More

    ಏರ್‌ಪೋರ್ಟ್‌ಲ್ಲಿ ಪ್ರಾಣಿ-ಪಕ್ಷಿ ಓಡಿಸಲು ಟೆಂಡರ್!

    ಶಿವಮೊಗ್ಗ: ಇದುವರೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಅವಕಾಶವಿದೆ ಎಂದು ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಜನರನ್ನು ವಂಚಿಸುತ್ತಿದ್ದರು. ಆದರೆ ಈಗ ಏರ್‌ಪೋರ್ಟ್‌ನಲ್ಲಿ ಕೆಲಸ ನಿರ್ವಹಿಸಲು ಹೊರಗುತ್ತಿಗೆ ಸಂಸ್ಥೆಗಳಿಂದ ರಾಜ್ಯ ಸರ್ಕಾರ ಟೆಂಡರ್ ಕರೆದಿದೆ. ಅಲ್ಲಿ ಲಭ್ಯವಿರುವ ಉದ್ಯೋಗ ಅವಕಾಶದ ಬಗ್ಗೆ ಕೇಳಿದರೆ ಯಾರಾದರೂ ಒಂದು ಕ್ಷಣ ಅಚ್ಚರಿಪಡಲೇಬೇಕು.

    ಅಂದ ಹಾಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಾಣಿ-ಪಕ್ಷಿಗಳನ್ನು ಓಡಿಸುವ ಕಾರ್ಯವನ್ನು ಈಗ ಹೊರಗುತ್ತಿಗೆ ಸಂಸ್ಥೆಗೆ ನೀಡಲು ಟೆಂಡರ್ ಆಹ್ವಾನಿಸಲಾಗಿದೆ. ರಾಜ್ಯ ಕೈಗಾರಿಕೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ಇಲಾಖೆಯಿಂದ ಟೆಂಡರ್ ಕರೆಯಲಾಗಿದೆ. ಇದನ್ನು ನೋಡಿದ ಜನರು ವಿಮಾನ ನಿಲ್ದಾಣದಲ್ಲಿ ಇಂತಹ ಕೆಲಸಗಳೂ ಇರುತ್ತವೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.
    ಸಾಮಾನ್ಯವಾಗಿ ವಿಮಾನ ನಿಲ್ದಾಣದ ಒಂದಿಷ್ಟು ಪ್ರದೇಶದಲ್ಲಿ ಹಕ್ಕಿಗಳು ಹಾರಾಡದಂತೆ, ನಾಯಿ, ದನ, ಕರುಗಳು ಸಂಚರಿಸದಂತೆ ನೋಡಿಕೊಳ್ಳಲಾಗುತ್ತದೆ. ವಿಮಾನ ಲ್ಯಾಂಡ್ ಆಗುವಾಗ, ಟೇಕಾಫ್ ಆಗುವ ಸಂದರ್ಭದಲ್ಲಿ ಇದರಿಂದ ಅನಾಹುತ ಸಂಭವಿಸುತ್ತದೆ ಎಂಬ ಮುನ್ನೆಚ್ಚರಿಕೆಯಿಂದ ಇದನ್ನು ಪಾಲನೆ ಮಾಡಲಾಗುತ್ತದೆ. ಆದರೆ ಈಗ ಹಕ್ಕಿಗಳ ನಿಯಂತ್ರಣ ಸಾಧ್ಯವಾಗದ ಕಾರಣ ಅದಕ್ಕೆಂದು ಟೆಂಡರ್ ನೀಡಲಾಗುತ್ತಿದೆ.
    ಏರೋಡ್ರಂ ಕಮಿಟಿಯಲ್ಲಿ ಚರ್ಚೆ: ಶಿವಮೊಗ್ಗ ವಿಮಾನ ನಿಲ್ದಾಣದ ನಿಷೇಧಿತ ಪ್ರದೇಶಗಳಲ್ಲಿ ಹಕ್ಕಿಗಳು ಗೂಡಿಕಟ್ಟಿವೆ. ಅಲ್ಲಿ ನಾಯಿಗಳು ಸಂಸಾರ ಸಮೇತವಾಗಿ ವಾಸಿಸುತ್ತಿವೆ ಎಂದು ಡಿಸೆಂಬರ್‌ನಲ್ಲಿ ನಡೆದಿದ್ದ ಏರೋಡ್ರಂ ಕಮಿಟಿಯ ಮೊದಲ ಸಭೆಯಲ್ಲೇ ಅಂದಿನ ಡಿಸಿ ಡಾ. ಆರ್.ಸೆಲ್ವಮಣಿ, ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಎಚ್ಚರಿಸಿದ್ದರು. ರನ್‌ವೇ ಪಕ್ಕದಲ್ಲಿ ನಾಯಿಗಳು ಮರಿಗಳೊಂದಿಗೆ ಓಡಾಟ ಮಾಡುತ್ತಿವೆ. ವಿಮಾನ ನಿಲ್ದಾಣದ ಕಾಂಪೌಂಡ್‌ನ ಒಳ ಭಾಗದಲ್ಲಿ ನಾಯಿಗಳಿವೆ. ಇದು ಏರ್‌ಪೋರ್ಟ್ ಮಾನದಂಡವನ್ನು ಮೀರಿದ್ದು ಎಂದು ಎಚ್ಚರಿಸಿದ್ದರು. ನಾಯಿಗಳು ಹೊರಗಿನಿಂದ ಬರುತ್ತಿದ್ದರೆ ಆ ಜಾಗವನ್ನು ಸಮರ್ಪಕವಾಗಿ ಮುಚ್ಚಿ ಎಂದು ಆದೇಶಿಸಿದ್ದರು.
    ನಾಯಿಗೆ ಜೈಲಿನ ಊಟ: ಅಂದು ನಡೆದ ಏರೋಡ್ರಂ ಕಮಿಟಿ ಸಭೆಯಲ್ಲಿದ್ದ ಏರ್‌ಪೋರ್ಟ್ ಅಧಿಕಾರಿಗಳು ಜೈಲಿನಲ್ಲಿ ಉಳಿದ ಆಹಾರ ಪದಾರ್ಥಗಳನ್ನು ನಾಯಿಗಳಿಗೆ ಹಾಕುತ್ತಾರೆ. ಹೀಗಾಗಿ ಅವುಗಳ ಸಂಖ್ಯೆ ಹೆಚ್ಚಿದೆ. ಆದರೆ ಅವು ರನ್‌ವೇ ಸಮೀಪ ಹೇಗೆ ಬರುತ್ತಿವೆ ಎಂಬುದು ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಆದರೆ ಈಗ ಪರಿಸ್ಥಿತಿ ಕೈಮೀರುತ್ತಿರುವಂತಿದೆ. ಹೀಗಾಗಿ ಇವುಗಳ ನಿರ್ವಹಣೆಗೆಂದು ಏಜೆನ್ಸಿ ಗುರುತಿಸಲು ಟೆಂಡರ್ ಆಹ್ವಾನಿಸಲಾಗಿದೆ.
    ಹಾಲಿ ಇರುವವರು ತಾತ್ಕಾಲಿಕ:ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತರಬೇತಿ ಪಡೆದ 13 ಸಿಬ್ಬಂದಿ ಈಗ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಪ್ರಾಣಿ, ಪಕ್ಷಿಗಳನ್ನು ಬೆದರಿಸಿ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಬೆಂಗಳೂರಿಗೆ ಮರಳಲೇ ಬೇಕು. ಇವರು ಇಲ್ಲಿಗೆ ಬಂದಿರುವುದು ತಾತ್ಕಾಲಿಕವಾಗಿ. ಬೇರೆ ಸಿಬ್ಬಂದಿ ನೇಮಕವಾದ ಬಳಿಕ ಇವರೆಲ್ಲರೂ ಹಿಂದಕ್ಕೆ ತೆರಳಲಿದ್ದಾರೆ.
    ಹಕ್ಕಿಗಳಿಂದ ತೊಂದರೆ:ವಿಮಾನ ಟೇಕಾಫ್ ಆಗುವ ಹಾಗೂ ಲ್ಯಾಂಡ್ ಆಗುವ ಸಂದರ್ಭದಲ್ಲಿ ರನ್‌ವೇಯಲ್ಲಿ ಯಾವುದೇ ಅಡೆತಡೆ ಇರಬಾರದು. ಇದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಾರ್ಗಸೂಚಿಯೂ ಹೌದು. ಒಂದು ವೇಳೆ ಪ್ರಾಣಿ-ಪಕ್ಷಿ ಈ ಸಂದರ್ಭದಲ್ಲಿ ವಿಮಾನಕ್ಕೆ ಸಿಲುಕಿದರೆ ಅಪಘಾತ ಸಾಧ್ಯತೆಗಳಿರುತ್ತವೆ. ವಿಮಾನ ರನ್‌ವೇಗೆ ಇಳಿಯುವ ಸಂದರ್ಭದಲ್ಲಿ ಹಕ್ಕಿ ಡಿಕ್ಕಿ ಹೊಡೆಯುವ ಇಲ್ಲವೇ ವಿಮಾನದ ಇಂಜಿನ್‌ಗೆ ಸಿಲುಕುವ ಅಪಾಯವೂ ಇದೆ. ಹೀಗಾಗಿ ಅವುಗಳನ್ನು ಬೆದರಿಸಿ ದೂರ ಓಡಿಸುವುದು ಅನಿವಾರ್ಯ. ಇನ್ನು ಟರ್ಮಿನಲ್ ಕಟ್ಟಡದಲ್ಲಿ ಗೂಡು ಕಟ್ಟುವ ಹಕ್ಕಿಗಳು ಅಲ್ಲಿ ಗಲೀಜು ಮಾಡುತ್ತವೆ. ಇದರಿಂದ ಏರ್‌ಪೋರ್ಟ್ ನೈರ್ಮಲ್ಯಕ್ಕೂ ಕುತ್ತುಂಟಾಗುತ್ತದೆ.
    ವಿಶೇಷ ತರಬೇತಿ:ಟೆಂಡರ್ ಮೂಲಕ ಆಯ್ಕೆಯಾಗುವ ಏಜೆನ್ಸಿಯ ಸಿಬ್ಬಂದಿಗೆ ಪ್ರಾಣಿ, ಪಕ್ಷಿಗಳನ್ನು ಬೆದರಿಸುವ ತರಬೇತಿ ನೀಡಲಾಗುತ್ತದೆ. ಪಾರಿವಾಳಗಳು, ಇತರ ಪಕ್ಷಿಗಳು, ಮಂಗ, ನಾಯಿಗಳು ರನ್‌ವೇ ಬಳಿ ಸುಳಿಯದಂತೆ ತಡೆಯುವ ಬಗ್ಗೆ ತರಬೇತಿ ಒದಗಿಸಲಾಗುತ್ತದೆ. ಅತ್ಯಾಧುನಿಕ ಏರ್‌ಗನ್ ನೀಡಲಾಗುವುದು. ಪಟಾಕಿ ಬಳಕೆ ಮಾಡಿ ಪಕ್ಷಿಗಳನ್ನು ಓಡಿಸುವು ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ. ಈ ಎಲ್ಲ ಚಟುವಟಿಕೆಗಳಲ್ಲಿ ಎಲ್ಲಿಯೂ ಪ್ರಾಣಿ, ಪಕ್ಷಗಳ ಜೀವಕ್ಕೆ ಹಾನಿ ಉಂಟಾಗದಂತೆ ಸಿಬ್ಬಂದಿ ಗಮನಹರಿಸಬೇಕಾದ್ದು ಅವಶ್ಯ. ಹಾಗೆಂದು ಅವರಿಗೆ ಸ್ಪಷ್ಟ ನಿರ್ದೇಶನವನ್ನೂ ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts