More

    ನಿವೇಶನ ರಹಿತರ ಆಯ್ಕೆಗೆ ಅಪಸ್ವರ

    ಶಿರಹಟ್ಟಿ: ಐದು ಎಕರೆ ಜಮೀನಿನಲ್ಲಿ ಸಿದ್ಧಪಡಿಸಿದ ನಿವೇಶನ ಹಂಚಿಕೆಗಾಗಿ ಫಲಾನುಭವಿಗಳ ಆಯ್ಕೆ ಪಟ್ಟಿ ವಿಷಯವಾಗಿ ಪಪಂ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

    ಫಲಾನುಭವಿಗಳಿಂದ ಒಟ್ಟು 584 ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 194 ಜನರನ್ನು ಈಗಾಗಲೇ ಆಯ್ಕೆ ಮಾಡಿದ್ದು, ಉಳಿದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಮುಖ್ಯಾಧಿಕಾರಿ ಮಲ್ಲೇಶ ಎಂ. ಸಭೆಗೆ ತಿಳಿಸಿದರು.

    ಇದಕ್ಕೆ ಕಾಂಗ್ರೆಸ್ ಸದಸ್ಯ ಮಂಜುನಾಥ ಘಂಟಿ ಆಕ್ಷೇಪ ವ್ಯಕ್ತಪಡಿಸಿ, ‘ಮಾಜಿ ಶಾಸಕ ದೊಡ್ಡಮನಿ ಅವರ ಅಧಿಕಾರವಧಿಯಲ್ಲಿ ಪಟ್ಟಣದ ನಿವೇಶನ ರಹಿತ ಬಡವರಿಗೆ ಆಶ್ರಯ ನೀಡಲು ಸರ್ಕಾರದಿಂದ 5 ಎಕರೆ ಜಮೀನು ಖರೀದಿಸಿ, ಫಲಾನುಭವಿಗಳ ಆಯ್ಕೆ ಪಟ್ಟಿ ಸಿದ್ಧಡಿಸಲಾಗಿತ್ತು. ಆದರೆ, ಕೆಲವರು ತಮಗೆ ಅನ್ಯಾಯವಾಗಿದೆ ಎಂದು ಕೋರ್ಟ್ ಮೊರೆ ಹೋಗಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಆದರೆ, ನೀವು ನೂತನ ಸದಸ್ಯರ ಗಮನಕ್ಕೆ ತರದೆ ಏಕಪಕ್ಷೀಯವಾಗಿ 194 ಜನರ ಆಯ್ಕೆ ವಿಚಾರ ಹೇಳುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ನೀವು ಸಿದ್ಧ್ದಡಿಸಿದ ಆಯ್ಕೆ ಪಟ್ಟಿ ನೀಡಿದರೆ ನಿಜ ಸಂಗತಿ ತಿಳಿಯುತ್ತದೆ’ ಎಂದು ಆಗ್ರಹಿಸಿದರು. ಇದಕ್ಕೆ ಅಧ್ಯಕ್ಷ ಪರಮೇಶ ಪರಬ, ಉಪಾಧ್ಯಕ್ಷ ಇಸಾಕ್ ಆದ್ರಳ್ಳಿ ಸೇರಿದಂತೆ ಉಳಿದ ಕಾಂಗ್ರೆಸ್ ಸದಸ್ಯರು ಬೆಂಬಲಿಸಿದರು. ಮುಖ್ಯಾಧಿಕಾರಿ ಮಲ್ಲೇಶ ಪಟ್ಟಿ ನೀಡುವುದಾಗಿ ತಿಳಿಸಿದರು.

    ಮಾಗಡಿ ಮತ್ತು ಬೆಳ್ಳಟ್ಟಿ ಮಾರ್ಗದ ದ್ವಿಪಥ ರಸ್ತೆಗಳ ಹೈಮಾಸ್ಟ್ ದೀಪಗಳು ಕೆಟ್ಟು ನಿಂತಿದ್ದು, ಹೊಸ ದೀಪ ಅಳವಡಿಸಬೇಕು ಎಂದು ಸದಸ್ಯರೆಲ್ಲ ಮುಖ್ಯಾಧಿಕಾರಿಯ ಗಮನ ಸೆಳೆದರು.

    ವಾರ್ಡ್ 3 ಮತ್ತು 4ರಲ್ಲಿ ಹೆಚ್ಚಾಗಿ ರೈತರು ವಾಸಿಸುತ್ತಿದ್ದು, ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮೇಗೇರಿ ಓಣಿಯಲ್ಲಿನ ನೀರಿನ ತೊಟ್ಟಿಯ ದುರಸ್ತಿ ಕೈಗೊಳ್ಳಬೇಕು ಎಂದು ನಿಮ್ಮ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸದಸ್ಯ ಫಕೀರೇಶ ರಟ್ಟಿಹಳ್ಳಿ ಅವರು ಮುಖ್ಯಾಧಿಕಾರಿ ಮಲ್ಲೇಶ ಅವರನ್ನು ತರಾಟೆಗೆ ತೆಗೆದುಕೊಂಡರು.

    ಉಪಾಧ್ಯಕ್ಷ ಇಸಾಕ್​ಅಹ್ಮದ್ ಆದ್ರಳ್ಳಿ, ಸದಸ್ಯ ಹೊನ್ನಪ್ಪ ಶಿರಹಟ್ಟಿ, ಸಂದೀಪ ಕಪ್ಪತ್ತನವರ, ಆಶ್ರತ್ ಢಾಲಾಯತ್ ತಮ್ಮ ವಾರ್ಡ್ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಪ.ಪಂ. ಕಿರಿಯ ಇಂಜಿನಿಯರ್ ವಿ.ಪಿ. ಕಾಡೇವಾಲೆ ಸಭೆಯ ನಡವಳಿಕೆ ಮಂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts