More

    ತಂಪುನಾಡಲ್ಲಿ ಉಷ್ಣಾಂಶ ಏರುಮುಖ

    ಮಡಿಕೇರಿ:

    ಭಾರತದ ಸ್ಕಾಟ್‌ಲ್ಯಾಂಡ್, ದಕ್ಷಿಣದ ಕಾಶ್ಮೀರ ಎಂದೆಲ್ಲಾ ಕರೆಯಲಾಗುವ ಕೊಡಗಿನ ತಂಪು ವಾತಾವರಣ ಅನುಭವಿಸಲು ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ ಈ ವರ್ಷ ಪರಿಸ್ಥಿತಿ ಹಾಗೆ ಇಲ್ಲ. ಬೆಂಗಳೂರು ನಗರ ಜಿಲ್ಲೆ ಮತ್ತು ಕೊಡಗಿನ ಉಷ್ಣಾಂಶಕ್ಕೆ ಹೆಚ್ಚಿನ ವ್ಯತ್ಯಾಸವೇ ಕಂಡು ಬರುತ್ತಿಲ್ಲ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಬಯಲು ಸೀಮೆಯ ಕೋಲಾರದಲ್ಲೇ ಕೊಡಗಿಗಿಂತಲೂ ಕಡಿಮೆ ತಾಪಮಾನ ದಾಖಲಾಗಿದೆ. ಹವಾಮಾನದ ಈ ಆಟ ಪ್ರಜ್ಞಾವಂತರನ್ನು ಚಿಂತಿಸುವಂತೆ ಮಾಡಿದೆ.

    ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮಂಗಳವಾರ (ಮಾ.೨೬) ಬಿಡುಗಡೆ ಮಾಡಿರುವ ರಾಜ್ಯದ ಎಲ್ಲಾ ಜಿಲ್ಲೆಗಳ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಗಮನಿಸಿದರೆ ಕೂಲ್ ಕೂಲ್ ವಾತಾವರಣದ ಜಿಲ್ಲೆ ಎನ್ನುವ ಹೆಗ್ಗಳಿಕೆ ಈ ಬೇಸಿಗೆಯಲ್ಲಿ ಕೊಡಗಿನ ಕೈ ತಪ್ಪಿರುವುದು ಕಂಡು ಬರುತ್ತಿದೆ. ಸೋಮವಾರ (ಮಾ.೨೫) ಬೆಳಗ್ಗೆ ೮.೩೦ರಿಂದ ಮಂಗಳವಾರ ಬೆಳಗ್ಗೆ ೮.೩೦ರ ತನಕ ರಾಜ್ಯಾದ್ಯಂತ ದಾಖಲಾದ ಗರಿಷ್ಠ ಮತ್ತು ಕನಿಷ್ಠ ತಾಪಮಾನದ ವಿವರ ಬಿಡುಗಡೆಯಾಗಿದ್ದು, ಮಲೆನಾಡಿನ ಕೊಡಗಿನಲ್ಲಿ ಗರಿಷ್ಠ ೩೭.೫ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕನಿಷ್ಠ ಉಷ್ಣಾಂಶ ೨೧.೧ ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.

    ಮಲೆನಾಡಿನ ಜಿಲ್ಲೆಗಳಿಗೆ ಹೋಲಿಸಿದರೆ ಬಯಲು ಸೀಮೆಯ ಕೋಲಾರ ತಾಪಮಾನದ ವಿಷಯದಲ್ಲಿ ದಾಖಲೆ ಮಾಡಿದೆ. ಇಲ್ಲಿ ಕಂಡು ಬಂದಿರುವ ಗರಿಷ್ಠ ಉಷ್ಣಾಂಶ ೩೭ ಡಿಗ್ರಿ ಸೆಲ್ಸಿಯಸ್. ಇದು ರಾಜ್ಯದಲ್ಲೇ ದಾಖಲಾದ ಅತ್ಯಂತ ಕಡಿಮೆ ಪ್ರಮಾಣದ ಗರಿಷ್ಠ ಉಷ್ಣಾಂಶ. ಕನಿಷ್ಠ ತಾಪಮಾನವೂ ಇಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡು ಬಂದಿದ್ದು ಕೇವಲ ೧೩.೮ ಡಿಗ್ರಿ ಸೆಲ್ಸಿಯಸ್‌ನಷ್ಟೇ ಉಷ್ಣಾಂಶ ಇತ್ತು. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗದಲ್ಲಿ ಗರಿಷ್ಠ ೪೦.೦೨ ಮತ್ತು ಕನಿಷ್ಠ ೧೮.೮ ಡಿಗ್ರಿ ಸೆಲ್ಸಿಯಸ್, ಹಾಸನದಲ್ಲಿ ಗರಿಷ್ಠ ೩೦, ಕನಿಷ್ಠ ೧೭.೨ ಡಿಗ್ರಿ ಸೆಲ್ಸಿಯಸ್ ಹಾಗೂ ಚಿಕ್ಕಮಗಳೂರಿನಲ್ಲಿ ಗರಿಷ್ಠ ೩೯.೩, ಕನಿಷ್ಠ ೧೭.೭ ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ.

    ಕೊಡಗಿನಲ್ಲಿ ತಣ್ಣಗಿನ ವಾತಾವರಣ ಇರುತ್ತದೆ ಎನ್ನುವ ಕಾರಣಕ್ಕೆ ವಾರಾಂತ್ಯ ಮತ್ತು ಇತರ ರಜಾ ದಿನಗಳಲ್ಲಿ ಬೆಂಗಳೂರು ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಬರುತ್ತಾರೆ. ಆದರೆ ರಾಜ್ಯ ರಾಜಧಾನಿಗೂ ಕಾವೇರಿ ತವರಿಗೂ ಉಷ್ಣಾಂಶದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರುತ್ತಿಲ್ಲ. ಬೆಂಗಳೂರು ನಗರ ಜಿಲ್ಲೆಯಲ್ಲಿ ಗರಿಷ್ಠ ೩೭.೯ ಮತ್ತು ಕನಿಷ್ಠ ೧೬.೯ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಗರಿಷ್ಠ ಉಷ್ಣಾಂಶ ಕೊಡಗಿಗಿಂತ ಕೇವಲ ೦.೪ ಡಿಗ್ರಿ ಸೆಲ್ಸಿಯಸ್ ಮಾತ್ರ ಜಾಸ್ತಿ ಇದ್ದರೆ, ಕನಿಷ್ಠ ತಾಪಮಾನ ೪.೨ ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯೇ ಇದೆ.

    ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡದಲ್ಲಿ ಗರಿಷ್ಠ ಉಷ್ಣಾಂಶ ೩೯.೯, ಕನಿಷ್ಠ ಉಷ್ಣಾಂಶ ೨೧.೧ ಡಿಗ್ರಿ ಸೆಲ್ಸಿಯಸ್, ಉಡುಪಿಯಲ್ಲಿ ಗರಿಷ್ಠ ಉಷ್ಣಾಂಶ ೩೭.೨, ಕನಿಷ್ಠ ಉಷ್ಣಾಂಶ ೨೩.೪ ಹಾಗೂ ಉತ್ತರ ಕನ್ನಡದಲ್ಲಿ ಗರಿಷ್ಠ ಉಷ್ಣಾಂಶ ೩೯.೭, ಕನಿಷ್ಠ ಉಷ್ಣಾಂಶ ೧೯.೩ ಡಿಗ್ರಿ ಸೆಲ್ಸಿಯಸ್ ಕಂಡುಬಂದಿದೆ. ಅತ್ಯಂತ ಹೆಚ್ಚು ತಾಪಮಾನ ರಾಯಚೂರು ಜಿಲ್ಲೆಯಲ್ಲಿ ಕಂಡುಬಂದಿದ್ದು, ಇಲ್ಲಿ ಗರಿಷ್ಠ ತಾಪಮಾನ ೪೨.೯ ಮತ್ತು ಕನಿಷ್ಠ ತಾಪಮಾನ ೨೨.೩ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ಕೊಡಗಿನ ಈ ದುಸ್ಥಿತಿಗೆ ಇಲ್ಲಿ ಪರಿಸರದ ಮೇಲೆ ಆಗುತ್ತಿರುವ ದೌರ್ಜನ್ಯವೇ ಕಾರಣ ಎಂದು ಪರಿಸರವಾದಿಗಳು ಹೇಳುತ್ತಾರೆ. ನಿರಂತರ ಅರಣ್ಯ ನಾಶ, ಎಗ್ಗಿಲ್ಲದೆ ಸಾಗಿರುವ ಭೂ ಪರಿವರ್ತನೆ, ಹಸಿರು ಕಾಡು ಇದ್ದ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಕಾಂಕ್ರಿಟ್ ಕಾಡು.. ಹೀಗೆ ಹಲವು ಕಾರಣಗಳಿಂದ ಜಿಲ್ಲೆಯ ಪರಿಸರ ಹಾಳಾಗುತ್ತಿದೆ. ಇದು ಇಲ್ಲಿಯ ಹವಾಮಾನದ ಮೇಲೆ ನೇರ ಪರಿಣಾಮ ಬೀರಿದ್ದು, ಅನಾವೃಷ್ಠಿ, ತಾಪಮಾನ ಏರಿಳಿತದಂತಹ ವಿದ್ಯಮಾನಗಳು ನಡೆಯುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ರಿಯಲ್ ಎಸ್ಟೇಟ್ ವ್ಯವಹಾರ ಕೊಡಗಿನ ಪರಿಸರ ನಾಶ ಮಾಡಿದೆ. ಕೊಡಗು ಮತ್ತು ದೇಶದ ಹಿತಾಸಕ್ತಿಗಳನ್ನು ಗೌರವಿಸುವಂತೆ ಕೊಡಗಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವವರಿಗೆ ನಾವು ಮನವಿ ಮಾಡುತ್ತೇವೆ. ತಮ್ಮ ಲಾಭದ ಭಾಗವನ್ನು ಕೊಡಗು ಮತ್ತು ಅದರ ಜನರ ರಕ್ಷಣೆಗೆ ದಾನ ಮಾಡಲು ನಾವು ಅವರಿಗೆ ಕರೆ ನೀಡುತ್ತೇವೆ. ರಿಯಲ್ ಎಸ್ಟೇಟ್ ಯೋಜನೆಗಳಿಗೆ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡದಂತೆ ನಾವು ಗ್ರಾಮ ಪಂಚಾಯಿತಿಗಳಿಗೆ ಕರೆ ನೀಡುತ್ತೇವೆ. ಗ್ರಾ.ಪಂ.ಸದಸ್ಯರ ಕರ್ತವ್ಯ ತಮ್ಮನ್ನು ಚುನಾಯಿಸಿದ ಜನರ ಬೇಕು ಬೇಡಗಳನ್ನು ಪೂರೈಸುವುದೇ ಹೊರತು ಪರಿಸರ ದುರ್ಬಲ ಪ್ರದೇಶವಾಗಿರುವ ಕೊಡಗಿಗೆ ಹೆಚ್ಚು ಜನ ಪ್ರವೇಶಿಸಲು ಅನುಕೂಲ ಮಾಡಿಕೊಡುವುದಲ್ಲ. ಯಾವುದೇ ವಾಣಿಜ್ಯ ಭೂ ಪರಿವರ್ತನೆಗಳಿಗೆ ಎನ್‌ಒಸಿ ನೀಡುವುದರ ವಿರುದ್ಧ ನಿರ್ಣಯವನ್ನು ಅಂಗೀಕರಿಸಬೇಕು.
    ಕರ್ನಲ್ ಸಿ.ಪಿ. ಮುತ್ತಣ್ಣ, ಸಂಯೋಜಕ, ಸೇವ್ ಕೊಡಗು ಮತ್ತು ಸೇವ್ ಆಂದೋಲನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts