, ರಮೇಶ ಅಣ್ಣಿಗೇರಿ, ಮಹಾದೇವಪ್ಪ ಮಡಿವಾಳರ, ಡಾ.ಪ್ರಕಾಶ ಚಿನ್ನಣ್ಣವರ, ತ್ರಿವೇಣಿ ಕಲ್ಯಾಣಿ, ಮಹಾಲಿಂಗಪ್ಪ ಬಂಡಿ, ಮಂಜುನಾಥ ಒಂಟಗೋಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts