More

    ದೇವಳಗಳಿಂದ ಧರ್ಮದ ಜತೆ ಕೃಷಿಗೆ ಪ್ರೇರಣೆ: ಗದ್ದೆ ಉಳುಮೆಗೆ ಚಾಲನೆ ನೀಡಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ

    ವಿಜಯವಾಣಿ ಸುದ್ದಿಜಾಲ ಪುತ್ತೂರು

    ತಾಲೂಕಿನಲ್ಲಿರುವ ಎಲ್ಲ ದೇವಸ್ಥಾನಗಳನ್ನು ಜೋಡಿಸಿಕೊಂಡು ಸುಮಾರು 80 ಎಕರೆ ಹಡೀಲು ಗದ್ದೆಯಲ್ಲಿ ಬೇಸಾಯ ಮಾಡುವ ಅಭಿಯಾನ ರಾಜ್ಯಕ್ಕೆ ಮಾದರಿ. ಧರ್ಮದ ಜತೆಗೆ ಕೃಷಿಗೆ ಪ್ರೇರಣೆ ನೀಡುವ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯ ಶ್ಲಾಘನೀಯ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವತಿಯಿಂದ ನೈತ್ತಾಡಿ ಬಾಳಗದ್ದೆಯಲ್ಲಿ ಮಂಗಳವಾರ ಭತ್ತ ಬೆಳೆಯೋಣ ಬಾ.. ಗದ್ದೆಗಿಳಿಯೋಣ ಸಾಂಪ್ರದಾಯಿಕ ಮತ್ತು ಯಾಂತ್ರಿಕ ಶೈಲಿಯಲ್ಲಿ ಗದ್ದೆ ಉಳುಮೆಗೆ ಚಾಲನೆ ನೀಡಿ ಮಾತನಾಡಿದರು.

    ಹಿಂದೆ ಭತ್ತದ ಬೇಸಾಯ ಜನರ ಸಂಸ್ಕೃತಿಯ ಭಾಗವಾಗಿತ್ತು. ಬಳಿಕ ಕರಾವಳಿ ಭಾಗದ ಜನರು ವಾಣಿಜ್ಯ ಬೆಳೆಯಾದ ಅಡಕೆ ಇನ್ನಿತರ ಬೆಳೆಗಳತ್ತ ಚಿಂತನೆ ಹರಿಸಿದ ಕಾರಣ ಗದ್ದೆ ಬೇಸಾಯ ಕಡಿಮೆಯಾಯಿತು. ಹಿಂದೆ ಸಾಕಷ್ಟು ಅಕ್ಕಿ ಬೆಳೆಯುತ್ತಿದ್ದ ನಾವು ಪ್ರಸಕ್ತ ಕುಚ್ಚಲಕ್ಕಿಯನ್ನೇ ಬೇರೆ ಕಡೆಯಿಂದ ತರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

    ಹಿರಿಯ ಕೃಷಿಕ ಪರಮೇಶ್ವರ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಬೂಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಐತ್ತಪ್ಪ ನಾಯ್ಕ, ರಾಮದಾಸ್ ಗೌಡ, ಶೇಖರ್ ನಾರಾವಿ, ವೀಣಾ ಬಿ.ಕೆ, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಅರ್ಚಕರಾದ ವಸಂತ ಕೆದಿಲಾಯ, ವೆಂಕಟೇಶ್ ಸುಬ್ರಹ್ಮಣ್ಯ ಭಟ್ ಮತ್ತಿತರರು ಉಪಸ್ಥಿತರಿದ್ದರು.

    ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು ಸ್ವಾಗತಿಸಿದರು. ರಾಮಚಂದ್ರ ಕಾಮತ್ ವಂದಿಸಿದರು. ಡಾ.ಸುಧಾ ಎಸ್.ರಾವ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts