More

    ಕಂಟೇನ್ಮೆಂಟ್ ವಲಯದ ಎಲ್ಲರಿಗೂ ಪರೀಕ್ಷೆ ಮಾಡಿಸಿ ; ಜಿಲ್ಲಾಡಳಿತಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚನೆ

    ತುಮಕೂರು: ಜಿಲ್ಲೆಯ ಕಂಟೇನ್ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬರಿಗೂ ಕೋವಿಡ್ ತಪಾಸಣೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲಾಡಳಿತಕ್ಕೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ‘ಕೋವಿಡ್ -19 ಸಂಬಂಧಿಸಿದ ಅಧಿಕಾರಿಗಳ ಸಭೆ’ಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಧೈರ್ಯ ಬರುವ ರೀತಿಯಲ್ಲಿ ಜಿಲ್ಲಾಡಳಿತ ಕೆಲಸ ಮಾಡಬೇಕು, ಆದ್ದರಿಂದ ಕಂಟೇನ್ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಿ ಎಂದರು.

    ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿರುವ ಆರ್‌ಟಿಪಿಸಿಆರ್ ಪ್ರಯೋಗಾಲಯದಲ್ಲಿ ಹೆಚ್ಚಿನ ಪರೀಕ್ಷೆ ನಡೆಸಲು ಸಾಧ್ಯವಿದ್ದು, ಪ್ರತಿನಿತ್ಯ ಹೆಚ್ಚು ಜನರ ಪರೀಕ್ಷೆ ನಡೆಸಬೇಕು, ಪರೀಕ್ಷೆ ಬಯಸುವ ಎಲ್ಲರಿಗೂ ಆದ್ಯತೆಯ ಮೇಲೆ ಪರೀಕ್ಷೆ ನಡೆಸಬೇಕು, ಶಂಕಿತರನ್ನು ಕ್ವಾರಂಟೈನ್ ಮಾಡುವುದು ಅಗತ್ಯವಿದೆ ಎಂದರು.

    ತುಮಕೂರು ಜಿಲ್ಲೆಯಲ್ಲಿ ಫೀವರ್ ಕ್ಲಿನಿಕ್‌ಗಳನ್ನು ಜಾಸ್ತಿ ಮಾಡಿ, ಫೀವರ್ ಕ್ಲಿನಿಕ್‌ಗೆ ಬಂದ ಪ್ರತಿಯೊಬ್ಬರಿಗೂ ಪರೀಕ್ಷೆ ನಡೆಸಬೇಕು, ಜಿಲ್ಲೆಯಲ್ಲಿರುವ ನಕಲಿ ವೈದ್ಯರು ಹಾಗೂ ಚೀಟಿಯಿಲ್ಲದೆ ಜ್ವರ, ನೆಗಡಿ, ಶೀತ, ಉಸಿರಾಟ ತೊಂದರೆಗೆ ಔಷಧ ಮಾರಾಟ ಮಾಡುವ ಅಂಗಡಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದರು.

    ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಎಲ್ಲ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು, ಎಲ್ಲ ಇಲಾಖೆಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ಹೊಣೆ ಆರೋಗ್ಯ ಇಲಾಖೆ ಮೇಲಿದೆ ಎಂದು ಡಿಎಚ್‌ಒ ನಾಗೇಂದ್ರಪ್ಪಗೆ ಸೂಚಿಸಿದರು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಜಿಲ್ಲೆಯಲ್ಲಿ ಮನೆಮನೆಗೆ ತೆರಳಿ ಆರೋಗ್ಯ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳ್ಳಬೇಕು ಎಂದು ಡಿಸಿ ಡಾ.ಕೆ.ರಾಕೇಶ್ ಕುಮಾರ್ ಸೂಚಿಸಿದರು.

    ಸಭೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು, ನಿಯಂತ್ರಣ ಕ್ರಮಗಳು, ಮತ್ತಿತರ ಮಾಹಿತಿಯನ್ನು ಡಿಎಚ್‌ಒ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಿಂದ ಸಚಿವರು ಪಡೆದರು. ಸಂಸದರಾದ ಜಿ.ಎಸ್.ಬಸವರಾಜು, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ಸೇರಿ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

    ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಬಹುತೇಕ ಸೋಂಕಿತರಿಗೆ ಸೋಂಕಿನ ಲಕ್ಷಣಗಳೇ ಕಂಡು ಬಂದಿಲ್ಲ. 8 ಮಂದಿಗೆ ಮಾತ್ರ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಸೋಂಕಿನ ಲಕ್ಷಣಗಳಿಲ್ಲದವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಲು ಅವಕಾಶವಿದ್ದು, ಹೊರ ವಲಯದಲ್ಲಿರುವ ಟ್ರಕ್‌ಟರ್ಮಿನಲ್ ಸಮೀಪದ ಕಟ್ಟಡಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ.
    ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts