More

    ಕಾಸು ಕೊಟ್ಟೋರು ಪಾಸು! ಕುವೆಂಪು ವಿವಿ ಪರೀಕ್ಷೆಯಲ್ಲಿ ನಕಲು

    ಕಾಸು ಕೊಟ್ಟೋರು ಪಾಸು! ಕುವೆಂಪು ವಿವಿ ಪರೀಕ್ಷೆಯಲ್ಲಿ ನಕಲುಪದವಿ ಪಡೆಯಲು ಕಷ್ಟಪಟ್ಟು ಓದಬೇಕು ಎಂದೇನಿಲ್ಲ. ಕೇವಲ ಹತ್ತು ಸಾವಿರ ನೀಡಿದರೆ ಸಾಕು. ಅನಾಯಾಸವಾಗಿ ಅಡ್ಡಿ ಆತಂಕಗಳಿಲ್ಲದೆ ಪರೀಕ್ಷೆ ಬರೆದು ಉತ್ತೀರ್ಣರಾಗಬಹುದು!

    ಇದು ಕುವೆಂಪು ವಿವಿಯ ದೂರ ಶಿಕ್ಷಣ ಕೇಂದ್ರದ ಮೂಲಕ ಅಧ್ಯಯನ ಕೇಂದ್ರ ಆರಂಭಿಸಿರು ವವರು ವಿದ್ಯಾರ್ಥಿಗಳಿಗೆ ನೀಡುವ ಆಫರ್. ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಅಧ್ಯಯನ ಕೇಂದ್ರವೊಂದರ ಬಂಡವಾಳ ಬಯಲಾಗಿದ್ದು, ಉಲ್ಲಾಳದಲ್ಲಿರುವ ಆಕ್ಸ್​ಫರ್ಡ್ ಪದವಿ ಕಾಲೇಜನ್ನು ಪರೀಕ್ಷೆ ನಡೆಸಲು ಬಾಡಿಗೆ ಪಡೆದಿದ್ದ ಸ್ಪೂರ್ತಿ ಅಧ್ಯಯನ ಕೇಂದ್ರ ಸಾಮೂಹಿಕ ನಕಲು ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಇದನ್ನು ರಹಸ್ಯ ಕಾರ್ಯಾಚರಣೆ ತಂಡ ಸೆರೆ ಹಿಡಿದಿದೆ.

    ಕೆಲಸದಲ್ಲಿ ಬಡ್ತಿ ಪಡೆಯಲು, ಉನ್ನತ ಶಿಕ್ಷಣದ ಹಂಬಲದಿಂದ ಅಭ್ಯರ್ಥಿಗಳು ದೂರ ಶಿಕ್ಷಣದ ಮೂಲಕ ಕೋರ್ಸ್​ಗೆ ಪ್ರವೇಶ ಪಡೆದುಕೊಳ್ಳುತ್ತಾರೆ. ಆದರೆ ಇದನ್ನೇ ಬಂಡವಾಳವನ್ನಾಗಿಸಿಕೊಳ್ಳುವ ಅಧ್ಯಯನ ಕೇಂದ್ರಗಳು ಹೆಚ್ಚಿನ ಹಣ ಪಡೆದು ಪಠ್ಯಪುಸ್ತಕಗಳನ್ನೇ ಕೊಟ್ಟು ಪರೀಕ್ಷೆ ಬರೆಸುತ್ತಾರೆ. ಇದರಿಂದ ಕಷ್ಟಪಟ್ಟು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಶ್ರಮಕ್ಕೆ ಬೆಲೆಯೇ ಇಲ್ಲದಂತಾಗಿದೆ.

    ಸಾಮೂಹಿಕ ನಕಲು: ಸ್ಪೂರ್ತಿ ಅಧ್ಯಯನ ಕೇಂದ್ರದ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಿ ಪರೀಕ್ಷೆ ಬರೆಸುವ ವಿಚಾರ ತಿಳಿದು ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿಯ ತಂಡ ವಿದ್ಯಾರ್ಥಿಗಳ ಸೋಗಿನಲ್ಲಿ ಆಕ್ಸ್​ಫರ್ಡ್ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದಾಗ ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದುದು ಕಂಡು ಬಂತು. ಕೊಠಡಿ ಪರಿವೀಕ್ಷಕರು ಹೊರಗಡೆ ಕುಳಿತು ಮೊಬೈಲ್​ನಲ್ಲಿ ಮಗ್ನರಾಗಿದ್ದರು.

    ಅವಧಿಗೂ ಮೊದಲೇ ಪರೀಕ್ಷೆ: ಕಾಪಿ ಮಾಡಲು ಮೊದಲೇ ಹಣ ಪಾವತಿಸಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷೆ 9 ಗಂಟೆ ಆರಂಭವಾಗಿ 12 ಗಂಟೆಗೆ ಮುಕ್ತಾಯವಾಗಬೇಕಿತ್ತು. ಆದರೆ, ಹಣ ನೀಡಿರುವ ವಿದ್ಯಾರ್ಥಿಗಳಿಗೆ 8.30ಕ್ಕೆ ಪರೀಕ್ಷೆ ಬರೆಯಲು ವಿಶೇಷ ಅವಕಾಶ ಕಲ್ಪಿಸಿಕೊಟ್ಟಿತ್ತು. ವಿದ್ಯಾರ್ಥಿಗಳು ಕ್ಯಾಮರಾ ಕಂಡೊಡನೆ ಪುಸ್ತಕವನ್ನು ಬಾಗಿಲ ಸಂದಿಗೆ ಎಸೆಯಲು ಆರಂಭಿಸಿದರು.

    ನನಗೆ ಗೊತ್ತೇ ಇಲ್ಲ ಎಂದರು!

    ಪರೀಕ್ಷೆಯ ಸಂಯೋಜಕರಾಗಿ ವಿವಿಯು ಮೌಲ್ಯಮಾಪನ ವಿಭಾಗದ ಅಧಿಕಾರಿ ಕೃಷ್ಣ ಅವರನ್ನು ವಿವಿ ನೇಮಕ ಮಾಡಿದೆ. ಆದರೆ, ಕೃಷ್ಣ ಅವರು ಪರೀಕ್ಷೆಯ ಕೊಠಡಿ ಪರಿಶೀಲನೆ ನಡೆಸುವ ಬದಲು ಸ್ಪೂರ್ತಿ ಅಧ್ಯಯನ ಕೇಂದ್ರದ ಮಾಲೀಕರೊಂದಿಗೆ ನೆಲ ಮಹಡಿಯಲ್ಲಿ ಉಭಯ ಕುಶಲೋಪರಿ ನಡೆಸುತ್ತಿದ್ದರು. ಸಾಮೂಹಿಕ ನಕಲು ಮಾಡುತ್ತಿರುವುದನ್ನು ಪ್ರಶ್ನಿಸಿದಕ್ಕೆ ಗಾಬರಿಯಾದ ಅವರು ನನಗೆ ಗೊತ್ತೇ ಇಲ್ಲ. ನಾನು ಹೋಗಿದ್ದಾಗ ಅಂತಹದ್ದೇನೂ ನಡೆಯುತ್ತಿರಲಿಲ್ಲ. ನನಗೆ ಪದೇ ಪದೇ ಹೋಗಲು ಆಗುವುದಿಲ್ಲ. ಇತರೆ ಕೆಲಸಗಳು ಸಹ ಇರುತ್ತದೆ ಎಂದು ಸಮರ್ಥನೆ ಮಾಡಿಕೊಂಡರು.

    ಆಕ್ಸ್​ಫರ್ಡ್ ಆಡಳಿತ ಮಂಡಳಿ ಬೇಸರ

    ಪರೀಕ್ಷೆ ನಡೆಸುವುದಾಗಿ ಬಾಡಿಗೆ ಪಡೆದಿರುವ ಅಧ್ಯಯನ ಕೇಂದ್ರ ಸಾಮೂ ಹಿಕ ನಕಲಿಗೆ ಅವಕಾಶ ನೀಡಿ ನಮ್ಮ ಕಾಲೇಜಿನ ಗೌರವಕ್ಕೆ ಧಕ್ಕೆ ತಂದಿದೆ. ಅಧ್ಯಯನ ಕೇಂದ್ರದ ವಿರುದ್ಧ ಕುವೆಂಪು ವಿವಿಗೆ ದೂರು ನೀಡುತ್ತೇವೆ. ಪರೀಕ್ಷಾ ಕೇಂದ್ರವನ್ನು ರದ್ದು ಮಾಡಲು ಮನವಿ ಮಾಡುತ್ತೇವೆಂದು ಆಕ್ಸ್​ಫರ್ಡ್ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಪರೀಕ್ಷೆ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳನ್ನು ದೂರ ಶಿಕ್ಷಣ ಕೇಂದ್ರಗಳು ಬಾಡಿಗೆಗೆ ಪಡೆಯುತ್ತವೆ. ಕಾಪಿ ಮಾಡುವುದು ಮೊದಲೇ ಪ್ಲಾನ್ ಆಗಿರುವುದರಿಂದ ಪರೀಕ್ಷೆ ಸಮಯದಲ್ಲಿ ನಮ್ಮನ್ನೇ ಕೇಂದ್ರದೊಳಗೆ ಬಿಡುವುದಿಲ್ಲ. ಇವರಿಂದ ನಮ್ಮ ಕಾಲೇಜಿಗೆ ಕೆಟ್ಟ ಹೆಸರು ಬಂದಿದೆ. ಇನ್ನು ಮುಂದೆ ಪರೀಕ್ಷೆಗೆ ಕಾಲೇಜನ್ನು ಬಾಡಿಗೆಗೆ ನೀಡುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

    ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ರಹಸ್ಯ ಕಾರ್ಯಾಚರಣೆ ನಡೆಸಿರುವುದು ಒಳ್ಳೆಯ ವಿಚಾರ. ತಕ್ಷಣವೇ ಮಾಹಿತಿ ಪಡೆದು ಅಧ್ಯಯನ ಕೇಂದ್ರ ರದ್ದು ಮಾಡುತ್ತೇವೆ.

    | ಡಾ.ಬಿ.ಪಿ.ವೀರಭದ್ರಪ್ಪ ಕುಲಪತಿ, ಕುವೆಂಪು ವಿವಿ

    ಕ್ರಮದ ಭರವಸೆ ನೀಡಿದ ಡಿಸಿಎಂ

    ಹಣ ಪಡೆದು ಕಾಪಿ ಹೊಡೆಯಲು ಅವಕಾಶ ನೀಡಿರುವುದು ದುರಂತ. ತಕ್ಷಣವೇ ವಿವಿಯಿಂದ ವರದಿ ಪಡೆದು ಅಧ್ಯಯನ ಕೇಂದ್ರ ರದ್ದು ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ. ಸಾಮೂಹಿಕ ನಕಲು ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣ ತನಿಖೆಗಾಗಿ ಶೀಘ್ರದಲ್ಲೇ ಸಮಿತಿ ರಚನೆ ಮಾಡುತ್ತೇನೆ. ಕಾಪಿ ಹೊಡೆಯಲು ಸಹಕಾರ ನೀಡಿದ ಆರೋಪದ ಮೇಲೆ ಕುವೆಂಪು ವಿವಿ ಪರೀಕ್ಷಾ ಸಂಯೋಜಕ ಕೃಷ್ಣ ಮತ್ತು ಸ್ಪೂರ್ತಿ ಸ್ಟಡಿ ಸೆಂಟರ್ ವಿರುದ್ಧ ಶಿಸ್ತುಕ್ರಮ ಜರುಗಿಸ ಲಾಗುವುದು ಎಂದು ಭರವಸೆ ನೀಡಿದರು.

    | ದೇವರಾಜ್ ಎಲ್/ದೀಪ್ತಿತೋಳ್ಪಾಡಿ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts