More

    ಗುತ್ತಿಗೆ ನೌಕರರ ನೇಮಕಾತಿಗೆ ತಾತ್ಕಾಲಿಕ ತಡೆ ; ದಾಂಧಲೆಯಿಂದ ಎಚ್ಚೆತ್ತ ವಿಸ್ಟ್ರಾನ್ ಕಂಪನಿ ಆಡಳಿತ ಮಂಡಳಿ

    | ಪಾ.ಶ್ರೀ.ಅನಂತರಾಮ್ ಕೋಲಾರ

    ವಿಸ್ಟ್ರಾನ್ ಕಂಪನಿಯಲ್ಲಿ ಡಿ.12ರಂದು ನಡೆದ ದಾಂಧಲೆಯಿಂದ ಎಚ್ಚೆತ್ತಿರುವ ಕಂಪನಿ ಆಡಳಿತ ಮಂಡಳಿ ಸದ್ಯಕ್ಕೆ ಗುತ್ತಿಗೆ ಆಧಾರದ ಮೇಲೆ ಯಾರನ್ನೂ ಕೆಲಸಕ್ಕೆ ತೆಗೆದುಕೊಳ್ಳದಿರಲು ನಿರ್ಧರಿಸಿದೆ. ಗುತ್ತಿಗೆದಾರರ ಮೂಲಕ ನೌಕರರಿಗೆ ಸೇರಿರುವ ಕಾರ್ಮಿಕರ ಮೇಲೂ ಈ ನಿರ್ಧಾರ ಪ್ರತಿಕೂಲ ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಂಪನಿಯಲ್ಲಿ 14 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲು ಅವಕಾಶವಿದೆ ಎಂಬುದು ಸರ್ಕಾರದ ಮಾಹಿತಿ. ಆದರೆ 7 ಸಾವಿರ ಕಾರ್ಮಿಕರಿದ್ದು, ಕಾಯಂ ಹಾಗೂ ಡಿ ಗ್ರೂಫ್ ನೌಕರರನ್ನು ಬಳಸಿಕೊಂಡು ದುರಸ್ತಿ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ಕಾಲೇಜು ವಿದ್ಯಾರ್ಥಿಗಳಾಗಿದ್ದು ಮನೆಯಲ್ಲಿ ಕಷ್ಟವಿದೆ ಎಂಬ ಕಾರಣ ಹೇಳಿ ಕೆಲಸಕ್ಕೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಇವರಲ್ಲಿ ಕೆಲವರು ಸ್ಥಳೀಯರು, ಉಳಿದವರು ಜಿಲ್ಲೆಯ ಹೊರಗಿನವರು ಎಂದು ಪೊಲೀಸ್ ಮೂಲಗಳಿಂದ ಖಚಿತಪಟ್ಟಿದೆ.

    ಕಂಪನಿ ಆಡಳಿತ ವಿಭಾಗದ ಮುಖ್ಯಸ್ಥ ಪ್ರಶಾಂತ್ ಪೊಲೀಸರಿಗೆ ನೀಡಿರುವ ವರದಿಯಲ್ಲಿ 437.70 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದ್ದರು. ನಂತರ ಕಂಪನಿಯ ಮತ್ತೊಂದು ಪ್ರಕಟಣೆಯಲ್ಲಿ 54 ಕೋಟಿ ರೂ. ನಷ್ಟವಾಗಿದೆ ಎಂದಿರುವುದರಿಂದ ಸರ್ಕಾರ ಮತ್ತು ಸಾರ್ವಜನಿಕರಲ್ಲಿ ಉಂಟಾಗಿದ್ದ ಗೊಂದಲ ಮತ್ತು ಆತಂಕಕ್ಕೆ ತೆರೆ ಎಳೆದಂತಾಗಿದೆ. ಆದರೂ ತನಿಖೆಯ ಅಂತಿಮ ವರದಿಯಲ್ಲಿ ಏನಿರುತ್ತದೋ ಕಾದು ನೋಡಬೇಕಿದೆ.

    ವರದಿ ಕೇಳಿದ ಕೇಂದ್ರ ಸರ್ಕಾರ: ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕೇಂದ್ರ ಗೃಹ ಇಲಾಖೆ ರಾಜ್ಯಕ್ಕೆ ಪತ್ರ ಬರೆದಿದೆ ಎನ್ನಲಾಗಿದೆ. ಜತೆಗೆ ಪ್ರತಿಭಟನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

    ತಪ್ಪು ಮುಚ್ಚಿಕೊಳ್ಳಲು ಯತ್ನ: ಕಾರ್ಮಿಕರಿಗೆ ಸರಿಯಾಗಿ ವೇತನ ನೀಡದೆ ದುರಂತಕ್ಕೆ ಕಾರಣರಾಗಿರುವ ಗುತ್ತಿಗೆ ಸಂಸ್ಥೆಯವರು, ಕಂಪನಿಯಿಂದ ಬಿಡುಗಡೆಯಾದ ಅನುದಾನವನ್ನು ಗುತ್ತಿಗೆ ಕಾರ್ಮಿಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಸಾಫ್ಟ್‌ವೇರ್ ಪ್ರಾಬ್ಲಂ ಇತ್ತು. ಈ ವಿಷಯವನ್ನು ಕಂಪನಿ ಅಧಿಕಾರಿಗಳಿಗೆ ಮತ್ತು ಕಾರ್ಮಿಕರಿಗೆ ತಿಳಿಸಿದರೂ ಅನಾಹುತ ನಡೆದಿದೆ ಎಂದು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಪಿತೂರಿ ಶಂಕೆ: ವಿಸ್ಟ್ರಾನ್ ಕಂಪನಿಯಲ್ಲಿ ಹೆಚ್ಚು ವೇತನ ಸಿಗುತ್ತದೆ ಎಂಬ ಕಾರಣಕ್ಕೆ ಇತ್ತೀಚೆಗೆ ನರಸಾಪುರ ಕೈಗಾರಿಕಾ ಪ್ರಾಂಗಣದಲ್ಲಿರುವ ಹತ್ತಾರು ಕಾರ್ಖಾನೆಗಳ ಗುತ್ತಿಗೆ ಕಾರ್ಮಿಕರು ಕೆಲಸ ಬಿಟ್ಟು ಇಲ್ಲಿಗೆ ಸೇರಿರುವುದರಿಂದ ಹತಾಶರಾದ ಕಾರ್ಖಾನೆ ಗುತ್ತಿಗೆದಾರರು ಗಲಭೆ ಸೃಷ್ಟಿಸಿರಬಹುದೆಂದು ಶಂಕಿಸಲಾಗಿದೆ.

    ಅಧಿಕಾರಿಗಳಿಗೆ ನಿರ್ಬಂಧ : ಮಾಧ್ಯಮಗಳಿಗಾಗಲಿ, ಸಾರ್ವಜನಿಕರಿಗಾಗಲಿ ಕಂಪನಿಯಲ್ಲಿ ನಡೆದ ಘಟನೆ ಮತ್ತು ನಷ್ಟಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡದಂತೆ ಮಾಲೀಕರು ನಿರ್ಬಂಧ ವಿಧಿಸಿದ್ದಾರೆ. ಘಟನೆ ನಂತರ ಕಂಪನಿ ಸ್ಥಿತಿ ಹೇಗಿದೆ, ಕೆಲಸ ಪ್ರಾರಂಭವಾಯಿತೇ, ಎಷ್ಟು ಕಾರ್ಮಿಕರು ಹಾಜರಾಗಿದ್ದಾರೆ, ನಷ್ಟ ಪರಿಶೀಲನಾ ಕಾರ್ಯ ಮುಗಿಯಿತೇ ಎಂದು ಕೇಳಿದಾಗ ಹೆಸರು ಹೇಳಲಿಚ್ಛಿಸಿದ ಅಧಿಕಾರಿಯೊಬ್ಬರು ದಯವಿಟ್ಟು ನನ್ನನ್ನು ಏನೂ ಕೇಳಬೇಡಿ ಎಂದಿದ್ದಾರೆ.

    ವಿಚಾರಣೆ ಮುಂದುವರಿಕೆ: ಘಟನೆಯಲ್ಲಿ ಭಾಗಿಯಾಗಿದ್ದರೆಂಬ ಆರೋಪದಡಿ ಬಂಧನಕ್ಕೆ ಒಳಗಾಗಿರುವವರ ವಿಚಾರಣೆ ಮುಂದುವರಿದಿದೆ. ಕೆಲವರು ನ್ಯಾಯಾಲಯದಿಂದ ಜಾಮೀನು ಪಡೆಯಲು ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ, ಪಾಲಕರು ಮಕ್ಕಳನ್ನು ಜೈಲಿನಿಂದ ಬಿಡುಗಡೆ ವಾಡಿಸುವಂತೆ ಸಂಸದ, ಶಾಸಕರು ಹಾಗೂ ಪ್ರಭಾವಿಗಳ ಮೊರೆ ಹೋಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts