More

    ಭಕ್ತರ ಪ್ರವೇಶಕ್ಕೆ ಸಜ್ಜುಗೊಂಡಿವೆ ದೇವಳಗಳು: ದರ್ಶನ, ಪ್ರಾರ್ಥನೆಗೆ ಮಾತ್ರ ಅವಕಾಶ

    ಮಂಗಳೂರು/ಉಡುಪಿ: ಎರಡು ತಿಂಗಳ ಕರೊನಾ ಲಾಕ್‌ಡೌನ್ ಮುಗಿದು, ಇದೀಗ ಸೋಮವಾರದಿಂದ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ಭಾನುವಾರ ಹೆಚ್ಚಿನ ದೇವಳಗಳಲ್ಲಿ ಆವರಣ ಸ್ವಚ್ಛಗೊಳಿಸುವುದು, ಸ್ಯಾನಿಟೈಸ್ ಮಾಡುವುದು ಮತ್ತಿತರ ಸಿದ್ಧತೆಗಳು ನಡೆದವು.
    ಭಕ್ತರು ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಲು ಅಲ್ಲಲ್ಲಿ ಬೋರ್ಡ್ ಅಳವಡಿಸಲಾಗಿದೆ. ಭಕ್ತರ ಕೈಗೆ ಸ್ಯಾನಿಟೈಸರ್ ಹಾಕುವುದು, ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಮತ್ತು ಅಂತರ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲು ದೇವಳದ ಸಿಬ್ಬಂದಿಗೆ ಆಡಳಿತ ಮಂಡಳಿಗಳು ನಿರ್ದೇಶಿಸಿವೆ.

    ಪ್ರಮುಖ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು, ಕದ್ರಿ, ಕುದ್ರೋಳಿ, ಸೌತಡ್ಕ, ಪೊಳಲಿ, ಕುಡುಪು, ಪುತ್ತೂರು, ಮಂದಾರ್ತಿ, ಆನೆಗುಡ್ಡೆ, ಕುಂಭಾಶಿ, ಕಡಿಯಾಳಿ, ಕೋಟ ಅಮೃತೇಶ್ವರಿ, ಕೋಟಿ ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಸಹಿತ ಎಲ್ಲ ಕ್ಷೇತ್ರಗಳಲ್ಲಿ ಭಕ್ತರ ಪ್ರವೇಶಕ್ಕೆ ತಯಾರಿ ನಡೆದಿದೆ.

    ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳಾರತಿಗೆ ಅವಕಾಶ ಕಲ್ಪಿಸಲಾಗಿದ್ದು, ಪ್ರಸಾದ ನೀಡಲಾಗುವುದಿಲ್ಲ. ದೇವಳದ ವಸತಿಗೃಹದಲ್ಲಿ ತಂಗಲೂ ಅವಕಾಶವಿಲ್ಲ. ಗಂಧ, ತೀರ್ಥ ಪ್ರಸಾದ, ಭೋಜನ ಪ್ರಸಾದ, ಮೂಲಮೃತ್ತಿಕೆ ಪ್ರಸಾದ ನೀಡಲಾಗುವುದಿಲ್ಲ ಎಂದು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಮ್ ಸುಳ್ಳಿ ತಿಳಿಸಿದ್ದಾರೆ.

    ಇಂದು ಏಕಾದಶಿ: ಮೊದಲ ದಿನವೇ ಏಕಾದಶಿಯಾಗಿದ್ದು, ವ್ರತ ಆಚರಿಸುವ ಮಂದಿ ದೇವಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಜತೆಗೆ ಸೋಮವಾರ ಆಗಿರುವುದರಿಂದ ಶಿವ ದೇಗುಲಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರಲಿದೆ. ಬಿಕೋ ಎನ್ನುತ್ತಿದ್ದ ದೇವಳ ಆವರಣ, ಬೀದಿಗಳು ಮತ್ತೆ ಭಕ್ತರಿಂದ ಗಿಜಿಗುಡಲಿವೆ.

    ಧರ್ಮಸ್ಥಳ ದೇವರ ದರ್ಶನಕ್ಕೆ ಅವಕಾಶ:
    ಬೆಳ್ತಂಗಡಿ:
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರದಿಂದ ಕೋವಿಡ್ ಮಾರ್ಗಸೂಚಿ ಅನ್ವಯ ದೇವರ ದರ್ಶನಕ್ಕೆ ಅವಕಾಶವಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ಕ್ಷೇತ್ರಕ್ಕೆ ಬರುವ ಭಕ್ತರು ಸರ್ಕಾರದ ಕೋವಿಡ್ ನಿಯಮಾವಳಿ ಅನುಸರಿಸಬೇಕು. ಮಾಸ್ಕ್ ಕಡ್ಡಾಯ ಧರಿಸಬೇಕು, ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅವಕಾಶವಿದೆ. ಕ್ಷೇತ್ರದಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಗಿದ್ದು, ಕ್ಷೇತ್ರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

    ಅನ್ನಪ್ರಸಾದ, ಸೇವೆ ಇಲ್ಲ: ಭಕ್ತರು ದೇವಳಕ್ಕೆ ಹೋಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಬರಬಹುದು. ಯಾವುದೇ ಸೇವೆ ಮಾಡಿಸಲು ಸದ್ಯ ಅವಕಾಶವಿಲ್ಲ. ಹೆಚ್ಚಿನ ದೇವಸ್ಥಾನಗಳಲ್ಲಿ ತೀರ್ಥ ಕೂಡ ಲಭ್ಯವಿಲ್ಲ. ಅನ್ನಪ್ರಸಾದವೂ ಇರುವುದಿಲ್ಲ. ಕೋವಿಡ್ ಪ್ರಮಾಣ ಮತ್ತಷ್ಟು ಕಡಿಮೆಯಾದ ಬಳಿಕ ಹಂತ ಹಂತವಾಗಿ ಸೇವೆ ಮತ್ತು ಅನ್ನಪ್ರಸಾದವನ್ನು ಆರಂಭಿಸಲು ಉದ್ದೇಶಿಸಲಾಗಿದೆ.

    ಮಲ್ಲಿಗೆ ದರ ದಿಢೀರ್ ಏರಿಕೆ: ಉಡುಪಿ: ದೇವಸ್ಥಾನಗಳು ತೆರೆಯಲು ಸಿದ್ಧತೆ ಆರಂಭವಾಗುತ್ತಿದ್ದಂತೆ ಮಲ್ಲಿಗೆಗೆ ಬೇಡಿಕೆ ಬಂದಿದೆ. ಭಾನುವಾರ ಶಂಕರಪುರ ಮಲ್ಲಿಗೆ ಕಟ್ಟೆಯಲ್ಲಿ 520 ರೂಪಾಯಿಗೆ ಖರೀದಿಯಾಗಿ ಮಾರುಕಟ್ಟೆಯಲ್ಲಿ 700 ರೂಪಾಯಿಗೆ ಮಾರಾಟವಾಗಿದೆ. ಜಾಜಿ ದರವೂ ಏರಿಕೆಯಾಗಿದ್ದು, 170 ರೂ.ಗೆ ಖರೀದಿಯಾಗಿದೆ. ಶನಿವಾರ ಮಲ್ಲಿಗೆಗೆ 340 ರೂ. ಹಾಗೂ ಜಾಜಿಗೆ 150 ರೂ. ಲಭಿಸಿತ್ತು.

    ಮಸೀದಿಗಳಲ್ಲಿ ನಮಾಜ್ ಅವಕಾಶ: ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌ಗೆ ಸೋಮವಾರದಿಂದ ಅವಕಾಶವಿದೆ. ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ಆಯಾ ಆಡಳಿತ ಸಮಿತಿ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಮನೆಯಲ್ಲೇ ವಝು(ಅಂಗಶುದ್ಧಿ) ಮಾಡಿ ನಮಾಜ್‌ಗೆ ಬರಬೇಕು. ಮನೆಯಿಂದಲೇ ಮುಸಲ್ಲಾ(ನಮಾಜ್ ಮಾಡುವಾಗ ನೆಲಕ್ಕೆ ಹಾಸುವ ವಸ್ತ್ರ) ತರಬೇಕು ಎಂದು ದ.ಕ ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮನವಿ ಮಾಡಿದ್ದಾರೆ. ಮಾಸ್ಕ್, ಅಂತರ ಸಹಿತ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.

    ಚರ್ಚ್‌ಗಳೂ ಓಪನ್: ಮಾರ್ಗಸೂಚಿಗೆ ಅನುಸಾರವಾಗಿ ಜನರ ನಡುವೆ ಅಂತರ ಕಾಪಾಡಿಕೊಂಡು ಚರ್ಚುಗಳಲ್ಲೂ ಪೂಜಾ ಕಾರ್ಯಕ್ರಮ ಆಯೋಜಿಸಬಹುದು. ಮಂಗಳೂರು ಧರ್ಮಪ್ರಾಂತ್ಯ ವ್ಯಾಪ್ತಿಯ ಚರ್ಚ್‌ಗಳನ್ನು ತೆರೆಯುವಂತೆ ಬಿಷಪ್ ಮೌಖಿಕವಾಗಿ ತಿಳಿಸಿದ್ದಾರೆ. ಜಿಲ್ಲಾಡಳಿತದ ಆದೇಶ ಇನ್ನೂ ಸಿಕ್ಕಿಲ್ಲ, ಅದನ್ನು ಅನುಸರಿಸಿ, ಏನಾದರೂ ಹೆಚ್ಚುವರಿ ಸೂಚನೆಗಳಿದ್ದರೆ ಆಯಾ ಚರ್ಚ್‌ಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗುವುದು. ಸದ್ಯದ ಪ್ರಕಾರ ಎಲ್ಲ ಚರ್ಚ್‌ಗಳು ತೆರೆದುಕೊಳ್ಳಲಿವೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಲಿನೊ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದ ಬಳಿಕ ಜಿಲ್ಲೆಯ ಚರ್ಚುಗಳಲ್ಲಿ ಭಕ್ತರಿಗೆ ಪ್ರಾರ್ಥನೆಗೆ ಅವಕಾಶ ಕಲ್ಪಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಉಡುಪಿ ಧರ್ಮಪ್ರಾಂತ್ಯ ವಕ್ತಾರರು ತಿಳಿಸಿದ್ದಾರೆ.

    ಸೋಮವಾರದಿಂದ ಎಲ್ಲ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಆದರೆ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆ, ತೀರ್ಥ ಪ್ರಸಾದ, ಅನ್ನದಾನ ಇರುವುದಿಲ್ಲ. ಕೋವಿಡ್ ಪ್ರಮಾಣ ನೋಡಿಕೊಂಡು ಮುಂದಿನ ದಿನಗಳಲ್ಲಿ ಆರಂಭವಿಸಲಾಗುವುದು.
    ಕೋಟ ಶ್ರೀನಿವಾಸ ಪೂಜಾರಿ, ಹಿಂದು ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಇಲಾಖೆ ಸಚಿವ

    ಸೇವೆಗಳನ್ನು ನಡೆಸಲು ಅವಕಾಶ ಇಲ್ಲದಿರುವುದು ಭಕ್ತರ ಭಾವನೆಗೂ ಧಕ್ಕೆ ತರುತ್ತದೆ. ಮಕ್ಕಳಿಗೆ ಅನ್ನಪ್ರಾಶನ, ಹೂವಿನಪೂಜೆ, ರಂಗಪೂಜೆಯಂತಹ ಸೇವೆಗಳನ್ನು ಹರಕೆ ಹೊತ್ತ ಭಕ್ತರು ಸಲ್ಲಿಸಲು ಅವಕಾಶ ನೀಡಬೇಕಾಗಿದೆ. ಆದಾಯದ ದೃಷ್ಟಿಯಿಂದಲೂ ಸೇವೆಗಳನ್ನು ಆರಂಭಿಸಬೇಕಾದ ಅಗತ್ಯವಿದೆ.
    ಅನಂತಪದ್ಮನಾಭ ಆಸ್ರಣ್ಣ, ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಕಟೀಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts