More

    ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್‌ಡೌನ್

    ಕುಂದಾಪುರ: ಖರ್ಜೂರ ಸಾಗಾಟದ ವಾಹನದಲ್ಲಿ ಮುಂಬೈಯಿಂದ ಪ್ರಯಾಣ ಮಾಡಿದ ಮಂಡ್ಯ ಮೂಲದ ಕರೊನಾ ಸೋಂಕಿತ ವ್ಯಕ್ತಿ ಉಡುಪಿ ಜಿಲ್ಲೆ ತೆಕ್ಕಟ್ಟೆ ಗ್ರಾಪಂ ವ್ಯಾಪ್ತಿಯ ಪೆಟ್ರೋಲ್ ಪಂಪ್ ಆವರಣದಲ್ಲಿ ಕೆಲ ಗಂಟೆಗಳ ಕಾಲ ತಂಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
    ಲಾರಿಯಲ್ಲಿ ಇಬ್ಬರು ಚಾಲಕರು ಜತೆಗೆ ಸೋಂಕಿತ ಇದ್ದು ಬಂಕ್‌ನ ಸ್ನಾನದ ಕೊಠಡಿ ಬಳಸಿರುವುದು ಪತ್ತೆಯಾಗಿದೆ. ಲಾರಿ ನಿಲ್ಲಿಸಿ ಅಡುಗೆ ಮಾಡಿ, ಊಟ ಮಾಡಿದ್ದಾರೆ. ಆರೋಗ್ಯ ಇಲಾಖೆ ಮತ್ತು ಪೊಲೀಸರು ಸೋಮವಾರ ರಾತ್ರಿ ಸಿಸಿಟಿವಿ ಇನ್‌ಪುಟ್ ಪರಿಶೀಲನೆ ನಡೆಸಿದ್ದು, ಸೋಂಕಿತ ವ್ಯಕ್ತಿ ತಕ್ಕಟ್ಟೆಯಲ್ಲಿ ಉಳಿದುಕೊಂಡಿರುವುದು ದೃಢಪಟ್ಟಿದ್ದು, ಕುಂದಾಪುರ ಸುತ್ತಮುತ್ತ ತಲ್ಲಣ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ತೆಕ್ಕಟ್ಟೆ ಪೆಟ್ರೋಲ್ ಪಂಪ್ ಮಾಲೀಕ ಸಹಿತ 9 ಮಂದಿ ಮತ್ತು ಲಾರಿ ಸಾಗಾಟದ ವೇಳೆ ತಪಾಸಣೆ ಮತ್ತು ಅವರ ಜತೆಗಿದ್ದ ಸಾಸ್ತಾನ ಟೋಲ್‌ಗೇಟ್‌ನ 6 ಸಿಬ್ಬಂದಿಯನ್ನು ಉದ್ಯಾವರ ಕ್ವಾರಂಟೈನ್‌ಗೆ ಕಳಿಸಲಾಗಿದೆ.
    ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್‌ಡೌನ್ ಮಾಡಲಾಗಿದೆ. ತೆೆಕ್ಕಟ್ಟೆ ಪರಿಸರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಮಂಗಳವಾರ ಕುಂದಾಪುರ ಪುರಸಭೆಯ ಪೌರ ಕಾರ್ಮಿಕರ ಸಹಾಯದಿಂದ ಪೆಟ್ರೋಲ್ ಪಂಪ್ ಆವರಣದಲ್ಲಿ ಟ್ಯಾಂಕರ್ ಮೂಲಕ ಕ್ರಿಮಿನಾಶಕ ಸಿಂಪಡಿಸಲಾಗಿದೆ.

    ಸಾಸ್ತಾನ ಟೋಲ್‌ಗೇಟ್ ಬಂದ್: ಕೋಟ: ತೆಕ್ಕಟ್ಟೆಯಿಂದ ಮುಂಜಾನೆ ಹೊರಟ ಲಾರಿ 3.38ರ ಸುಮಾರಿಗೆ ಸಾಸ್ತಾನ ಟೋಲ್ ಪ್ಲಾಜಾ ದಾಟಿತ್ತು. ಈ ವೇಳೆ ಟೋಲ್‌ನಲ್ಲಿ ಕರ್ತವ್ಯದಲ್ಲಿದ್ದ ಟೋಲ್ ಸಿಬ್ಬಂದಿ ಮತ್ತು ಅವರ ಸಹವರ್ತಿಗಳಾದ ಆರು ಮಂದಿಯನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ. ಸಾಸ್ತಾನದಲ್ಲಿ ಲಾರಿ ಮೂರು ನಿಮಿಷ ನಿಂತಿದ್ದು ಅಲ್ಲಿನ ಟೋಲ್ ಸಿಬ್ಬಂದಿ ಹಾಗೂ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಬಳಿ ಲಾರಿಯಲ್ಲಿದ್ದವರು ಮಾತನಾಡಿದ್ದಾರೆ. ಪ್ರಕರಣದಿಂದ ಸಾಸ್ತಾನ ಟೋಲ್‌ಗೇಟನ್ನು ಸೋಮವಾರ ಮಧ್ಯರಾತ್ರಿಯಿಂದಲೇ ಟೋಲ್‌ನಿಂದ ಮುಕ್ತಗೊಳಿಸಲಾಗಿದ್ದು, ಅಲ್ಲಿರುವ ಸಿಬ್ಬಂದಿ ಮೇಲೆ ನಿಗಾ ವಹಿಸಲಾಗಿದೆ. ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

    ಮಂಡ್ಯ ಸೋಂಕಿತ ತಪಾಸಣೆ ಗೊಂದಲ: ಪಡುಬಿದ್ರಿ: ಮುಂಬೈನಿಂದ ಆಗಮಿಸಿದ ಮಂಡ್ಯದ ಸೋಂಕಿತ ವ್ಯಕ್ತಿ ಇದ್ದ ಟ್ರಕ್ ಹೆಜಮಾಡಿ ಟೋಲ್‌ನಲ್ಲಿ ಏ.22ರಂದು ಮುಂಜಾನೆ 4.22ಕ್ಕೆ ಆಟೊಮ್ಯಾಟಿಕ್ ಸ್ಕಾೃನಿಂಗ್ ಆಗಿ ಸಾಗಿದ ಪರಿಣಾಮ, ಟೋಲ್ ಸಿಬ್ಬಂದಿ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
    ಆದರೆ ಹೆಜಮಾಡಿ ಗಡಿಯ ದಕ್ಷಿಣ ಕನ್ನಡ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿ ಎಲ್ಲ ವಾಹನ ಚಾಲಕರ ಹಾಗೂ ಸಿಬ್ಬಂದಿ ತಪಾಸಣೆ ನಡೆಯುತ್ತಿದ್ದು ಅದರಂತೆ ಮಂಡ್ಯ ಮೂಲದ ಈ ವ್ಯಕ್ತಿಯನ್ನು ತಪಾಸಣೆ ಮಾಡಿದ್ದಾರೋ ಇಲ್ಲವೊ ಎಂಬ ಗೊಂದಲವಿದೆ. ತಪಾಸಣೆ ಮಾಡಿದ್ದರೆ ಈ ಚೆಕ್‌ಪೋಸ್ಟಿನಲ್ಲಿ ಕರ್ತವ್ಯ ನಿರತರಾಗಿದ್ದ ವೈದ್ಯರು, ಪೊಲೀಸ್ ಅಧಿಕಾರಿಗಳು ಆತಂಕ ಎದುರಿಸಬೇಕಾಗಿದೆ. ಸೋಂಕಿತ ವ್ಯಕ್ತಿ ಟ್ರಾವೆಲ್ ಹಿಸ್ಟರಿಯಿಂದ ಅಂದು ಹೆಜಮಾಡಿ ಗಡಿ ತಪಾಸಣಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಆತಂಕಗೊಂಡಿದ್ದು, ಟ್ರಕ್ ತಪಾಸಣೆಯಾಗಿದ್ದರೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಕ್ವಾರಂಟೈನ್‌ಗೊಳಪಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts