More

    ಇನ್ನು ಮೂರು ತಿಂಗಳು ಕರುನಾಡು ಕೆಂಡ: ಜಾಗತಿಕ ಉಷ್ಣಾಂಶ ಏರಿಕೆ, 40 ಡಿಗ್ರಿ ಸೆ. ಮೀರಲಿದೆ ತಾಪಮಾನ

    ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಉಷ್ಣಾಂಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮೂರು ತಿಂಗಳು ಕರ್ನಾಟಕ ಸೇರಿ ದೇಶದ ಹಲವೆಡೆ ತಾಪಮಾನ ಏರಿಕೆಯಾಗಲಿದೆ. ಕರ್ನಾಟಕ, ರಾಜಸ್ಥಾನದ ಪೂರ್ವ ಮತ್ತು ಪಶ್ಚಿಮ ಭಾಗ, ಮಧ್ಯಪ್ರದೇಶದ ಪೂರ್ವ ಭಾಗ, ಗುಜರಾತ್, ಗೋವಾ, ಮಧ್ಯ ಮಹಾರಾಷ್ಟ್ರ, ಆಂಧ್ರಪ್ರದೇಶದ ರಾಯಲಸೀಮಾ, ಕೇರಳ, ಉತ್ತರ ಪ್ರದೇಶ, ದೆಹಲಿ, ಚಂಡೀಗಢ, ಹರಿಯಾಣ, ಜಾರ್ಖಂಡ, ಒಡಿಶಾ ಹಾಗೂ ಸೌರಾಷ್ಟ್ರ ಭಾಗದಲ್ಲಿ ಏಪ್ರಿಲ್, ಮೇ ಹಾಗೂ ಜೂನ್ ಅವಧಿಯಲ್ಲಿ ಬೇಸಿಗೆ ಕಾಲದಲ್ಲಿ ಇರುವ ಸಾಮಾನ್ಯ ಉಷ್ಣಾಂಶಕ್ಕಿಂತ 0.5ರಿಂದ 1 ಡಿಗ್ರಿ ಸೆಲ್ಸಿಯಸ್​ವರೆಗೆ ಬಿಸಿಲಿನ ತಾಪಮಾನ ಹೆಚ್ಚಳವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    40 ಡಿಗ್ರಿ ದಾಟುವುದು ನಿಶ್ಚಿತ: ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್​ಗಢ, ಬಿಹಾರ, ಜಾರ್ಖಂಡ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ತೆಲಂಗಾಣದಲ್ಲಿ ಏಪ್ರಿಲ್​ನಿಂದ ಜೂನ್​ವರೆಗೆ ಗರಿಷ್ಠ ತಾಪಮಾನ ಸರಾಸರಿ 40 ಡಿಗ್ರಿ ಸೆಲ್ಸಿಯಸ್ಕ್ಕಿಂತ ಹೆಚ್ಚು ದಾಖಲಾಗಲಿದೆ.

    ರಾಜ್ಯಕ್ಕೂ ಬಿಸಿಲಾಘಾತ: ಕರಾವಳಿ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಏಪ್ರಿಲ್, ಮೇ ಹಾಗೂ ಜೂನ್ ಅವಧಿಯಲ್ಲಿ ಸಾಮಾನ್ಯ ಉಷ್ಣಾಂಶಕ್ಕಿಂತ 0.5 ಡಿಗ್ರಿ ಸೆಲ್ಸಿಯಸ್​ನಿಂದ 1 ಡಿಗ್ರಿ ಸೆಲ್ಸಿಯಸ್​ವರೆಗೆ ಬಿಸಿಲಿನ ತಾಪಮಾನ ಹೆಚ್ಚಳವಾಗಲಿದೆ. ಶುಕ್ರವಾರ ಕಲಬುರಗಿಯಲ್ಲಿ 40.4 ಹಾಗೂ ರಾಯಚೂರಿನಲ್ಲಿ 40.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ವಿಜಯಪುರದಲ್ಲಿ 39.0 ಡಿಗ್ರಿ ಸೆಲ್ಸಿಯಸ್ ದಾಖಲಾದರೆ ಬೆಳಗಾವಿ, ಪಣೆಂಬೂರು, ಧಾರವಾಡ, ಗದಗ, ಹಾವೇರಿ, ಚಿತ್ರದುರ್ಗ, ಮಂಡ್ಯ, ಶಿವಮೊಗ್ಗ, ಬೀದರ್, ಚಿತ್ರದುರ್ಗ, ದಾವಣಗೆರೆ ಮತ್ತಿತರ ಜಿಲ್ಲೆಗಳಲ್ಲಿ ಸರಾಸರಿ 36ರಿಂದ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    4, 7,8ಕ್ಕೆ ಮಳೆ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದ ಹಲವೆಡೆ ಏ.4, 7 ಮತ್ತು 8 ರಂದು ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಚಾಮರಾಜನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೊಡಗು, ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ.

    ಕರೊನಾಗೆ ಬಿಸಿಲಾತಂಕ?: ಕರೊನಾ ಸೋಂಕು ಬಿಸಿಲು ಹೆಚ್ಚಿರುವ ಪ್ರದೇಶದಲ್ಲಿ ಹೆಚ್ಚು ಪಸರಿಸುವುದಿಲ್ಲ ಎಂದು ಕೆಲವು ಸಂಶೋಧನೆಗಳು ಹೇಳಿರುವುದು ಸತ್ಯವಾದಲ್ಲಿ ಭಾರತಕ್ಕೆ ಈ ಮೂರು ತಿಂಗಳು ಎದುರಾಗುವ ಬಿಸಿಲಿನ ಝುಳ ವರದಾನವಾಗಿ ಪರಿಣಮಿಸಲಿದೆ. ಇಲ್ಲಿವರೆಗೆ ಕರೊನಾ ಹರಡುತ್ತಿರುವ ಪ್ರದೇಶಗಳ ದತ್ತಾಂಶ ಆಧಾರವಾಗಿಟ್ಟುಕೊಂಡು ಕೆಲ ವಿದೇಶಿ ಸಂಸ್ಥೆಗಳು ನಡೆಸಿರುವ ಸಂಶೋಧನೆ ಪ್ರಕಾರ, ತಾಪಮಾನ ಕಡಿಮೆ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿದೆ. ತಾಪಮಾನ ಹೆಚ್ಚಿರುವ ಪ್ರದೇಶಗಳಲ್ಲಿ ಹರಡಿದೆಯಾದರೂ ಅದರ ಪ್ರಮಾಣ ಕಡಿಮೆಯಿದೆ ಎಂಬ ವಾದ ಮುಂದಿಟ್ಟಿದ್ದಾರೆ. ಭಾರತದಲ್ಲೂ ಕೆಲವರು ಈ ಮಾತನ್ನು ಹೇಳಿದ್ದಾರಾದರೂ ವಿಶ್ವ ಆರೋಗ್ಯ ಸಂಸ್ಥೆ ಸೇರಿ ಯಾವುದೇ ಸಂಸ್ಥೆ ಇದನ್ನು ದೃಢಪಡಿಸಿಲ್ಲ. ದತ್ತಾಂಶಗಳ ಆಧಾರದಲ್ಲಿ ಅವಲೋಕನ ಹೊರತುಪಡಿಸಿ ವೈರಾಣುವನ್ನು ಆಧಾರವಾಗಿಸಿಕೊಂಡು ವೈಜ್ಞಾನಿಕ ಸಂಶೋಧನೆಗಳು ನಡೆದಿಲ್ಲ. ಹಾಗೇನಾದರೂ ಬಿಸಿಲು ಹಾಗೂ ಕರೊನಾ ಹರಡುವಿಕೆ ವಾದ ಸತ್ಯವಾದರೆ ಬಿಸಿಲು ಭಾರತಕ್ಕೆ ವರದಾನವಾಗಲಿದೆ.

    ದೇಶದ ಹಲವೆಡೆ ಗರಿಷ್ಠ ತಾಪಮಾನ 0.5ನಿಂದ 1 ಡಿಗ್ರಿ ಸೆಲ್ಸಿಯಸ್​ವರೆಗೆ ಏರಿಕೆಯಾಗಲಿದೆ. ರಾಜ್ಯದಲ್ಲೂ ಬಿಸಿಲ ಝುಳ ಹೆಚ್ಚಳವಾಗಿದೆ. ಕಲಬುರಗಿ, ರಾಯಚೂರಿನಲ್ಲಿ 40 ಡಿಗ್ಸಿ ಸೆಲ್ಸಿಯಸ್ ದಾಖಲಾಗಿದೆ. ಇದರ ನಡುವೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ.
    | ಸಿ.ಎಸ್.ಪಾಟೀಲ್ ಹವಾಮಾನ ಇಲಾಖೆ ನಿರ್ದೇಶಕ

    ನಮ್ಮೊಳಗೆ ಮುನಿಸಿಲ್ಲ, ನಾವು ಅಣ್ತಮ್ಮ ರೀತಿ ಕೆಲಸ ಮಾಡ್ತಾ ಇದ್ದೇವೆ – ಡಾ.ಸುಧಾಕರ್ ಸ್ಪಷ್ಟೀಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts