More

    18 ತಿಂಗಳು ಮೊಟ್ಟೆಯಿಡುವ ಕೋಳಿಯಂತೆ, ಯಾಮಾರಿದ್ರೆ ಪಂಗನಾಮ ಗ್ಯಾರೆಂಟಿ!

    ಹಾಸನ: ಕೋಳಿಯೊಂದು ನಿರಂತರವಾಗಿ 18 ತಿಂಗಳು ಮೊಟ್ಟೆ ಇಡುತ್ತದೆ ಎಂಬ ಜಾಹೀರಾತಿಗೆ ಮರುಳಾದ ವ್ಯಕ್ತಿ 6,13,674 ರೂ. ಪಂಗನಾಮ ಹಾಕಿಸಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಮೈಸೂರು ಮೂಲದ ಓಮೆಗಾ 3-6 ಎಂಬ ಹೆಸರಿನ ಸಂಸ್ಥೆಯಿಂದ ಮೋಸವಾಗಿದ್ದು ರಾಜ್ಯಾದ್ಯಂತ ಸುಮಾರು 23 ಕಡೆ ಪ್ರಕರಣ ಬೆಳಕಿಗೆ ಬಂದಿದೆ. ಹಣದಾಸೆಗೆ ಜಾಹೀರಾತು ನಂಬಿ ವ್ಯವಹರಿಸಿದ್ದ ಹತ್ತಾರು ಜನರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿಯ ಸದಾಶಿವ ನಗರ ನಿವಾಸಿ ರಾಮ್ ಪ್ರಸಾದ್ 2019ರ ಜನವರಿ 19 ರಂದು ಮೈಸೂರಿನಲ್ಲಿರುವ ಓಮೆಗಾ ಕಚೇರಿಗೆ ತೆರಳಿ ವಿಚಾರಿಸಿದಾಗ ಒಂದು ಕೋಳಿಗೆ ಒಂದು ಸಾವಿರ ಮತ್ತು ಬೋನಿಗೆ 25 ಸಾವಿರ ರೂ. ಪಾವತಿಸಬೇಕು. ಮುಂದಿನ 10 ವರ್ಷಗಳ ವರೆಗೆ ಕೋಳಿ ಬದಲಾಯಿಸಿಕೊಡುತ್ತೇವೆ. ಇದರಿಂದ ಸಾಕಷ್ಟು ಜನರು ಲಾಭ ಗಳಿಸಿದ್ದಾರೆ ಎಂದು ನಂಬಿಸಿದ್ದಾರೆ. ಅವರ ಮಾತಿನ ಮೋಡಿಗೆ ಮರುಳಾದ ರಾಮ್ ಪ್ರಸಾದ್ 6 ಲಕ್ಷ ರೂ. ಪಾವತಿಸಿ ಕೋಳಿಗಳನ್ನು ಖರೀದಿಸಿದ್ದಾರೆ. ಆದರೆ ಕೋಳಿಗಳು ಮೊಟ್ಟೆ ಹಾಕದೆ ಇರುವುದರಿಂದ ಕೆಲ ದಿನಗಳ ಬಳಿಕ ಕಚೇರಿಗೆ ವಿಚಾರಿಸಲು ತೆರಳಿದಾಗ ಅಲ್ಲಿ ಯಾವುದೇ ಕಚೇರಿ ಇಲ್ಲದ್ದರಿಂದ ತಾವು ಮೋಸ ಹೋಗಿದ್ದಾಗಿ ಅರಿತಿದ್ದಾರೆ.

    ಕಂಪನಿ ಮಾಲೀಕ ಪ್ರಮೋದ್, ಸಂಪತ್ ಶೆರಲಿ, ಪ್ರಮೋದ್, ಬೆನ್‌ಸಿನ್, ಅರುಮ್ ರಾಮಚಂದ್ರ, ವಿಷ್ಣುಕುಮಾರ್, ಸುನಿಲ್ ರಾಬಿನ್, ಶೀಲಾ ಹಾಗೂ ಚಂದ್ರಕಲಾ ಎಂಬವರಿಂದ ತನಗೆ ಮೋಸವಾಗಿದ್ದು ನ್ಯಾಯ ದೊರಕಿಸಿಕೊಡಬೇಕೆಂದು ನುಗ್ಗೇಹಳ್ಳಿ ಠಾಣೆಯಲ್ಲಿ ಗುರುವಾರ ದೂರು ಸಲ್ಲಿಸಿದ್ದಾರೆ. ನಂಜನಗೂಡು ಮೂಲದ ಆರೋಪಿಯೊಬ್ಬನನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts