More

    ತಣ್ಣೀರುಬಾವಿಗೂ ಬ್ಲೂ ಫ್ಲಾಗ್

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಅಂತಾರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆಗೆ ಅಗತ್ಯ ಸಿದ್ಧತೆ ನಡೆಸಲು ಕೇಂದ್ರ ಸರ್ಕಾರದ ತಜ್ಞರ ತಂಡ ದ್ವಿತೀಯ ಹಂತದಲ್ಲಿ ದಕ್ಷಿಣ ಕನ್ನಡದ ತಣ್ಣೀರುಬಾವಿ, ಸುರತ್ಕಲ್ ಲೈಟ್‌ಹೌಸ್ ಸಮೀಪದ ಇಡ್ಯಾ ಸಹಿತ ರಾಜ್ಯದ ಐದು ಕಡಲ ತೀರಗಳನ್ನು ಆಯ್ಕೆ ಮಾಡಿದೆ.

    ಉಡುಪಿ ಜಿಲ್ಲೆಯ ಕುಂದಾಪುರ ಕೋಡಿ, ಉತ್ತರ ಕನ್ನಡದ ಮುರ್ಡೇಶ್ವರ ಮತ್ತು ಕಾರವಾರ ಬ್ಲೂ ಫ್ಲಾಗ್ ಆಯ್ಕೆ ಸ್ಪರ್ಧೆಗೆ ಸಜ್ಜಾದ ರಾಜ್ಯದ ಇತರ ಮೂರು ಕಡಲ ತೀರಗಳು. ಪೂರ್ಣಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿ ಬಳಿಕ ಈ ಬೀಚ್‌ಗಳು ಬ್ಲೂ ಫ್ಲಾಗ್ ಮಾನ್ಯತೆಗೆ ಅರ್ಜಿ ಸಲ್ಲಿಸಲಿವೆ. ಕಡಲ್ಕೊರೆತ ತೀವ್ರತೆ ಹಿನ್ನೆಲೆಯಲ್ಲಿ ತಲಪಾಡಿ ತೀರ ಈ ಹಂತದಲ್ಲಿ ಆಯ್ಕೆ ಅವಕಾಶ ಕಳೆದುಕೊಂಡಿದೆ. ದಕ್ಷಿಣ ಕನ್ನಡದಲ್ಲಿ ಬೆಂಗ್ರೆ ಮತ್ತು ಪಣಂಬೂರು ಬೀಚ್‌ಗಳಿಗೆ ತಜ್ಞರು ದ್ವಿತೀಯ ಹಂತದ ಪರಿಗಣನೆಗಾಗಿ ಭೇಟಿ ನೀಡಿದ್ದಾರೆ.

    ಕರ್ನಾಟಕ ಕರಾವಳಿಯ ಒಟ್ಟು 104 ಕಡಲ ತೀರಗಳಲ್ಲಿ ಗುಣಮಟ್ಟದ ಕೇಂದ್ರಗಳೆಂದು ಸಂಬಂಧಿಸಿದ ಇಲಾಖೆಗಳಿಂದ ಶಿಫಾರಸು ಮಾಡಲಾದ ರಾಜ್ಯದ 16 ಬೀಚ್‌ಗಳಿಗೆ ಭೇಟಿ ನೀಡಿದ ಕೇಂದ್ರ ಅರಣ್ಯ ಪರಿಸರ ಹವಾಮಾನ ಬದಲಾವಣೆ ಇಲಾಖೆ(ಎಂಒಇಎಫ್‌ಸಿಸಿ) ಮತ್ತು ಸುಸ್ಥಿರ ಕರಾವಳಿ ನಿರ್ವಹಣೆ ಕೇಂದ್ರ(ಎನ್‌ಸಿಎಸ್‌ಸಿಎಂ) ತಜ್ಞರ ತಂಡ ನಿರ್ದಿಷ್ಟ ಮಾನದಂಡ ಪ್ರಕಾರ ಅಂತಿಮವಾಗಿ ಎರಡನೇ ಸುತ್ತಿನ ಕಡಲ ತೀರಗಳ ಆಯ್ಕೆ ನಡೆಸಿದೆ.

    ಮಲ್ಪೆ, ಓಂ, ನಿರ್ವಾಣ, ಅಪ್ಸರಕೊಂಡ, ಕುಡ್ಲೆ, ರವೀಂದ್ರನಾಥ ಠಾಗೂರ್, ಗೋಕರ್ಣ, ಮುರ್ಡೇಶ್ವರ, ದೇವಭಾಗ್, ಪಡುಕೆರೆ, ಪಡುವರಿ ಸೋಮೇಶ್ವರ, ತಲಪಾಡಿ, ಹರ್ವಾಡ, ಮಜಲಿ ಪರಿಗಣನೆಯಲ್ಲಿರುವ ರಾಜ್ಯದ ಇತರ ಕಡಲ ತೀರಗಳು.

    ಬಿಗ್ 100
    ದೇಶದಲ್ಲಿ ‘ಬಿಗ್ 100’ ಹೆಸರಿನಲ್ಲಿ ಬ್ಲೂ ಫ್ಲಾಗ್ ಅಥವಾ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಯೋಜನೆಗೆ ವಿಶ್ವಬ್ಯಾಂಕ್ ಆರ್ಥಿಕ ನೆರವು ಒದಗಿಸಲಿದೆ. ಇದರ ಭಾಗವಾಗಿ ಪ್ರಥಮ ಹಂತದಲ್ಲಿ ದೇಶದ 9 ರಾಜ್ಯಗಳಿಂದ ಉಡುಪಿಯ ಪಡುಬಿದ್ರಿ ಮತ್ತು ಉತ್ತರ ಕನ್ನಡದ ಕಾಸರಕೋಡು ಸಹಿತ 8 ಕಡಲ ತೀರಗಳಿಗೆ ಡೆನ್ಮಾರ್ಕ್‌ನ ಅಂತಾರಾಷ್ಟ್ರೀಯ ಮಂಡಳಿ ಬ್ಲೂ ಫ್ಲಾಗ್ ಮಾನ್ಯತೆ ನೀಡಿದೆ. 92 ತೀರಗಳ ಆಯ್ಕೆ ನಡೆಯಬೇಕಾಗಿದೆ.

    ದ್ವಿತೀಯ ಹಂತದ ಪಟ್ಟಿಯಲ್ಲಿರುವ ಕಡಲ ತೀರಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ದಿಗೆ ತಲಾ 12 ಕೋಟಿ ರೂ.ಬಿಡುಗಡೆ ಆಗಲಿದೆ. ಟೆಂಡರ್ ಪೂರ್ಣಗೊಂಡಿದೆ. ಬ್ಲೂ ಫ್ಲಾಗ್ ಮಾನ್ಯತೆ ಪಡೆಯುವ ಕಡಲ ತೀರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸಲಿವೆ. ಇದು ದೇಶದ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ.
    ಡಾ.ದಿನೇಶ್ ಕುಮಾರ್, ಪ್ರಾದೇಶಿಕ ನಿರ್ದೇಶಕರು, ಪರಿಸರ ಇಲಾಖೆ(ಕರ್ನಾಟಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts