More

    ತೌಕ್ತೆ ಚಂಡಮಾರುತಕ್ಕೆ ನಲುಗಿದ ಕರಾವಳಿ

    ಕಾರವಾರ: ಹಿಂದೆಂದೂ ಕಂಡರಿಯದ ಚಂಡಮಾರುತಕ್ಕೆ ಉತ್ತರ ಕನ್ನಡ ಕರಾವಳಿ ನಲುಗಿದೆ. ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತದ ಪರಿಣಾಮ ಸೃಷ್ಟಿಯಾದ ತೌಕ್ತೆ ಚಂಡ ಮಾರುತ ಶನಿವಾರ ಸಾಯಂಕಾಲದಿಂದ ಭಾನುವಾರ ಸಾಯಂಕಾಲದವರೆಗೂ ಅಬ್ಬರಿಸಿತು. ಗಾಳಿ ಇಡೀ ದಿನ ಶರವೇಗದಲ್ಲಿ ಬೀಸಿದ್ದು, ಜನರನ್ನು ಭಯಭೀತಗೊಳಿಸಿದೆ.

    ಸುಯ್ಯನೆ ಬೀಸುವ ಬಿರು ಗಾಳಿಗೆ ಮರಗಳು ಅಲ್ಲಾಡಿ ಉದುರಿ ಬೀಳುವುದು, ಮನೆಗಳ ಹೆಂಚು ಹಾರುವುದನ್ನೊ ನೋಡಿದ ಜನ ಮನೆಯೊಳಗೂ ಇರಲಾರದೇ ಹೊರಗೋಡಿಯೂ ಬರಲಾಗದೇ ತಲ್ಲಣಿಸಿದರು.

    ಮರಗಳು ಅಲ್ಲಾಡಿ ಸೋತಿವೆ. ಅಲೆಗಳು ಆರ್ಭಟಿಸಿ ದಣಿದಿವೆ. ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ. ಮರ ಬಿದ್ದು ವಿದ್ಯುತ್ ಕಂಬಗಳು, ಪರಿವರ್ತಕಗಳು ಧರಾಶಾಹಿಯಾಗಿವೆ. ಅದೆಷ್ಟೋ ಮನೆಗಳಿಗೆ, ನೀರು ನುಗ್ಗಿ, ಮರ ಬಿದ್ದು, ಮೇಲ್ಛಾವಣಿ ಹಾರಿ ಹೋಗಿ ಹಾನಿಯಾಗಿದೆ.

    ವಿದ್ಯುತ್ ಸ್ಥಗಿತ: ಕಾರವಾರದ ಹಬ್ಬುವಾಡ, ಶಿವಾಜಿ ಕಾಲೇಜ್ ಸಮೀಪ, ಸಂಕ್ರಿವಾಡ ಸಮೀಪ ಸೇರಿ ಒಟ್ಟು 14 ವಿದ್ಯುತ್ ಪರಿವರ್ತಕಗಳು ಬಿದ್ದಿದ್ದು, 76 ಕಂಬಗಳು ಮುರಿದಿವೆ. ಶನಿವಾರ ರಾತ್ರಿಯಿಂದಲೇ ವಿದ್ಯುತ್ ಕಡಿತವಾಗಿದ್ದು, ಅದನ್ನು ಸರಿಪಡಿಸಲು ಹೆಸ್ಕಾಂ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ದಿನವಾದರೂ ಬೀಸುತ್ತಿರುವ ಗಾಳಿ, ಆಗಾಗ ಸುರಿಯುತ್ತಿರುವ ಮಳೆ ಕಾರ್ಯಾಚರಣೆಗೆ ಅಡ್ಡಿ ಮಾಡಿದೆ. ಟ್ಯಾಗೋರ್ ಕಡಲ ತೀರದ ಮಯೂರವರ್ಮ ವೇದಿಕೆಯವರೆಗೂ ಸಮುದ್ರದ ನೀರು ಉಕ್ಕಿ ಬಂದಿದೆ. ಮಕ್ಕಳ ಉದ್ಯಾನದ ಪ್ರದೇಶಕ್ಕೆ ನೀರು ನುಗ್ಗಿದೆ. ಬೈತಖೋಲ್​ನಲ್ಲಿ ಸುಮಾರು 6 ಮೀಟರ್ ಆಳದ ದೋಣಿಯ ದಕ್ಕೆಯನ್ನು ಹತ್ತಿ ಸಮುದ್ರದ ನೀರು ಮೇಲೆ ಬಂದಿದೆ. ಮಾಜಾಳಿಯಲ್ಲಿ ತೀರದ ಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ದೇವಬಾಗ,ಮಾಜಾಳಿ ಸೇರಿ ವಿವಿಧೆಡೆ ಸಮುದ್ರ ಕೊರೆತ ವಿಪರೀತವಾಗಿದೆ.

    ಕಳೆದ ಐವತ್ತು ವರ್ಷದ ಅವಧಿಯಲ್ಲಿ ನಾನು ಕಾರವಾರದಲ್ಲಿ ಇಂಥ ಚಂಡ ಮಾರುತ ನೋಡಿಲ್ಲ. ಮಳೆಗಾಲದಲ್ಲಿ ಗಾಳಿ ಬಂದು ಹೋಗುತ್ತಿತ್ತು. ಆದರೆ, ಇಡೀ ದಿನ ಗಾಳಿ ಬೀಸಿದ್ದು, ಇದೇ ಮೊದಲು. ಕರೊನಾ ಅಲೆಯ ನಡುವೆ ಈ ಚಂಡಮಾರುತದ ಅಬ್ಬರ ನೋಡಿ ಭಯಭೀತರಾಗಿದ್ದೇವೆ. | ಧನಂಜಯ ಕದಂ ಕಾರವಾರ ನಿವಾಸಿ

    ಚಲಿಸುತ್ತಿರುವ ರೈಲಿನ ಮೇಲೆ ಬಿದ್ದ ಮರ: ತೌಕ್ತೆ ಚಂಡಮಾರುತದ ಪರಿಣಾಮ ಚಲಿಸುತ್ತಿರುವ ರೈಲಿನ ಮೇಲೆ ಮರ ಮುರಿದು ಬಿದ್ದ ಘಟನೆ ಭಾನುವಾರ ಸಂಭವಿಸಿದೆ. ತ್ರಿವೇಂದ್ರಂನಿಂದ ಖುರ್ಲಾದೆಡೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ನೇತ್ರಾವತಿ ಸ್ಪೆಷಲ್(06346) ರೈಲಿನ ಮೇಲೆ ಕಾರವಾರ-ಮಡಗಾಂವ ನಡುವೆ ಭಾನುವಾರ ಬೆಳಗಿನಜಾವ ಮರ ಬಿದ್ದಿತ್ತು. ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ರೈಲು ನಿಗದಿತ ವೇಳೆಗಿಂತ 40 ನಿಮಿಷ ತಡವಾಗಿ ಸಂಚರಿಸಿದೆ. ಸುಮಾರು 1 ತಾಸು ಕಾಯಾಚರಣೆಯ ಬಳಿಕ ಕೊಂಕಣ ರೈಲ್ವೆ ಮಾರ್ಗವನ್ನು ಸಂಚಾರಕ್ಕೆ ಮುಕ್ತ ಮಾಡಲಾಯಿತು.

    ಹೆಸ್ಕಾಂಗೆ 17.5 ಲಕ್ಷ ಹಾನಿ

    ಶಿರಸಿ: ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಅಬ್ಬರದ ಗಾಳಿಯ ಜತೆ ಮಳೆಯಾಗುತ್ತಿದ್ದು, ಹೆಸ್ಕಾಂಗೆ ಒಂದೇ ದಿನಕ್ಕೆ 17.5 ಲಕ್ಷ ರೂಪಾಯಿ ಹಾನಿಯಾಗಿದೆ. ಶನಿವಾರ ರಾತ್ರಿಯಿಂದ ಆರಂಭಗೊಂಡಿದ್ದ ಗಾಳಿಯ ಜತೆಗಿನ ಮಳೆಗೆ ತಾಲೂಕಿನ ವಿವಿಧೆಡೆ ವಿದ್ಯುತ್ ಟ್ರಾನ್ಸ್​ಫರ್ಮರ್ ಹಾಗೂ ಕಂಬಗಳಿಗೆ ಹಾನಿಯಾಗಿದೆ. ಹಲವು ಕಡೆ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಹಾನಿ ಹೆಚ್ಚಿದೆ. 3 ಟ್ರಾನ್ಸ್ ಫರ್ಮರ್​ಗಳಿಗೆ ಧಕ್ಕೆಯಾಗಿದ್ದು, 87 ಕಂಬಗಳು ಈಗಾಗಲೇ ಧರೆಗುರುಳಿವೆ. ಭಾನುವಾರ ಕೂಡ ನಿರಂತರ ಮಳೆಯಾಗಿದ್ದು, ಹಾನಿಯ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ. ಮನೆಗೆ ಹಾನಿ: ಮಳೆಯಿಂದಾಗಿ ಇಲ್ಲಿನ ದೊಡ್ನಳ್ಳಿ ಪಂಚಾಯಿತಿ ವ್ಯಾಪ್ತಿಯ ಲಂಡಕನ್ಳಿಯಲ್ಲಿ ಸೌಮ್ಯ ಕೆರಿಯಪ್ಪ ಕುಂಬಾರ ಅವರಿಗೆ ಸೇರಿದ ಮನೆ ಸಂಪೂರ್ಣ ಹಾನಿಯಾಗಿದ್ದು, ಸಂತೊಳ್ಳಿಯಲ್ಲಿ ಆನಂದ ಗೌಡ ಎಂಬುವವರಿಗೆ ಸೇರಿದ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸುಟ್ಟು ಕರಕಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts