More

    ಏಕಾಂತ ಗೆಲ್ಲಲು ಪುಸ್ತಕವೇ ಅತ್ಯುತ್ತಮ ಸಂಗಾತಿ

    ಏಕಾಂತ ಗೆಲ್ಲಲು ಪುಸ್ತಕವೇ ಅತ್ಯುತ್ತಮ ಸಂಗಾತಿಜಗತ್ತಿನಾದ್ಯಂತ ಕರೊನಾ ಉಂಟುಮಾಡಿದ ತಲ್ಲಣದ ಬಗ್ಗೆ ಕಳೆದೆರಡು ತಿಂಗಳುಗಳಿಂದಲೂ ಪ್ರತಿನಿತ್ಯ ಕೇಳಿ, ನೋಡಿ, ಓದಿ ನಮಗೆಲ್ಲರಿಗೂ ಒಂದು ರೀತಿಯ ‘ಕರೊನಾಹುಚ್ಚು’ ಹಿಡಿದಿದೆ. ಪ್ರತಿಯೊಬ್ಬರೂ ಅನುಭವಿಸಿದ ಇದರ ನೇರ ಪರಿಣಾಮವೆಂದರೆ ಅವರಿವರೆನ್ನದೆ ಎಲ್ಲರಿಗೂ ‘ಗೃಹಬಂಧನ’. ಇಂತಹ ಅನುಭವ ಅಪರೂಪ. ಜಗತ್ತಿನಾದ್ಯಂತ ಮನೆಬಿಟ್ಟು ಯಾರೂ ಹೊರಗೆ ಹೋಗುವಂತಿಲ್ಲ ಎಂಬುದೇ ಹೊಸ ಬಗೆಯ ವಿಶೇಷ ಘಟನೆ. ಇಡೀ ದೇಶದ ಜನರೆಲ್ಲ ಹೀಗೆ ಗೃಹಬಂಧನಕ್ಕೊಳಗಾದ ನಿದರ್ಶನ ಇತಿಹಾಸದಲ್ಲಿ ಕಂಡಂತಿಲ್ಲ. ನಾನು ಕಳೆದ ಶತಮಾನದಲ್ಲಿ ಅಂದರೆ ಇಪ್ಪತ್ತನೇ ಶತಮಾನದ ಕಡೆಯ ದಶಕಗಳಲ್ಲಿ ಕೆಲವು ವಿದೇಶಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುತ್ತಿದ್ದೆ. ಕನ್ನಡವನ್ನು ಇಂಗ್ಲಿಷಿನಲ್ಲಿ ಕಲಿಸುವುದೂ ಒಂದು ವಿಶಿಷ್ಟ ಅನುಭವವೇ! ಮೊದಲಿಗೇ ಎದುರಿಸಿದ ಸಮಸ್ಯೆಯೆಂದರೆ ಉಚ್ಚಾರಣೆಯ ತೊಂದರೆ. ಅವರಿಗೆ ನಮ್ಮ ‘ಳ’ಕಾರವನ್ನು ಉಚ್ಚರಿಸಲು ಸಾಧ್ಯವಾಗುತ್ತಲೇ ಇರಲಿಲ್ಲ. ಏಕೆಂದರೆ ಇಂಗ್ಲೀಷಿನಲ್ಲಿ ‘ಎಲ್’ ಇದೆಯೇ ಹೊರತು ‘ಎಳ್’ ಇಲ್ಲ. ನಾನು ‘ಹೇಳು’ ಎಂದು ಹೇಳಿಕೊಟ್ಟರೆ ಅವರು ಏನು ಮಾಡಿದರೂ ಹೇಳುತ್ತಿರಲಿಲ್ಲ. ‘ಲ’ಕಾರವೇ ಅವರ ಬಾಯಿಯಲ್ಲಿ ಬರುತ್ತಿತ್ತು. ಆದರೆ ನಿಮಗೆ ಆಶ್ಚರ್ಯವಾಗಬಹುದು, ಒಂದು ವರ್ಷದಲ್ಲಿ ಅವರು ಕನ್ನಡ ಓದಲು, ಬರೆಯಲು ಕಲಿತಿದ್ದರು. ಕನ್ನಡದಲ್ಲಿ ಚಂದ ಮಾತನಾಡುತ್ತಿದ್ದರು. ಅವರ ಶ್ರದ್ಧೆ ಅಸಾಮಾನ್ಯ. ವಿದೇಶಿ ವಿದ್ವಾಂಸ ಕಿಟ್ಟೆಲ್ ಇಲ್ಲಿ ಬಂದು ಕನ್ನಡ ಕಲಿತು, ನಮಗೇ ಕನ್ನಡ ನಿಘಂಟನ್ನು ಕೊಟ್ಟು ಹೋಗಲಿಲ್ಲವೇ! ಹೊಸಗನ್ನಡ ಸಾಹಿತ್ಯದ ಆರಂಭದಲ್ಲಿ ವಿದೇಶೀಯರು ಕನ್ನಡಕ್ಕೆ ಕೊಟ್ಟಿರುವ ಕೊಡುಗೆ ಮಹತ್ವದ್ದು. ನಮ್ಮ ಕನ್ನಡಿಗರು, ಇಲ್ಲಿಯೇ ಹುಟ್ಟಿ ಬೆಳೆದವರು ಕನ್ನಡವನ್ನು ತಪ್ಪುತಪ್ಪಾಗಿ ಮಾತನಾಡುತ್ತಾರೆ. ಆ ಬಗ್ಗೆ ಅವರಿಗೆ ನಾಚಿಕೆಯಿಲ್ಲ. ವಸಾಹತುಶಾಹಿಯ ದುಷ್ಪರಿಣಾಮದ ಫಲವನ್ನು ನಾವಿನ್ನೂ ಉಣ್ಣುತ್ತಲೇ ಇದ್ದೇವೆ. ಇರಲಿ, ನಾನು ನನ್ನ ವಿದ್ಯಾರ್ಥಿಗಳ ಬಗ್ಗೆ ಹೇಳುತ್ತಿದ್ದೆ. ಅವರಲ್ಲಿ ನವದಂಪತಿಗಳಿಬ್ಬರಿದ್ದರು. ತರಗತಿಗಳು ಮುಗಿಯುವ ವೇಳೆಗೆ ಅವರು ನಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದರು. ಅವರ ಬದುಕಿನ ಒಂದು ಸಂಗತಿ ನನ್ನ ಮನಸ್ಸನ್ನು ಗಾಢವಾಗಿ ಕಲಕಿತ್ತು. ವಾರ ಪೂರ್ತಿ ಅವರಿಬ್ಬರೂ ಬಿಡುವಿಲ್ಲದೆ ದುಡಿಯುತ್ತಿದ್ದರು. ಜೊತೆಜೊತೆಗೇ ಇದ್ದರೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ‘ಸೋಮವಾರ’ ಮಾತ್ರ ಅವರಿಗೆ ಸಂಪೂರ್ಣ ಬಿಡುವು. ಆ ದಿನ ‘ಅವರಿಬ್ಬರೇ!’ ಯಾರೊಂದಿಗೂ ಬೆರೆಯುತ್ತಿರಲಿಲ್ಲ, ಬೇರೆ ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ. ಆ ದಿನ ಸಂಪೂರ್ಣವಾಗಿ ‘ಅವರದೇ ಜಗತ್ತು’.

    ಇದನ್ನೂ ಓದಿ:  ವಿಶ್ವಾಸಾರ್ಹತೆ ಇಂದಿನ ಬಹು ಮುಖ್ಯ ಮೌಲ್ಯ

    ಈ ‘ಲಾಕ್​ಡೌನ್’ ನನಗೆ ಅದನ್ನು ನೆನಪಿಸಿತು. ನಮ್ಮ ಒತ್ತಡದ ಬದುಕಿನಲ್ಲಿ ನಾವು ‘ಕುಟುಂಬ’ಕ್ಕೆ ನೀಡುವ ಸಮಯ ಅತ್ಯಲ್ಪ. ಕುಟುಂಬದ ಅನುಕೂಲಕ್ಕಾಗಿಯೇ ಎಡೆಬಿಡದೆ ದುಡಿಯುವ ನಾವು ಅವರೊಟ್ಟಿಗೆ ಹೆಚ್ಚು ಕಾಲ ಕಳೆಯುವುದಿಲ್ಲ. ನನ್ನ ಆಪ್ತ ಗೆಳೆಯರಲ್ಲೊಬ್ಬ ವಾಣಿಜ್ಯೋದ್ಯಮಿ. ಲಕ್ಷಗಟ್ಟಲೇ ದುಡಿಯುತ್ತಾನೆ. ಆತನಿಗೆ ಒಂದು ನಿಮಿಷವೂ ಬಿಡುವಿರುವುದಿಲ್ಲ. ನಮ್ಮ ಮನೆಗೆ ಬಂದಾಗಲೂ ಅವನ ಫೋನ್ ಶಬ್ದ ಮಾಡುತ್ತಲೇ ಇರುತ್ತದೆ. ಕಾಲ್ ರಿಸೀವ್ ಮಾಡದಿದ್ದರೆ ಆಗುವ ನಷ್ಟ ಅಪಾರ ಎಂಬುದು ಅವನ ಸಮಜಾಯಿಶಿ. ಆತನ ಹೆಂಡತಿಗೆ ಸಕಲ ಸೌಭಾಗ್ಯಗಳನ್ನೂ ಒದಗಿಸಿಕೊಟ್ಟಿದ್ದಾನೆ. ಆದರೆ ಆಕೆಯ ಪ್ರಾರ್ಥನೆ ಒಂದೇ-‘ನನಗೊಂದಿಷ್ಟು ಸಮಯ ಕೊಡಿ’. ಅದು ಅವನಿಗೆ ಸಾಧ್ಯವಾಗಿಯೇ ಇಲ್ಲ. ಇಂಥವರು ಅನೇಕ ಮಂದಿಯಿದ್ದಾರೆ.

    ಕರೊನಾದ ಪರಿಣಾಮದಿಂದಾದ ‘ಗೃಹಬಂಧನ’ ಅನೇಕರಿಗೆ ಸಾಮಾಜಿಕ ಬದುಕಿನ ಒತ್ತಡದಿಂದ ಕಳೆದುಕೊಂಡಿದ್ದ ವೈಯಕ್ತಿಕ ‘ಸ್ವಂತ’ ಬದುಕನ್ನು ಪರಿಚಯಿಸಿದೆ. ಅದರ ಉಲ್ಲಾಸವನ್ನು ಅನೇಕರು ಅನುಭವಿಸಿದ್ದಾರೆ. ಒತ್ತಡವಿಲ್ಲದ ‘ಬಿಡುವಿನ’ ಮನಃಸ್ಥಿತಿಯಿದೆಯಲ್ಲ, ಅದೊಂದು ಭಾಗ್ಯ. ಆದರೆ ಒಂದೆರಡು ದಿವಸ ಅದು ಚಂದ. ವಾರವಾದರೂ ಅಡ್ಡಿಯಿಲ್ಲ. ಆದರೆ ಹೀಗೆ ತಿಂಗಳಾನುಗಟ್ಟಲೆ ಮನೆಯಲ್ಲಿ ‘ಕೂಡಿಹಾಕಿದರೆ’ ಅದು ವಾಸ್ತವವಾಗಿ ಬಂಧನವೇ! ಗೆಳೆಯರನ್ನು ಭೇಟಿಯಾಗುವಂತಿಲ್ಲ; ಹೊರಗೆ ಅಡ್ಡಾಡಿ ಬೇಸರ ಪರಿಹರಿಸಿಕೊಳ್ಳುವಂತಿಲ್ಲ; ಟಿವಿ ಹಾಕಿದರೆ, ಪತ್ರಿಕೆ ಓದಿದರೂ ಅದೇ ಕರೊನಾ! ಫೋನ್ ಮಾಡೋಣವೆಂದರೂ ಮೊದಲು ಕರೊನಾದ ಎಚ್ಚರಿಕೆಯ ಸಂದೇಶ! ಆ ಸಂದೇಶ ದಾಟಿ ಮಾತನಾಡಿದರೂ ಅಲ್ಲಿಯೂ ಅದೇ ಕರೊನಾದ ಸಲ್ಲಾಪ!

    ಇದನ್ನೂ ಓದಿ: ಸಾಮಯಿಕ: ‘ಇಳೆ ಎಂದರೆ ಬರಿ ಮಣ್ಣಲ್ಲ, ನಮಗೋ ನೋಡುವ ಕಣ್ಣಿಲ್ಲ’

    ಈ ‘ಗೃಹಬಂಧನ’ದ ಅವಧಿಯಲ್ಲಿ ಏನು ಮಾಡುತ್ತೀರಿ ಎಂದು ಕೇಳಿದಾಗ ಬಹಳಷ್ಟು ಜನರು ಹೇಳಿದ ಸಾಮಾನ್ಯ ಉತ್ತರ- ಕುಟುಂಬದ ಜೊತೆ ಸಂತೋಷವಾಗಿ ಕಾಲ ಕಳೆಯುವ ಅವಕಾಶ ಸಿಕ್ಕಿತು, ಆರಾಮವಾಗಿ ಕಾಲ ಕಳೆಯುತ್ತಿದ್ದೇವೆ ಎಂಬುದು. ಗಂಡಸರಂತೂ ತಮ್ಮ ಮನೆಯಲ್ಲಿ ತಾವೇ ಅಡುಗೆ ಮಾಡಿದ್ದು, ಗೃಹಕೃತ್ಯದಲ್ಲಿ ಸಹಾಯ ಮಾಡಿದ್ದು ಇವನ್ನೆಲ್ಲ ವಿಶೇಷವೆಂಬಂತೆ ಬಣ್ಣಿಸಿದರು. ಪುರುಷಪ್ರಧಾನ ಸಮಾಜದಲ್ಲಿ ಗಂಡಸು ಗೃಹಕೃತ್ಯದ ಕೆಲಸ ಮಾಡುವುದು ವಿಶೇಷವೆಂಬಂತೆ ಬಣ್ಣಿಸಲ್ಪಡುವುದೇ ನಮ್ಮ ಕಾಲದ ಒಂದು ಐರನಿ. ಇದು ದಿನನಿತ್ಯದ ಸಹಜ ಸಂಗತಿಯಾಗಬೇಕು. ಮನೆ ಸರಿತೂಗಿಸಲು ಹೆಣ್ಣು ಹೊರಜಗತ್ತಿನಲ್ಲಿ ಗಂಡಸಿಗೆ ಸಮನಾಗಿ ದುಡಿಯುತ್ತಿರುವಾಗ ಗಂಡಸು ಏಕೆ ಗೃಹಕೃತ್ಯದಲ್ಲಿ ನೆರವು ನೀಡಬಾರದು? ಇನ್ನು ಕೆಲವರು ಮನೆಮಂದಿಯೆಲ್ಲ ಸೇರಿ ಮನೆಯೊಳಗಡೆಯೇ ಆಡುವ ಹಳೆಯ ಆಟಗಳಾದ ಚದುರಂಗ(ಪಗಡೆ), ಈಗ ಅದು ಚೆಸ್ ರೂಪ ತಾಳಿದೆ, ಚೌಕಾಬಾರ, ಅಳಗುಳಿಮನೆ, ಹುಲಿಕಲ್ಲು, ಕವಡೆ ಮೊದಲಾದ ಆಟಗಳನ್ನು ಆಡಿದ್ದನ್ನು ನೆನಪಿಸಿಕೊಂಡರು. ತೋರಿಸಿದ್ದನ್ನೇ ತೋರಿಸುವ, ಹೇಳಿದ್ದನ್ನೇ ಬೇರೆ ಬೇರೆ ಮಾತುಗಳಲ್ಲಿ ಹೇಳುವ ಟಿವಿ ಅಬ್ಬರದ ಬಗ್ಗೆ ಹಲವರು ದೂರಿದರೂ ಅದಕ್ಕೆ ಅಂಟಿಕೊಳ್ಳುವುದನ್ನು ಬಿಡಲಿಲ್ಲ.

    ದಿನ ಕಳೆದಂತೆ ಹಲವರಿಗೆ ‘ಗೃಹಬಂಧನ’ ನಿಜಾರ್ಥದಲ್ಲಿ ಬಂಧನವೇ ಆಗಿ ಬದುಕು ನೀರಸವೆನ್ನಿಸತೊಡಗಿತು. ಆದರೆ ಅನಿವಾರ್ಯ, ಹೊರಹೋಗುವಂತಿಲ್ಲ. ಈ ಹೊತ್ತಿನಲ್ಲಿ ನನ್ನ ಅನೇಕ ಪರಿಚಿತರು ಮನಸ್ಸಿನ ಉಲ್ಲಾಸವನ್ನು ಕಾಯ್ದುಕೊಳ್ಳಲು ಕಂಡುಕೊಂಡ ಉಪಾಯ- ಪುಸ್ತಕಗಳ ಓದು. ತಾವು ಸಂಗ್ರಹಿಸಿದ್ದ, ಓದಲೇಬೇಕೆಂದು ತಂದಿರಿಸಿಕೊಂಡಿದ್ದ ಪುಸ್ತಕಗಳನ್ನು ಓದುವ ಮೂಲಕ ಅವರು ಹೊಸ ಜಗತ್ತೊಂದಕ್ಕೆ ಪ್ರವೇಶ ಪಡೆದರು. ಒಮ್ಮೆ ಈ ಜಗತ್ತಿಗೆ ಪ್ರವೇಶ ಪಡೆದವರು ಮತ್ತೆ ಹಿಂತಿರುಗಿ ನೋಡುವುದಿಲ್ಲ. ಒಳ್ಳೆಯ ಪುಸ್ತಕಗಳ ಓದಿನ ಬಗ್ಗೆ ಪುತಿನ ಹೇಳುತ್ತಿದ್ದ ಮಾತುಗಳು ನೆನಪಾಗುತ್ತಿವೆ. ಸಾಮಾನ್ಯವಾಗಿ ಈಜು ಬಾರದವರಿಗೆ ನೀರು ಕಂಡರೆ ಭಯ. ಮೊದಲು ಈಜು ಕಲಿಯುವಾಗ ನೀರಿಗಿಳಿಯುವುದೆಂದರೆ ಆತಂಕ. ಯಾರಾದರೂ ಅವರನ್ನು ಬಲವಂತವಾಗಿ ನೀರಿಗೆ ತಳ್ಳಬೇಕು, ಇಲ್ಲದಿದ್ದರೆ ಅವರಾಗಿಯೇ ಇಳಿಯಲು ಹಿಂದುಮುಂದು ನೋಡುತ್ತಾರೆ. ಆದರೆ ಒಮ್ಮೆ ಈಜು ಕಲಿತನಂತರ ನೀರಿಗಿಳಿದವರು ಹೊರಬರಲು ಇಷ್ಟಪಡುವುದೇ ಇಲ್ಲ. ಅಲ್ಲಿಯ ಉಲ್ಲಾಸವೇ ಬೇರೆ! ಒಳ್ಳೆಯ ಪುಸ್ತಕಗಳ ಓದುವಿಕೆಯೂ ಅಂತೆಯೇ! ಮೊದಮೊದಲು ಓದುವುದು ಕೆಲವರಿಗೆ ಪ್ರಯಾಸವೆನ್ನಿಸಬಹುದು. ಆದರೆ ಒಮ್ಮೆ ಓದಿನ ರುಚಿ ಹತ್ತಿದರೆ ಆಮೇಲೆ ಅದರಿಂದ ಹೊರಬರುವುದೇ ಕಷ್ಟ. ನಮ್ಮ ಮನೆಯಲ್ಲಿ ಎಲ್ಲರೂ ಈ ಜಾತಿಗೆ ಸೇರಿದವರೇ! ಏಳು ವರ್ಷದ ನನ್ನ ಮೊಮ್ಮಗಳು ಆದ್ಯಳನ್ನು ಈ ಅವಧಿಯಲ್ಲಿ ಮನೆಯಲ್ಲೆ ಕುಳಿತು ಬೋರ್ ಆಗುತ್ತಿಲ್ಲವಾ ಎಂದು ಕೇಳಿದೆ. ಅದಕ್ಕವಳು ‘ಇಲ್ಲ, ಪುಸ್ತಕಗಳಿವೆಯಲ್ಲ’ ಎಂದು ಸಹಜವಾಗಿ ಉತ್ತರಿಸಿದಳು.

    ಕಾಲಯಾಪನೆಗೆ ಟಿವಿ ಉಪಯುಕ್ತ ಸಾಧನ ಎಂಬುದು ನಿಜ. ಮೊಬೈಲ್ ಬಗ್ಗೆ ಹೇಳುವಂತೆಯೇ ಇಲ್ಲ, ಬಿಡಿ. ಹಲವಾರು ಟಿವಿ ಚಾನೆಲ್​ಗಳಿವೆ ಎಂದರೂ ಅವರು ಕೊಟ್ಟಿದ್ದನ್ನು ನಾವು ವೀಕ್ಷಿಸಬೇಕೇ ಹೊರತು ನಮಗೇ ಆಯ್ಕೆಯಿಲ್ಲ. ದೃಶ್ಯ ಮಾಧ್ಯಮಗಳ ಮಿತಿ ಇದು. ಜೊತೆಗೆ ಅವುಗಳಲ್ಲಿ ಬಹುಪಾಲು ಸೃಜನಶೀಲವಾಗಿಲ್ಲದಿರುವುದರಿಂದ ಒಮ್ಮೆ ನೋಡಿದರೆ ಮತ್ತೆ ನೋಡಬೇಕೆನ್ನಿಸುವುದಿಲ್ಲ. ಅರ್ಥದ ಭಿನ್ನ ಪದರುಗಳೇ ಇರುವುದಿಲ್ಲ. ಕುತೂಹಲವೂ ಹುಸಿಯಾಗಿದ್ದು, ನಿಮ್ಮ ಉದ್ರೇಕಿಸಲು ಮಾತ್ರ ಸೃಷ್ಟಿಯಾಗಿರುತ್ತದೆ. ಆದರೆ ಪರಿಣಾಮ ನಮಗೆ ಗೊತ್ತಿದ್ದು ಒಂದು ನಿರ್ದಿಷ್ಟ ಸಿದ್ಧಮಾದರಿ ಅಲ್ಲಿರುತ್ತದೆ. ಜನಪ್ರಿಯ ಕೃತಿಗಳ ರೀತಿಯೇ ಹೀಗೆ. ಇಲ್ಲೆಲ್ಲ ಮನಸ್ಸನ್ನು ಉದ್ರೇಕಿಸಿ ತಣಿಸುವ ಹುನ್ನಾರ ಇರುತ್ತದೆಯೇ ಹೊರತು ನಮ್ಮನ್ನು ಚಿಂತನೆಗೆ ಹಚ್ಚುವ ಯಾವ ಪ್ರಯತ್ನವೂ ಇರುವುದಿಲ್ಲ. ಹೀಗಾಗಿ ಒಮ್ಮೆ ನೋಡಲು ಚೆನ್ನ. ಮತ್ತೆ ಮತ್ತೆ ನೋಡುವ ಉತ್ಸಾಹ ಮೂಡುವುದಿಲ್ಲ. ಇಲ್ಲಿಯೂ ಶ್ರೇಷ್ಠ ಕಲಾಕೃತಿಗಳ ಮಾತು ಬೇರೆ. ಅವು ಒಳ್ಳೆಯ ಪುಸ್ತಕಗಳಂತೆ. ಒಂದು ಒಳ್ಳೆಯ ಪುಸ್ತಕ ಪ್ರತಿ ಸಲ ಓದಿದಾಗಲೂ ಹೊಸ ಹೊಸ ಅರ್ಥ ತೆರೆದುಕೊಳ್ಳುತ್ತಿರುತ್ತದೆ. ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳನ್ನೇ ತೆಗೆದುಕೊಳ್ಳಿ. ಚಿಕ್ಕಂದಿನಲ್ಲಿ ನಮಗೆ ಅಲ್ಲಿಯ ಬಾಲ್ಯಜೀವನದ ತುಂಟಾಟಗಳು, ಕಪಿಚೇಷ್ಟೆಗಳು, ಮಕ್ಕಳ ಮುಗ್ಧ ನಡವಳಿಕೆ ಮುಖ್ಯವಾದರೆ, ಹರಯದಲ್ಲಿ ಅಭಿಮನ್ಯುವಿನಂತಹ ವೀರಬಾಲಕ ನಮ್ಮ ಗಮನ ಸೆಳೆಯುತ್ತಾನೆ. ನಂತರದ ನಡುವಯಸ್ಸಿನ ಹಂತದಲ್ಲಿ ದಾಂಪತ್ಯದ ಬಿರುಕುಗಳು, ಜೀವನದಲ್ಲಿ ಬರುವ ಸವಾಲುಗಳು, ಬದುಕನ್ನು ಕಟ್ಟಿಕೊಳ್ಳುವ ವಿವೇಕ ನಮಗೆ ಆಸಕ್ತಿ ಮೂಡಿಸುತ್ತದೆ. ಇಳಿವಯಸ್ಸಿನಲ್ಲಿ ಭಗವದ್ಗೀತೆಯೇ ಭಾರತದ ಸಾರವೆನ್ನಿಸತೊಡಗುತ್ತದೆ. ಸಾವಿರಾರು ವರ್ಷಗಳಿಂದ ಈ ಕೃತಿಗಳು ವಿವಿಧ ತಲೆಮಾರಿನ ಜನರ ಆಸಕ್ತಿಯನ್ನು ನಿರಂತರ ಕಾಪಾಡಿಕೊಂಡು ಬಂದಿರುವುದು ಅವುಗಳ ಮಹತ್ವವನ್ನು ಸೂಚಿಸುತ್ತದೆ. ಇತ್ತೀಚೆಗೆ ನನ್ನ ತಂತ್ರಜ್ಞಾನ ಪರಿಣತಿಯ ಗೆಳೆಯನೊಬ್ಬ ಶಸ್ತ್ರಾಸ್ತ್ರಗಳನ್ನು ಕುರಿತು ಹೀಗೆ ವ್ಯಾಖ್ಯಾನಿಸುತ್ತಿದ್ದ- ‘ಶಸ್ತ್ರವೆಂದರೆ ಹಾರ್ಡ್​ವೇರ್; ಅಸ್ತ್ರವೆಂದರೆ ಸಾಫ್ಟ್​ವೇರ್; ಯಾವುದೇ ಅಸ್ತ್ರವನ್ನು ಒಬ್ಬ ವೀರ ಬಳಸಬೇಕೆಂದರೆ ಅವನಿಗೆ ಅದರ ಪ್ರಯೋಗದ ಮಂತ್ರ ಗೊತ್ತಿರಬೇಕು. ಮಂತ್ರವೆಂದರೆ ಕೋಡ್. ಮಂತ್ರ ಗೊತ್ತಿಲ್ಲದಿದ್ದರೆ ಆ ಅಸ್ತ್ರ ನಿಷ್ಪ್ರಯೋಜಕ. ಸರ್ಪಾಸ್ತ್ರ, ವರುಣಾಸ್ತ್ರ, ಆಗ್ನೇಯಾಸ್ತ್ರ ಇವುಗಳಿಗೆಲ್ಲ ಅವುಗಳಿಗೇ ಆದ ‘ಕೋಡ್’ ಇದೆ. ಅದು ಗೊತ್ತಿದ್ದರೆ ಮಾತ್ರ ಬಳಸಲು ಸಾಧ್ಯ. ನಮ್ಮ ಇವತ್ತಿನ ತಂತ್ರಜ್ಞಾನದಲ್ಲೂ ಇದೇ ಸೂತ್ರ’ ಎಂದು ವಿವರಿಸುತ್ತಿದ್ದ. ಇದರರ್ಥ ನಮ್ಮ ನಮ್ಮ ಕಾಲಕ್ಕೆ ಭಿನ್ನ ಭಿನ್ನ ಅರ್ಥಗಳು ಅಲ್ಲಿ ಹೊಳೆಯುತ್ತಿರುತ್ತವೆ ಎಂದಷ್ಟೇ! ಹೀಗೆ ವಿವರಿಸುವಾಗ ಆ ಕಾಲಕ್ಕೆ ಇವತ್ತಿನ ತಂತ್ರಜ್ಞಾನ ಗೊತ್ತಿತ್ತು ಎಂದಲ್ಲ. ಒಂದು ಶ್ರೇಷ್ಠ ಕೃತಿ ಸಮಕಾಲೀನವಾಗಿರುವಂತೆ, ಸಾರ್ವಕಾಲಿಕವೂ ಆಗಿರುತ್ತದೆ. ಮೊದಲು ಒಂದು ಕೃತಿಯಲ್ಲಿ ಅದರ ಲೇಖಕ ಏನು ಹೇಳುತ್ತಿದ್ದಾನೆ ಎಂದು ಗುರ್ತಿಸುತ್ತಿದ್ದೆವು. ನಂತರದಲ್ಲಿ ‘ಟ್ರಸ್ಟ್ ದ ಟೇಲ್, ನಾಟ್ ದ ಆಥರ್’ (‘ಕೃತಿಯನ್ನು ನಂಬು, ಕೃತಿಕಾರನನ್ನಲ್ಲ’) ಎಂಬ ನಿಲವು ಮುಖ್ಯವಾಯಿತು. ಈಗ ಈ ನಿಲವೂ ಹಿಂದೆ ಸರಿದು ಕೃತಿಯ ಅರ್ಥ ಲೇಖಕನಲ್ಲೂ ಇಲ್ಲ, ಕೃತಿಯಲ್ಲೂ ಇಲ್ಲ, ಓದುಗನಲ್ಲಿದೆ ಎಂಬ ಹಂತ ತಲುಪಿದ್ದೇವೆ. ಇದನ್ನೇ ‘ರೀಡರ್ಸ್ ರೆಸ್ಪಾನ್ಸ್ ಥಿಯರಿ’ ಎನ್ನುತ್ತೇವೆ. ಒಂದು ಕೃತಿ ಓದಿದಾಗ ಒಬ್ಬೊಬ್ಬರಿಗೆ ಒಂದು ಅರ್ಥ ಸ್ಪುರಿಸಬಹುದು. ಆ ಎಲ್ಲ ಅರ್ಥಗಳೂ ಸಂಗತವೇ! ಅವರವರ ಗ್ರಹಿಕೆಗೆ ತಕ್ಕಂತೆ! ಶ್ರೇಷ್ಠ ಕೃತಿಯ ಶಕ್ತಿಯಿರುವುದೇ ಇಲ್ಲಿ.

    ಅಲ್ಲದೆ ನಮ್ಮ ಇಡೀ ಜೀವಮಾನ ಓದಿದರೂ ಮುಗಿಯದಷ್ಟು ಗ್ರಂಥರಾಶಿ ನಮ್ಮ ಜೊತೆಗಿದೆ. ಪುಸ್ತಕಗಳ ವೈವಿಧ್ಯವೂ ಬೆರಗು ಮೂಡಿಸುತ್ತದೆ. ಎಲ್ಲ ವಯೋಮಾನದವರಿಗೆ, ಭಿನ್ನ ಭಿನ್ನ ಆಸಕ್ತಿಯ ವ್ಯಕ್ತಿಗಳಿಗೆ ಬೇಕಾದ ಪುಸ್ತಕಗಳು ನಮ್ಮಲ್ಲಿವೆ. ಮನುಷ್ಯನ ಬಹು ದೊಡ್ಡ ಸಮಸ್ಯೆಯೆಂದರೆ ಏಕಾಂತ. ನನ್ನ ಗೆಳೆಯರ ಮಗನೊಬ್ಬ ತಾರುಣ್ಯ ಸಹಜ ಉತ್ಸಾಹದಿಂದ ಅಡ್ಡಾಡಿಕೊಂಡಿದ್ದ. ಆತನಿಗೆ ಕ್ವಾರಂಟೈನ್​ಗೆ ಒಳಗಾಗುವ ಅನಿವಾರ್ಯತೆ ಒದಗಿಬಂತು. ಆ ಏಕಾಂತ ಬದುಕನ್ನು ಎದುರಿಸಲಾರದೆ ಆತ ಮಗುವಿನಂತೆ ಅಳಲು ಆರಂಭಿಸಿದ. ಕರೊನಾದ ಸಾಮಾಜಿಕ, ಆರ್ಥಿಕ, ಸಾಮಾಜಿಕ ಸಂಗತಿಗಳ ಬಗ್ಗೆ ಹಾಗೇ ಅದು ಬೀರಿರುವ ಮಾನಸಿಕ ಆಘಾತದ ಬಗ್ಗೆಯೂ ನಾವು ಚಿಂತಿಸಬೇಕಾಗಿದೆ. ಕ್ವಾರಂಟೈನ್ ಎನ್ನುವುದು ದೈಹಿಕವಾಗಿ ಪ್ರತ್ಯೇಕವಾಗಿರುವುದು ಮಾತ್ರವಲ್ಲ, ಮಾನಸಿಕವಾಗಿಯೂ ಏಕಾಂತವಾಗಿರುವುದು. ಏಕಾಂತವನ್ನು ಎದುರಿಸುವುದು ಸುಲಭವಲ್ಲ. ಸಂಘಜೀವಿಯಾದ ಮನುಷ್ಯನಿಗೆ ಏಕಾಂತವನ್ನು ಗೆಲ್ಲಲು ಬಹುಶಃ ಪುಸ್ತಕವೇ ಅತ್ಯುತ್ತಮ ಸಂಗಾತಿಯೆಂಬುದು ಸಾರ್ವಕಾಲಿಕ ಸತ್ಯ.

    ಧರೆ ಹತ್ತಿ ಉರಿದೊಡೆ ನಿಲಬಹುದೆ? ಇನ್ನಾರಿಗೆ ದೂರುವೆನಯ್ಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts