More

    ಬಿಜೆಪಿ ಸರ್ಕಾರ ಮಹಿಳೆಯರನ್ನು ಕೇವಲ ಮತಕ್ಕೆ ಸೀಮಿತಗೊಳಿಸಿಲ್ಲ: ಬಿ.ವೈ.ರಾಘವೇಂದ್ರ

    ಭದ್ರಾವತಿ: ಬಡವರು ಹಾಗೂ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಸಹಕಾರಿಯಾದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸಹಕರಿಸಿ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.

    ಬಿಜೆಪಿ ಕೂಡ್ಲಿಗೆರೆ ವಹಾಶಕ್ತಿ ಕೇಂದ್ರದಿಂದ ಶ್ರೀರಾಮನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ಸಾಮಾನ್ಯವಾದ ಚುನಾವಣೆಯಲ್ಲ. ದೇಶದ ಭದ್ರವಾದ ಭವಿಷ್ಯ, ಧರ್ಮದ ಉಳಿವು, ನೆಮ್ಮದಿಯ ಜೀವನ, ಆಂತರಿಕ ದುಷ್ಟಶಕ್ತಿಗಳ ದಮನಕ್ಕಾಗಿ ನಡೆಯುತ್ತಿರುವ ಚುನಾವಣೆಯಾಗಿದೆ. ಇದಕ್ಕಾಗಿ ನರೇಂದ್ರ ಮೋದಿ ಗೆಲ್ಲಲೇ ಬೇಕಾಗಿದೆ ಎಂದರು.
    ಮೋದಿ ಅವರು ಪ್ರಧಾನ ಮಂತ್ರಿಯಾದ ಮೇಲೆ ಮಹಿಳೆಯರಿಗೆ ಇದುವರೆಗೂ ಆಡಳಿತ ನಡೆಸಿದ ಬೇರೆ ಯಾವ ಪಕ್ಷದವರು ನೀಡದಷ್ಟು ಭರಪೂರ ಕೊಡುಗೆಗಳನ್ನು ನೀಡಿದ್ದಾರೆ. ಜತೆಗೆ ಅವರ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಉತ್ತಮವಾದ ಅಡಿಪಾಯ ಹಾಕಿದ್ದಾರೆ. ಮಹಿಳೆಯರನ್ನು ಕೇವಲ ಮತ ಹಾಕಲು ಮಾತ್ರ ಸೀಮಿತಗೊಳಿಸಿಲ್ಲ. ರಾಜಕೀಯ, ರಕ್ಷಣೆ, ತಂತ್ರಜ್ಞಾನ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಸೂಕ್ತವಾದ ಅವಕಾಶ, ಸ್ಥಾನ ಮಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ರಾಜಕೀಯದಲ್ಲಿ ಮೀಸಲಾತಿ ನೀಡಿದ ಪರಿಣಾಮ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.
    ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ತಾಯಂದಿರು ಸಾಧನೆ ಮಾಡಿದ್ದಾರೆ. ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆ ಮೂಲಕ ಹೆಣ್ಣು ಮಕ್ಕಳಿಗೆ ವಿಶೇಷ ಸೌಲಭ್ಯ ನೀಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆ, ಪೋಷಣ್ ಅಭಿಯಾನ್, ಮಾತೃವಂದನೆ, ಮಹಿಳೆಯರಿಗೆ ಸುರಕ್ಷತೆಯ ಕಾನೂನು ಸಬಲೀಕರಣ, ಜಿಲ್ಲೆಯಲ್ಲಿ 12 ಕೋಟಿ ಶೌಚಾಲಯಗಳ ನಿರ್ಮಾಣ, ಉಜ್ವಲ ಯೋಜನೆಯಿಂದ ಹೊಗೆ ಮುಕ್ತ ಆರೋಗ್ಯದ ಭಾಗ್ಯ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕೇಂದ್ರದ ಕೊಡುಗೆಗಳಾಗಿವೆ ಎಂದರು.
    ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಕೈಗಾರಿಕೆಗಳ ಅಭಿವೃದ್ಧಿಯ ಬಗ್ಗೆ ಪ್ರಾಮಾಣಿಕವಾದ ಪ್ರಯತ್ನವನ್ನು ಯಾರೂ ಮಾಡಲಿಲ್ಲ. ಆದರೆ ಈಗ ನಾನು ಕೈಗಾರಿಕೆಗಳನ್ನು ತಂದರೆ ಅದರಲ್ಲಿ ನನ್ನ ಷೇರು ಇದೆ ಎಂದು ಸುಳ್ಳೆ ಆರೋಪಗಳನ್ನು ಮಾಡುತ್ತಾರೆ. ಕೈಗಾರಿಕೆಗಳನ್ನು ತರಲಿಲ್ಲ, ತಂದರೂ ಸಹಿಸುವುದಿಲ್ಲ. ತಾವೂ ಅಭಿವೃದ್ಧಿಯನ್ನು ಮಾಡುವುದಿಲ್ಲ, ಮಾಡುವುದನ್ನು ಸಹ ಸಹಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀವು ಇಲ್ಲಿಂದಲ್ಲೇ ಆಶೀರ್ವಾದ ಮಾಡಬೇಕು ಎಂದಾದಲ್ಲಿ ನೀವುಗಳು ಇಲ್ಲಿ ಸ್ಪರ್ಧಿಸಿರುವ ರಾಘಣ್ಣನ ಕಮಲದ ಗುರುತಿಗೆ ಮತ ಹಾಕಬೇಕು. ಏ.18ರ ಗುರುವಾರ ಬೆಳಗ್ಗೆ 11ಕ್ಕೆ ಶಿವಮೊಗ್ಗದಲ್ಲಿ ಸಹಸ್ರಾರು ಕಾರ್ಯಕರ್ತರ ಮೆರವಣಿಗೆಯೊಂದಿಗೆ ನಾಮಪತ್ರವನ್ನು ಸಲ್ಲಿಸಲಾಗುವುದು. ಆ ಸಮಯದಲ್ಲಿ ಭದ್ರಾವತಿಯಿಂದ ಮಹಿಳಾ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.
    ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ, ತಾಲೂಕು ಅಧ್ಯಕ್ಷೆ ಸರಸ್ವತಿ, ಜಿಲ್ಲಾಧ್ಯಕ್ಷೆ ಗಾಯತ್ರಿ ದೇವಿ, ಪ್ರಧಾನ ಕಾರ್ಯದರ್ಶಿ ಮಂಗಳಾ, ಪ್ರಮುಖರಾದ ಜಿ.ಧರ್ಮಪ್ರಸಾದ್, ಶೋಭಾ, ಸುಲೋಚನಾ, ಜೆಡಿಎಸ್‌ನ ಕರುಣಾಮೂರ್ತಿ, ಮಂಜುಳಾ, ಅನುಪಮಾ, ಅನಿತಾ, ಶೋಭಾ ಪಾಟೀಲ್, ಅನ್ನಪೂರ್ಣಾ, ಗೌರಮ್ಮ, ಕವಿತಾ ರಾವ್, ಆಶಾ, ಚನ್ನೇಶ್, ಅಣ್ಣಪ್ಪ, ಮಹಾಲಕ್ಷ್ಮೀ, ಗೀತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts