More

    ಉಗ್ರ ಪರ ಗೋಡೆ ಬರಹಗಾರರಿಬ್ಬರು ಸೆರೆ

    ಮಂಗಳೂರು: ನಗರದ ಬಿಜೈ ಮತ್ತು ಕೋರ್ಟ್ ಆವರಣದಲ್ಲಿ ಲಷ್ಕರ್ ಜಿಂದಾಬಾದ್ ಹ್ಯಾಷ್ ಟ್ಯಾಗ್‌ನಲ್ಲಿ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಶನಿವಾರ ತಿಳಿಸಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿಗಳಾದ ಮಹಮ್ಮದ್ ಶಾರೀಕ್(22), ಮಾಝ್ ಮುನೀರ್ ಅಹಮ್ಮದ್ ಯಾನೆ ಮುನೀರ್ (21) ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪ್ರಕರಣದ ವಿವರ: ನ.27ರಂದು ಸರ್ಕಿಟ್ ಹೌಸ್‌ನಿಂದ ಬಿಜೈ ಕಡೆಗೆ ಹೋಗುವ ರಸ್ತೆಯಲ್ಲಿ ಕದ್ರಿ ಕಂಬಳ ಕ್ರಾಸ್‌ನಲ್ಲಿರುವ ಅಪಾರ್ಟ್‌ಮೆಂಟೊಂದರ ಆವರಣ ಗೋಡೆಯಲ್ಲಿ ‘ಡು ನಾಟ್ ಫೋರ್ಸ್ ಅಸ್ ಟು ಇನ್ವೈಟ್ ಲಷ್ಕರ್ ಇ ತೊಯ್ಬ ಆ್ಯಂಡ್ ತಾಲಿಬಾನ್ ಟು ಡೀಲ್ ವಿದ್ ಸಂಘೀಸ್ ಆ್ಯಂಡ್ ಮ್ಯಾನ್ವೆಡಿಸ್’ ಹಾಗೂ ಇದರ ಕೆಳಗೆ ಹ್ಯಾಷ್ ಟ್ಯಾಗ್ ಹಾಕಿ ‘ಲಷ್ಕರ್ ಜಿಂದಾಬಾದ್’(ನಮ್ಮನ್ನು ವಿಧ್ವಂಸಕ ಕೃತ್ಯ ನಡೆಸಲು ಉತ್ತೇಜಿಸಬೇಡಿ. ಲಷ್ಕರ್ ಇ ತೊಯ್ಬ ಮತ್ತು ತಾಲಿಬಾನ್‌ಗಳಿಗೆ ಸಂಘಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವುದು ತಿಳಿದಿದೆ) ಎಂದು ಬರೆಯಲಾಗಿತ್ತು.

    ನ.29ರಂದು ಮಂಗಳೂರು ನ್ಯಾಯಾಲಯ ಆವರಣದಲ್ಲಿರುವ ಪೊಲೀಸ್ ಹೊರಠಾಣೆಯ ಹಳೇ ಕಟ್ಟಡದ ಗೋಡೆಯಲ್ಲಿ ಉರ್ದು ಭಾಷೆಯಲ್ಲಿ ‘ಪೈಗಂಬರ್‌ಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು)ಎಂಬ ಬರಹ ಪತ್ತೆಯಾಗಿತ್ತು.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಗರದ ಸಿಸಿ ಕ್ಯಾಮೆರಾ, ಮೊಬೈಲ್ ದಾಖಲೆ ಸೇರಿದಂತೆ ವಿವಿಧ ರೀತಿಯಲ್ಲಿ ಶೋಧ ನಡೆಸಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಆರೋಪಿಗಳ ಮಾಹಿತಿ ಸಂಗ್ರಹಿಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆರೋಪಿಗಳನ್ನು ತೀವ್ರ ತನಿಖೆ ನಡೆಸಲಾಗುತ್ತಿದ್ದು, ಈ ಪ್ರಕರಣದಲ್ಲಿ ಭಾಗಿಯಾದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
    ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಮತ್ತು ವಿನಯ್ ಗಾಂವಕರ್, ಸಹಾಯಕ ಆಯುಕ್ತರಾದ ಜಗದೀಶ್ ನಾಯಕ್, ಎಂ.ಎ.ನಟರಾಜ್ ನಿರ್ದೇಶನದಲ್ಲಿ ಕದ್ರಿ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸವಿತ್ರತೇಜ, ಪಿಎಸ್‌ಐ ಅನಿತಾ ನಿಕ್ಕಂ, ಜ್ಞಾನಶೇಖರ್, ಜಗನ್ನಾಥ್ ಮತ್ತು ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್‌ಐ ಪ್ರದೀಪ್ ಟಿ.ಆರ್., ಕದ್ರಿ ಠಾಣೆ ಸಿಬ್ಬಂದಿ ಎಎಸ್‌ಐ ಶಶಿಧರ ಶೆಟ್ಟಿ, ಜಯಾನಂದ, ಉಮೇಶ್ ಕುಮಾರ್, ಗಿರೀಶ್ ಜೋಗಿ, ರಾಘವೇಂದ್ರ, ಕಿಶೋರ್, ಜನಾರ್ದನ ಹಾಗೂ ಸಿಸಿಬಿ ಸಿಬ್ಬಂದಿ ಸಂಘಟಿತ ಪ್ರಯತ್ನದ ಫಲವಾಗಿ ಆರೋಪಿಗಳನ್ನು ಬಂಧಿಸಲಾಗಿದೆ.

    ಇಬ್ಬರೂ ಉನ್ನತ ಶಿಕ್ಷಣ ಪಡೆದವರು: ಬಂಧಿತ ಆರೋಪಿಗಳು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಮಹಮ್ಮದ್ ಶಾರೀಕ್ ಬಿ.ಕಾಂ ಪದವೀಧರ. ತೀರ್ಥಹಳ್ಳಿಯಲ್ಲಿ ತಂದೆಯ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿದ್ದಾನೆ. ಮಾಝ್ ಮುನೀರ್ ಅಹಮ್ಮದ್ ಕೊಣಾಜೆಯ ಬಳಿ ಇರುವ ಇಂಜಿನಿಯರಿಂಗ್ ಕಾಲೇಜೊಂದರ ಮೂರನೇ ವರ್ಷದ ವಿದ್ಯಾರ್ಥಿ. ಈತ ಬಿಡುವಿನ ವೇಳೆಯಲ್ಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ. ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಬಂಧಿಕರೊಬ್ಬರ ಪ್ಲಾೃಟ್‌ನಲ್ಲಿ ವಾಸವಿದ್ದ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಬಾಗಿಯಾಗಿದ್ದಾರೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

    ಬರೆಯುವ ಉದ್ದೇಶದಿಂದ ಬಂದಿದ್ದ: ಮಹಮ್ಮದ್ ಶಾರೀಕ್ ಮಂಗಳೂರಿನಲ್ಲಿ ದೇಶದ್ರೋಹಿ ಬರಹ ಬರೆಯುವುದಕ್ಕಾಗಿ ತೀರ್ಥಹಳ್ಳಿಯಿಂದ ಬಂದಿದ್ದ. ಇಲ್ಲಿ ಮಾಝ್ ಮುನೀರ್ ಜತೆ ಸೇರಿಕೊಂಡು ವ್ಯವಸ್ಥಿತ ಯೋಜನೆ ರೂಪಿಸಿ ಜನರಲ್ಲಿ ಭಯ ಉಂಟು ಮಾಡುವ ಉದ್ದೇಶದಿಂದ ಬರಹ ಬರೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇಬ್ಬರೂ ಆರೋಪಿಗಳು ಒಂದೇ ಊರಿನವರಾಗಿದ್ದರಿಂದ ಪರಿಚಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    3 ವಾರದ ಹಿಂದೆಯೇ ಬರೆದಿದ್ದರು: ಕದ್ರಿ ಕಂಬಳ ಕ್ರಾಸ್‌ನ ಅಪಾರ್ಟ್‌ಮೆಂಟ್ ಆವರಣದಲ್ಲಿ ಬರಹ ಪತ್ತೆಯಾದ ದಿನದಿಂದ ಸುಮಾರು ಮೂರು ವಾರದ ಹಿಂದೆಯೇ ನ್ಯಾಯಾಲಯ ಆವರಣದಲ್ಲಿರುವ ಪೊಲೀಸ್ ಹೊರಠಾಣೆಯ ಗೋಡೆಯಲ್ಲಿ ವಿವಾದಾತ್ಮಕ ಬರಹ ಬರೆದಿದ್ದರು. ಆದರೆ ಆಂಗ್ಲ ಭಾಷೆಯನ್ನು ಬಳಸಿ ಉರ್ದುವಿನಲ್ಲಿ ಬರೆದಿರುವುದರಿಂದ ಯಾರೂ ಅದರ ಬಗ್ಗೆ ಗಮನ ನೀಡಿರಲಿಲ್ಲ. ಆರೋಪಿ ಮಾಝ್ ಮುನೀರ್ ನ್ಯಾಯಾಲಯದ ಆವರಣಕ್ಕೆ ಹಲವು ಬಾರಿ ಬಂದು ಒಂದಷ್ಟು ಹೊತ್ತು ನಿಂತು ಯಾರಾದರೂ ಬರಹವನ್ನು ಗಮಿಸುತ್ತಿದ್ದಾರೆಯೇ? ಎಂದು ನೋಡುತ್ತಿದ್ದ. ಆ ಬಳಿಕ ಎಲ್ಲರಿಗೂ ಕಾಣುವ ಜಾಗ ಹುಡುಕಾಡಿ ಕೊನೆಗೆ ಅಪಾರ್ಟ್‌ಮೆಂಟ್ ಆವರಣ ಗೋಡೆಯಲ್ಲಿ ಬರೆದಿದ್ದರು. ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಪಿಗಳು ಮಂಗಳೂರಿನಿಂದ ಪರಾರಿಯಾಗಿದ್ದರು.

    ಸಾಮಾಜಿಕ ಜಾಲತಾಣ ನಂಟು: ಆರೋಪಿಗಳ ಬರಹದ ಭಾಷೆ ಸಂದೇಹ ಉಂಟು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅವರು ಹೊಂದಿರುವ ಸಂಪರ್ಕದ ತನಿಖೆ ನಡೆಸಲಾಗುತ್ತಿದೆ. ಉದ್ದೇಶಪೂರ್ವಕ ಕೃತ್ಯ ಎಸಗಿರುವುದು ಕಂಡುಬಂದಿದೆ. ಇಬ್ಬರಿಗೂ ಅಪರಾಧ ಹಿನ್ನೆಲೆ ಇರುವುದು ಈವರೆಗೆ ಗೊತ್ತಾಗಿಲ್ಲ. ಇದರ ಹಿಂದೆ ಸಂಘಟನೆಗಳ ನಂಟು ಇದೆಯೇ, ಬೇರೆ ಉದ್ದೇಶ ಏನಿತ್ತು ಎನ್ನುವುದನ್ನು ಇನ್ನಷ್ಟೇ ತನಿಖೆ ನಡೆಸಬೇಕಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts