More

    ಮಾವಿನ ಹಣ್ಣಿಗೆ ಬೇಕು ಸೂಕ್ತ ಮಾರುಕಟ್ಟೆ

    ಗಿರೀಶ ದೇಶಪಾಂಡೆ ಹಾನಗಲ್ಲ

    ಮಾವಿನ ಹಣ್ಣುಗಳ ರುಚಿ ಹಾಗೂ ಉತ್ಕೃಷ್ಟತೆಗೆ ಹಾನಗಲ್ಲ ತಾಲೂಕು ದೇಶಾದ್ಯಂತ ಹೆಸರುಗಳಿಸಿದೆ. ಆದರೆ, ಕರೊನಾ ಹಿನ್ನೆಲೆಯಲ್ಲಿ ತಾಲೂಕಿನ ಬೆಳೆಗಾರರು ಕಳೆದ ಮೂರು ವರ್ಷಗಳಿಂದ ಆರ್ಥಿಕವಾಗಿ ನಲುಗಿ ಹೋಗಿದ್ದಾರೆ. ಈ ವರ್ಷ ಫಸಲು ಕೈ ಸೇರುವಷ್ಟರಲ್ಲಿ ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆ ಮಾರುಕಟ್ಟೆ ಸೃಷ್ಟಿಸಿ ರೈತರ ನೆರವಿಗೆ ಧಾವಿಸಬೇಕಿದೆ.

    ಜಿಲ್ಲೆಯಲ್ಲಿ ಒಟ್ಟು 5800 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಪೈಕಿ ಅತಿ ಹೆಚ್ಚು ಮಾವು ಬೆಳೆ ಕ್ಷೇತ್ರ ಹೊಂದಿರುವ ಹಾನಗಲ್ಲ ತಾಲೂಕಿನ 3394 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 27 ಸಾವಿರ ಟನ್ ಮಾವು ಬೆಳೆಯಲ್ಪಡುತ್ತದೆ. ಪ್ರತಿ ವರ್ಷ ಹಾನಗಲ್ಲಿನಿಂದ ಮಾವಿನ ಹಣ್ಣುಗಳು ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೋಲ್ಕತ್ತಾ, ದೆಹಲಿಗೆ ರವಾನೆಯಾಗುತ್ತವೆ. ಆದರೆ, ಕೋವಿಡ್ ಸಮಸ್ಯೆಯಿಂದಾಗಿ ರಾಜ್ಯದ ಹೊರಗಿನ ಮಾರುಕಟ್ಟೆಗಳಿಗೆ ರವಾನೆ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಇಲ್ಲಿಂದ ಮುಂಬೈ ಮಾರುಕಟ್ಟೆಗೆ ರವಾನೆಯಾಗುವ ಮಾವಿನ ಹಣ್ಣು, ಬೇರೆ ಬೇರೆ ಬ್ರ್ಯಾಂಡ್​ಗಳ ಹೆಸರಿನಲ್ಲಿ ಮತ್ತೆ ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಿಗೆ ಲಗ್ಗೆ ಇಡುತ್ತದೆ.

    ಮಾವು ಫಸಲು ವಿಳಂಬ: ಈ ವರ್ಷ ನವೆಂಬರ್ ಮಾಸಾಂತ್ಯದವರೆಗೆ ಮಳೆ ಸುರಿದಿದ್ದರಿಂದ ಮಾವು ಹೂ ಬಿಡುವ ಸಮಯದಲ್ಲಿ ವಿಳಂಬವಾಗಿದೆ. ನವೆಂಬರ್​ನಲ್ಲಿ ಹೂ ಬಿಡಬೇಕಿದ್ದ ಗಿಡಗಳು ಡಿಸೆಂಬರ್ ಕೊನೆಯಲ್ಲಿ ಹೂ ಬಿಡಲಾರಂಭಿಸಿದವು. ಹೀಗಾಗಿ, ಫಸಲು ಕೂಡ ಏಪ್ರಿಲ್ ಬದಲು ಮೇ ತಿಂಗಳಲ್ಲಿ ಕೊಯ್ಲಿಗೆ ಬರಲಿದೆ. ಉತ್ತರ ಕರ್ನಾಟಕದಲ್ಲಿ ಗ್ರಾಹಕರು ಜೂನ್ ಮುಂಗಾರು ಆರಂಭವಾದರೆ ಮಾವಿನ ಹಣ್ಣುಗಳನ್ನು ಖರೀದಿಸುವುದಿಲ್ಲ. ಆದರೆ, ಮೇ ತಿಂಗಳಲ್ಲಿ ಇಷ್ಟೊಂದು ಪ್ರಮಾಣದ ಫಸಲನ್ನು ಕೊಯ್ಲು ಮಾಡುವುದು, ಹಣ್ಣು ಮಾಡುವುದು, ಮಾರುಕಟ್ಟೆಗೆ ಸಾಗಿಸುವುದು ಕಷ್ಟವಾಗಲಿದೆ.

    ಸರ್ಕಾರ ಎಚ್ಚೆತ್ತುಕೊಳ್ಳಲಿ: ಜಿಲ್ಲೆಯಲ್ಲಿ ಮಾವು ಸಂಸ್ಕರಣೆ ಘಟಕ, ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಇಲ್ಲದ್ದರಿಂದ ರೈತರು ಮಾವು ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಗಿಡಗಳನ್ನು ಕಟಾವು ಮಾಡಿ ಶುಂಠಿ, ಅಡಕೆ ಬೆಳೆಗಳತ್ತ ವಾಲುತ್ತಿದ್ದಾರೆ. ಹಾನಗಲ್ಲ ಹಿಂದೊಮ್ಮೆ ಭತ್ತದ ಕಣಜ ಎಂಬ ಖ್ಯಾತಿ ಹೊಂದಿತ್ತು. ಇತ್ತೀಚೆಗೆ ಆಧುನಿಕ ಅಕ್ಕಿ ಗಿರಣಿಗಳು ಸ್ಥಾಪನೆಯಾದ ನಂತರ ಹಾನಗಲ್ಲಿಗೆ ಬೇರೆ ಜಿಲ್ಲೆಗಳಿಂದ ಸುಧಾರಿತ ತಳಿಗಳ ಸಂಸ್ಕರಿತ ಅಕ್ಕಿ ಬರುತ್ತಿದೆ. ಹಾನಗಲ್ಲ ಮಾವಿಗೂ ಅಂಥ ಸ್ಥಿತಿ ಎದುರಾಗುವ ಮುನ್ನ ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts