More

    ರಸ್ತೆ ದಾಟುತ್ತಿದ್ದಾತನಿಗೆ ವಾಹನ ಡಿಕ್ಕಿಯಾಗಿ ಸಾವು: ಆಕ್ರೋಶಿತ ಗುಂಪಿನಿಂದ ಚೆಕ್‌ಪಾಯಿಂಟ್ ಧ್ವಂಸ

    ಕಡಬ: ರಾಮಕುಂಜ ಕ್ರಾಸ್ ಪೊಲೀಸ್ ಚೆಕ್‌ಪಾಯಿಂಟ್ ಬಳಿ ಮಂಗಳವಾರ ಪೊಲೀಸರಿಗೆ ವಾಹನದ ದಾಖಲೆ ತೋರಿಸಿ ರಸ್ತೆ ದಾಟುತ್ತಿದ್ದ ಸವಾರನಿಗೆ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ. ಘಟನೆಯಿಂದ ಆಕ್ರೋಶಿತ ಗುಂಪೊಂದು ಸ್ಥಳದಲ್ಲಿ ಜಮಾಯಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಬ್ಯಾರಿಕೇಡ್‌ಗಳನ್ನು ಧ್ವಂಸಗೊಳಿಸಿದೆ.

    ಕೊಲ ಗ್ರಾಮದ ಆತೂರುಬೈಲು ನಿವಾಸಿ ಎ.ಪಿ.ಹ್ಯಾರಿಸ್(35ವ.)ಅಪಘಾತದಲ್ಲಿ ಮೃತಪಟ್ಟವರು. ಹ್ಯಾರಿಸ್ ಅವರು ಪತ್ನಿ ನಾಸಿರಾರೊಂದಿಗೆ ದ್ವಿಚಕ್ರ ವಾಹನದಲ್ಲಿ ರಾಮಕುಂಜದಿಂದ ಆತೂರು ಕಡೆಗೆ ಬರುತ್ತಿದ್ದ ವೇಳೆ ವಾಹನಗಳ ದಾಖಲೆ ಪರಿಶೀಲಿಸುತ್ತಿದ್ದ ಕಡಬ ಎಸ್.ಐ.ರುಕ್ಮ ನಾಯ್ಕ ಇವರ ದ್ವಿಚಕ್ರ ವಾಹನ ನಿಲ್ಲಿಸಿದ್ದಾರೆ.

    ಎಸ್.ಐ.ಗೆ ದಾಖಲೆ ತೋರಿಸಿ ಮತ್ತೆ ದ್ವಿಚಕ್ರ ವಾಹನದ ಕಡೆಗೆ ಬರಲು ರಸ್ತೆ ದಾಟುತ್ತಿದ್ದಂತೆ ಟಾಟಾ ಏಸ್ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಹ್ಯಾರಿಸ್ ಲಾಕ್‌ಡೌನ್ ಸಂದರ್ಭದಲ್ಲಿ ಊರಿಗೆ ಬಂದಿದ್ದರು.

    ಬ್ಯಾರಿಕೇಡ್, ಶೆಡ್ ಧ್ವಂಸ: ಘಟನೆ ನಡೆದ ಬಳಿಕ ಸುಮಾರು 300ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿ ಜಮಾಯಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಚೆಕ್‌ಪಾಯಿಂಟ್‌ನಲ್ಲಿ ಪೊಲೀಸರಿಗೆ ತಂಗಲು ದಾನಿಗಳಿಂದ ನಿರ್ಮಿಸಲಾಗಿದ್ದ ಶೆಡ್ ಧ್ವಂಸಗೊಳಿಸಿದರು. ರಸ್ತೆಗೆ ಅಡ್ಡವಾಗಿ ಇಡಲಾಗಿದ್ದ ಬ್ಯಾರಿಕೇಡ್‌ನ್ನು ಕಿತ್ತೆಸೆದರು. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ನೂರಾರು ಮಂದಿ ರಸ್ತೆಯಲ್ಲಿ ಕುಳಿತು ಧರಣಿ ನಡೆಸಲು ಮುಂದಾದರು. ರಸ್ತೆಗೆ ಅಡ್ಡಲಾಗಿ ಇಟ್ಟಿಗೆಗಳನ್ನು ಇಟ್ಟು ವಾಹನ ಸಂಚಾರಕ್ಕೆ ತಡೆಯೊಡ್ಡಿದರು.

    ಈ ವೇಳೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಲಾಯಿತು. ಸ್ಥಳಕ್ಕೆ ವರದಿಗೆ ತೆರಳಿದ ಪತ್ರಕರ್ತರ ಜೊತೆ ವಾಗ್ವಾದ ನಡೆಸಿದ ಪ್ರತಿಭಟನಕಾರರು ಫೋಟೊ ತೆಗೆಯಲು ಅಡ್ಡಿಪಡಿಸಿ ಹಲ್ಲೆಗೆ ಮುಂದಾಗಿದ್ದಾರೆ. ಆತೂರು ಪರಿಸರದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸರು ಬಿಗು ಬಂದೋಬಸ್ತ್ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts