More

  ನಮ್ಮದು ದೂಧ್ ಕಾ ದೂಧ್ ಪಾನೀ ಕಾ ಪಾನೀ

  ಬಾಗಲಕೋಟೆ: ಹಿಂದು ಸಂಘಟನೆ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕುವ ಪ್ರಯತ್ನ ಮಾಡಿದರೆ ಅದರ ವಿರುದ್ಧ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ. ಸೇಡಿನ ಕ್ರಮ ಕೈಬಿಡಿ ಇಲ್ಲವಾದರೆ ನಮ್ಮದು ಸಹ ‘ದೂಧ್ ಕಾ ದೂಧ್ ಪಾನೀ ಕಾ ಪಾನೀ’. ಒಮ್ಮೆ ಆಗಿಯೇ ಹೋಗಲಿ ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ ಜಿಲ್ಲೆಯ ಪೊಲೀಸರಿಗೆ ಎಚ್ಚರಿಸಿದ್ದಾರೆ.

  ಮೇ 8 ರಂದು ಬಾಗಲಕೋಟೆಯಲ್ಲಿ ನಡೆದಿದ್ದ ಲಘು ಲಾಠಿ ಪ್ರಹಾರ, ಹಿಂದು ಕಾರ್ಯಕರ್ತರ ಮೇಲೆ ಎಫ್‌ಐಆರ್ ಪ್ರಕರಣವನ್ನು ಖಂಡಿಸಿ, ಶನಿವಾರ ಬಾಗಲಕೋಟೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

  ಅಂದು ಪ್ರತಿಭಟನೆ ಮಾಡುತ್ತಿದ್ದ ಹಿಂದು ಸಂಘಟನೆ ಕಾರ್ಯಕರ್ತರ ವಿರುದ್ಧ ಉದ್ದೇಶಪೂರ್ವಕವಾಗಿ ದೌರ್ಜನ್ಯ ನಡೆಸಲಾಗಿದೆ. ನಿಮ್ಮ ಲಾಠಿಗಳಿಗೆ ಹೆದರಿ ನಾವು ಹಿಂದಕ್ಕೆ ಸರಿಯಲ್ಲ. ಹಿಂದು ಸಮಾಜ ಬೇಲಿ ಇಲ್ಲದ ಹೊಲವಲ್ಲ. ಸಮಾಜದ ಸುರಕ್ಷತೆಗೆ ಕೈಹಾಕಿದ್ದೇವೆ. ಇದಕ್ಕಾಗಿ ಯಾವ ಬೆಲೆ ತೆರಲು ಸಿದ್ದ ಎಂದು ಘೋಷಿಸಿದರು.

  ಖಾಕಿಗೆ ನಾವು ಗೌರವ ಕೊಡುತ್ತೇವೆ. ಹಾಗೆಂದು ಇದು ನಮ್ಮ ದೌರ್ಬಲ್ಯವಲ್ಲ. ಬಾಗಲಕೋಟೆಯಲ್ಲಿ ಎಂಜಿಜಿ ಎನ್ನುವ ಗುಂಡಾಗಿರಿ ಗುಂಪು ತಲೆ ಎತ್ತಿದೆ. ಅದರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಮೇ 8 ರಂದು ನಡೆದ ಪ್ರಕರಣದಲ್ಲಿ ಸಿಪಿಐ ಹಾಗೂ ಪಿಎಸ್‌ಐ ನಮ್ಮ ಕಾರ್ಯಕರ್ತರನ್ನು ನಿಂದಿಸಿ ಯಾರದ್ದೋ ಕೈಗೊಂಬೆಯಂತೆ ನಡೆದುಕೊಂಡಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದ್ದ ಎಸ್ಪಿ ಅವರು ಸಹ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಾವು ರಾಜ್ಯಪಾಲರಿಗೆ ದೂರು ಕೊಡುತ್ತಿದ್ದೇವೆ ಎಂದು ತಿಳಿಸಿದರು.

  ಸಂಘಟನೆ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಹೇಳುತ್ತಿದ್ದಾರಲ್ಲ, ಇದು ಸರಿನಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಗದೀಶ್ ಕಾರಂತ, ಪೊಲೀಸರು ದಾಖಲಿಸಿರುವ ದೂರಿನಲ್ಲಿ ಈ ಅಂಶವನ್ನು ಉಲ್ಲೇಖಿಸಿಲ್ಲ. ನಾನು ಎಫ್ ಐಆರ್ ನೋಡಿದ್ದೇನೆ ಎಂದು ಸಮರ್ಥಿಸಿಕೊಂಡರು.

  ಘಟನೆ ವಿವರಿಸಿದ ವಿಕ್ರಮ

  ಮೇ 8 ರಂದು ನಡೆದ ಘಟನೆಯಲ್ಲಿ ಪೊಲೀಸರು ಬಂಧಿಸಿದ್ದ ವಿಕ್ರಮ ದೇಶಪಾಂಡೆ, ಅಂದಿನ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳದ್ದೆ ತಪ್ಪಿದೆ. ನಾವು ಹಿಂದುಗಳ ವಿಚಾರವಾಗಿ ಠಾಣೆಗೆ ಹೋಗಿರುತ್ತೇವೆ ವಿನಃ ಬೇರೆ ಕೆಲಸಕ್ಕಲ್ಲ. ಅಂದು ಯಾರೋ ಕಲ್ಲು ತೂರಿದ್ದಾರೆ. ಕುಮಾರಸ್ವಾಮಿ ಹಿರೇಮಠ ಅವರನ್ನು ಟಾರ್ಗೆಟ್ ಮಾಡಿಯೇ ಹೊಡೆದಿದ್ದಾರೆ. ವ್ಯಾನಿನಲ್ಲಿ ಕರೆದುಕೊಂಡು ಹೋಗುವಾಗಿ ತಮ್ಮ ಮೇಲೆಯೂ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದರು. ಪೊಲೀಸ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಅವರು, ಲಾಠಿ, ಬೂಟಿನ ಮೂಲಕ ನಮ್ಮ ಹೋರಾಟ ಹತ್ತಿಕ್ಕಲು ಆಗಲ್ಲ ಎಂದು ಎಚ್ಚರಿಸಿದರು.

  ಸೋಮವಾರ ಪ್ರತಿಭಟನೆ

  ಘಟನೆಯನ್ನು ಖಂಡಿಸಿ ಸೋಮವಾರ (ಮೇ 13) ಬಾಗಲಕೋಟೆ ನಗರಸಭೆ ಬಳಿಯೇ ಹಿಂದು ಸಂಘಟನೆ ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆಂದು ಹಿಂದು ಜಾಗರಣ ವೇದಿಕೆ ಉತ್ತರ ಪ್ರಾಂತ ಸಹ ಸಂಯೋಜಕ ಕಿರಣ ಪವಾಡಶೆಟ್ಟರ್ ತಿಳಿಸಿದರು. ಅಂದು ನಗರದ ವಿವಿಧ ಹಿಂದು ಸಂಘಟನೆಯವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts