More

    ನಾಳೆಯಿಂದ ತೇರಾ ಕೋಟಿ ಜಪ ಸಾಂಗತಾ ಯಜ್ಞ

    ಶಿವಮೊಗ್ಗ: ನಗರದ ಲಗಾನ್ ಕಲ್ಯಾಣ ಮಂಟಪದಲ್ಲಿ ವಿಪ್ರ ಯುವ ಪರಿಷತ್‌ನಿಂದ ಜ.26ರಿಂದ 28ರವರೆಗೆ ತೇರಾ ಕೋಟಿ ಜಪ ಸಾಂಗತಾ ಯಜ್ಞ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್‌ನ ಅಧ್ಯಕ್ಷ ರಾಘವೇಂದ್ರ ಉಡುಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಪ್ತ ಯತಿವರ್ಯರ ಸಮ್ಮುಖದಲ್ಲಿ ಯಜ್ಞ ನೆರವೇರಲಿದೆ. 26ರ ಸಂಜೆ 6ರಿಂದ ಯಾಗಶಾಲೆ ಪ್ರವೇಶ, ಗಣಪತಿ ಪೂಜೆ, ಸ್ಥಳ ಶುದ್ದಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ರಾತ್ರಿ 8ಕ್ಕೆ ಹೆಬ್ಬಳ್ಳಿ ಶ್ರೀಕ್ಷೇತ್ರದ ದತ್ತಾವದೂತರು ಆಗಮಿಸಲಿದ್ದಾರೆ. ಬಳಿಕ ಶೇಜಾರತಿ ಹಾಗೂ ಪ್ರಸಾದ ವಿನಿಯೋಗವಿದೆ ಎಂದು ಹೇಳಿದರು.
    27ರ ಬೆಳಗ್ಗೆ 7ರಿಂದ ಗೋಪೂಜೆ ಸಹಿತ ರಾಮತಾರಕ ಹೋಮ ಆರಂಭವಾಗಲಿದೆ. 11ಕ್ಕೆ ಪೂರ್ಣಾಹುತಿ, ಶ್ರೀರಾಮ ಪಟ್ಟಾಭಿಷೇಕ, ಸಭಾ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ, ಸ್ವಾಮೀಜಿಗಳಿಂದ ಆಶೀರ್ವಚನ ಇರಲಿದೆ. 12.30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಅಂದು ಸಂಜೆ 4ಕ್ಕೆ ರಾಮನ್ ಸಿಸ್ಟರ್ಸ್‌ ಅವರಿಂದ ವೀಣಾ ವಾದನ, ಲವ-ಕುಶ ಯಕ್ಷಗಾನ ಪ್ರಸಂಗ, ರಾತ್ರಿ 8.30ಕ್ಕೆ ಶೇಜಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. 28ರ ಬೆಳಗ್ಗೆ 9.30ಕ್ಕೆ ಗೋಪೂಜೆ ಸಹಿತ ಹೋಮ, 10.30ಕ್ಕೆ ಪೂರ್ಣಾಹುತಿ ನೆರವೇರಲಿದೆ.
    ಜ.28ರ ಬೆಳಗ್ಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹೆಬ್ಬಳ್ಳಿಯ ದತ್ತಾವದೂತ ಮಹಾರಾಜರು, ಕೂಡ್ಲಿಮಠದ ಶ್ರೀ ಅಭಿನವ ಶಂಕರಭಾರತೀ ಸ್ವಾಮೀಜಿ, ಭೀಮನಕಟ್ಟೆಯ ಶ್ರೀ ರಘುವರೇಂದ್ರ ತೀರ್ಥರು, ಮಂಗಳೂರು ವಜ್ರದೇಹಿಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಅರಸೀಕೆರೆಯ ಸತೀಶ್ ಶರ್ಮಾಜೀ ಮಹಾರಾಜ್, ಮೈಸೂರಿನ ಅರ್ಜುನ ಅವಧೂತರು, ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಎಸ್.ರುದ್ರೇಗೌಡ ಮುಂತಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
    ಜ.27 ಹಾಗೂ 28ರಂದು ದತ್ತಾವದೂತರು ರಾಮ ತಾರಕ ಜಪ ಉಪದೇಶ ನೀಡಲಿದ್ದಾರೆ. ಮಹಾರಾಜರ ಪಾದಪೂಜೆಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ಯಜ್ಞಕ್ಕೆ ಅಗತ್ಯವಿರುವ ತುಪ್ಪ, ಭತ್ತ, ಎಳ್ಳು, ಅಕ್ಕಿ, ಕಾಯಿ, ಅನ್ನಸಂತರ್ಪಣೆಗೆ ಅವಶ್ಯವಿರುವ ದಿನಸಿ, ಹೈನು ಉತ್ಪನ್ನ, ತರಕಾರಿ ಮುಂತಾದವುಗಳನ್ನು ಭಕ್ತರು ಸಮರ್ಪಿಸಲು ಅವಕಾಶವಿದೆ ಎಂದರು.
    ಶಿವಮೊಗ್ಗ ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ವೆಂಕಟೇಶ ರಾವ್, ವೈದಿಕ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ವಿಶ್ವೇಶ್ವರ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಜಿ.ಕೆ.ಮಾಧವಮೂರ್ತಿ, ವಿಪ್ರ ಯುವ ಪರಿಷತ್‌ನ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts