More

    ಇನ್ನೂ ಪತ್ತೆಯಾಗದ ಆರೋಪಿಗಳು

    ಗುಂಡ್ಲುಪೇಟೆ: ಪಟ್ಟಣದಲ್ಲಿ ಇತ್ತೀಚೆಗೆ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

    ಡಿವೈಎಸ್‌ಪಿ ಉಸ್ತುವಾರಿಯಲ್ಲಿ ಜಾಕೀರ್‌ಹುಸೇನ್ ನಗರ, ಕೆ.ಎಸ್.ನಾಗರತ್ನಮ್ಮ ಶಾಲೆಯ ಹಿಂಭಾಗ, ಕೋಡಹಳ್ಳಿ ವೃತ್ತ ಸೇರಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಜಿಲ್ಲೆಯ ಎಲ್ಲ ಠಾಣೆಗಳ 70 ಪೊಲೀಸರು, ರಾಜ್ಯ ಹಾಗೂ ಜಿಲ್ಲಾ ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಮಹದೇವಸ್ವಾಮಿ ‘ವಿಜಯವಾಣಿ’ಗೆ ತಿಳಿಸಿದರು.

    ಮರೆಯಾಗದ ಆತಂಕ: ಘಟನೆ ನಡೆದು ಮೂರು ದಿನಗಳಾದರೂ ಆರೋಪಿಗಳನ್ನು ಬಂಧಿಸದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ಇತಿಹಾಸದಲ್ಲಿ ರಕ್ತಸಿಕ್ತ ಅಧ್ಯಾಯ ಬರೆದ ತ್ರಿವಳಿ ಕೊಲೆಯ ಘಟನೆಯಿಂದ ಬೆಚ್ಚಿರುವ ಪಟ್ಟಣದ ಜನತೆ ಇನ್ನೂ ಆತಂಕದಿಂದಲೇ ದಿನದೂಡುತ್ತಿದ್ದಾರೆ. ಮುಸ್ಲಿಂ ಜನರೇ ಹೆಚ್ಚಾಗಿರುವ ಪ್ರದೇಶಗಳಲ್ಲಿ ಘಟನೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ.
    ಕೇರಳ ಹಾಗೂ ತಮಿಳುನಾಡು ಗಡಿಯಲ್ಲಿರುವ ತಾಲೂಕಿನಲ್ಲಿ ಹೆಚ್ಚಿದ್ದ ಅಕ್ರಮ ದಂಧೆಗಳಿಂದಲೇ ಇಂತಹ ದುರ್ಘಟನೆಗಳು ಸಂಭವಿಸುತ್ತಿವೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

    ಬಂಡೀಪುರ ರಾಷ್ಟ್ರೀಯ ಉದ್ಯಾನದ ಮಾರ್ಗವಾಗಿ ನೆರೆಯ ತಮಿಳುನಾಡು ಹಾಗೂ ಕೇರಳದ ಕಸಾಯಿಖಾನೆಗಳಿಗೆ ಜಾನುವಾರು ಸಾಗಣೆ, ಮರಳು, ಬಿಳಿಕಲ್ಲು ಸಾಗಣೆ, ಅಕ್ಕಿ, ನಾಟಾ ಸಾಗಣೆ ಸೇರಿ ಹಲವಾರು ಅಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಮೂಲೆಹೊಳೆ ಹಾಗೂ ಕೆಕ್ಕನಹಳ್ಳ ಗಡಿಗಳಲ್ಲಿ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಗಳು ಇದ್ದರೂ ಅಲ್ಲಿ ಕೇವಲ ಅರಣ್ಯ ಉತ್ಪನ್ನಗಳ ಸಾಗಣೆ ಬಗ್ಗೆ ಮಾತ್ರ ತಪಾಸಣೆ ಮಾಡಲಾಗುತ್ತಿರುವುದರಿಂದ ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ.

    ತ್ರಿವಳಿ ಕೊಲೆ ಪ್ರಕರಣದ ಎರಡು ಗುಂಪುಗಳ ನಡುವೆ ದ್ವೇಷ ಹೆಚ್ಚಲು ದಂಧೆಯಲ್ಲಿನ ವೈಷಮ್ಯವೇ ಕಾರಣವಾಗಿದೆ. ಅವ್ಯಾಹತವಾಗಿ ನಡೆಯುತ್ತಿರುವ ಇಸ್ಪೀಟು ದಂಧೆಯು ಹಲವರನ್ನು ಬೀದಿಪಾಲು ಮಾಡಿವೆ. ಇದರಿಂದ ಜೂಜಾಟಕ್ಕೆ ಗಂಟೆ ಬಡ್ಡಿ ಲೆಕ್ಕದಲ್ಲಿ ಹಣ ನೀಡುವವರು ಹೆಚ್ಚಾಗಿದ್ದಾರೆ. ಮೀಟರ್ ಬಡ್ಡಿ ದಂಧೆ ಯಾವುದೇ ನಿಯಂತ್ರಣವಿಲ್ಲದೆ ನಡೆಯುತ್ತಿದೆ. ಬಿಳಿಕಲ್ಲು ಗಣಿಗಾರಿಕೆ ನಡೆಸುವ ಉದ್ಯಮಿಗಳಿಂದ ಹಣ ಪಡೆದು ಹತ್ತಾರು ಲಕ್ಷ ರೂ. ಚೀಟಿ ನಡೆಸಲಾಗುತ್ತಿದೆ.

    ಅಕ್ರಮ ಬಂದೂಕುಗಳ ತಯಾರಿಕೆ, ಮಾರಾಟ ನಡೆಯುತ್ತಿದ್ದು ಸದ್ಯ ಇವು ವನ್ಯಜೀವಿಗಳ ಬೇಟೆಗೆ ಮಾತ್ರ ಬಳಕೆಯಾಗುತ್ತಿವೆ. ಮಚ್ಚು ಲಾಂಗುಗಳು ಝಳಪಿಸಿದ ಪರಿಣಾಮ ತ್ರಿವಳಿ ಕೊಲೆ ಸಂಭವಿಸಿದ್ದು ಬಂದೂಕುಗಳು ಬಳಕೆಯಾದರೆ ಭಾರೀ ದುರಂತ ಸಂಭವಿಸಲಿದೆ. ಆದ್ದರಿಂದ ಕೂಡಲೇ ಪೊಲೀಸ್ ಅಧಿಕಾರಿಗಳು ಇವುಗಳನ್ನು ಸರಿಯಾಗಿ ನಿಯಂತ್ರಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರಣಿ ಪ್ರಕರಣಗಳು ಸಂಭವಿಸಿದರೂ ಅಚ್ಚರಿಯಿಲ್ಲ ಎಂದು ಸಾರ್ವಜನಿಕರು ತಂಕ ವ್ಯಕ್ತಪಡಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts