More

    ದೇವಸ್ಥಾನ ಜಾತ್ರೆಗಳಿಗಿಲ್ಲ ಅನುಮತಿ: ಧಾರ್ಮಿಕ ಕ್ಷೇತ್ರಗಳ ನಿರ್ಬಂಧ ತೆರೆವು 

    ಮಂಗಳೂರು/ಉಡುಪಿ: ಲಾಕ್‌ಡೌನ್ ಸಂದರ್ಭ ಜಾರಿಗೊಳಿಸಲಾಗಿದ್ದ ಧಾರ್ಮಿಕ ಸೇವೆಗಳ ನಿರ್ಬಂಧವನ್ನು ತೆರವು ಮಾಡಲಾಗಿದೆ. ಧಾರ್ಮಿಕ ಸ್ಥಳಗಳ ಕಾರ್ಯಚಟುವಟಿಕೆಗೆ ಸಂಬಂಧಿಸಿದಂತೆ ಪೂಜಾ ಸ್ಥಳಗಳಾದ ದೇವಾಲಯ, ಮಸೀದಿ, ಚರ್ಚುಗಳು, ಗುರುದ್ವಾರ ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ತೆರೆದು ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲಿಸುವುದರೊಂದಿಗೆ ಪೂಜಾ ಸ್ಥಳಗಳಿಗೆ ಸಂಬಂಧಿಸಿದ ಚಟುವಟಿಕೆ ನಡೆಸಲು ಅನುಮತಿ ನೀಡಲಾಗಿದೆ ಎಂದು ದ.ಕ.ಮತ್ತು ಉಡುಪಿ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿವೆ.

    ಈ ಸಂಬಂಧ ಆದೇಶ ಹೊರಡಿಸಿರುವ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹಾಗೂ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಾತ್ರೆಗಳು, ದೇವಾಲಯ ಉತ್ಸವಗಳು, ಮೆರವಣಿಗೆಗಳು ಮತ್ತು ಸಭೆಗಳಿಗೆ ಅನುಮತಿ ಇಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿ ಪಾಲಿಸಿಕೊಂಡು ಅಮ್ಯೂಸ್‌ಮೆಂಟ್ ಪಾರ್ಕ್ ತೆರೆಯಲು ಅನುಮತಿ ನೀಡಲಾಗಿದೆ. ಜಲಕ್ರೀಡೆ, ಜಲ ಸಂಬಂಧಿತ ಸಾಹಸ ಚಟುವಟಿಕೆಗಳಿಗೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಕುಕ್ಕೆ ದೇವಳದಲ್ಲಿ ಇಂದಿನಿಂದ ಸೇವೆ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು.27ರಿಂದ ಕೆಲವು ಸೇವೆಗಳು ಆರಂಭಗೊಳ್ಳಲಿವೆ. ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕ ಜು.29ರಿಂದ ಶುರುವಾಗಲಿದೆ. ಭಕ್ತರಿಗೆ ಭೋಜನ ಪ್ರಸಾದ ವಿತರಣೆ, ಭಕ್ತರಿಗೆ ದೇವಳದ ವಸತಿ ಗೃಹಗಳಲ್ಲಿ ತಂಗಲು ಅವಕಾಶ ನೀಡಲಾಗಿದೆ.
    ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಮಹಾಭಿಷೇಕ ಸೇವೆ ನೆರವೇರಿಸುವ ಸೇವಾರ್ಥಿಗಳು ಕೋವಿಡ್-19 ಪ್ರಥಮ ಡೋಸ್ ಲಸಿಕೆ ಪಡೆದಿರಬೇಕು ಮತ್ತು ಆರ್‌ಟಿಪಿಸಿಆರ್ ಪರೀಕ್ಷೆ ವರದಿ ಹಾಜರುಪಡಿಸಬೇಕು. ಸೇವೆಗಳಲ್ಲಿ ಇಬ್ಬರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಒಂದು ಬ್ಯಾಚ್‌ನಲ್ಲಿ ನಡೆಯುತ್ತಿದ್ದ ಸರ್ಪಸಂಸ್ಕಾರ ಸೇವೆ ಗುರುವಾರದಿಂದ ಪ್ರತಿದಿನ ಎರಡು ಬ್ಯಾಚ್‌ನಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಒಂದನೇ ಸರದಿ ಹಾಗೂ ಎರಡನೇ ಸರದಿಯು 10 ಗಂಟೆಗೆ ಆರಂಭಗೊಳ್ಳಲಿದೆ.

    ಆನ್‌ಲೈನ್ ಮೂಲಕ ಮುಂಗಡ ಬುಕಿಂಗ್ ಮಾಡಿದ 90 ಮಂದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. 6400 ಭಕ್ತರು ಸರ್ಪಸಂಸ್ಕಾರ ಸೇವೆಗೆ ಆನ್‌ಲೈನ್ ಮೂಲಕ ಕಾಯ್ದಿರಿಸಿದ ಕಾರಣ ಇವರಿಗೆ ಪ್ರಥಮ ಆದ್ಯತೆ ನೀಡಿ ದಿನ ಒಂದಕ್ಕೆ ತಲಾ ಎರಡು ಪಾಳಿಯಲ್ಲಿ ತಲಾ 90ರಂತೆ ಒಟ್ಟು 180 ಸೇವೆಗಳಿಗೆ ಅವಕಾಶ ನೀಡಲಾಗಿದೆ.

    4 ಸರದಿಯಲ್ಲಿ 240 ಆಶ್ಲೇಷ ಬಲಿ: ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ, 8.15 ರಿಂದ, 9.45ರಿಂದ, ಸಂಜೆ 5 ಗಂಟೆಯಿಂದ ಹೀಗೆ 4 ಸರದಿಯಲ್ಲಿ ಒಟ್ಟು 240 ಭಕ್ತರಿಗೆ ಆಶ್ಲೇಷ ಬಲಿ ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ನಾಗಪ್ರತಿಷ್ಠೆ ಸೇವೆ ನೆರವೇರಿಸುವ 25 ಸೇವಾ ರಶೀದಿ, 3 ಭಕ್ತರಿಗೆ ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts