More

    ತಂತ್ರಜ್ಞಾನ ಜನರ ಬಾಳಲ್ಲಿ ತರಲಿದೆ ಬೆಳಕು

    ದಾವಣಗೆರೆ: ತಂತ್ರಜ್ಞಾನ ಜನಸಾಮಾನ್ಯರ ಬಾಳಿನಲ್ಲಿ ಹೇಗೆ ಬೆಳಕಾಗಬಲ್ಲದು, ಸಮಾಜಮುಖಿಯಾಗಿ ಬದಲಾವಣೆ ತರಬಲ್ಲದು ಎಂಬುದಕ್ಕೆ ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಮಾದರಿಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಸಾಕ್ಷಿಯಾಯಿತು.

    ಎಸ್.ಎಸ್. ಮಲ್ಲಿಕಾರ್ಜುನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರದರ್ಶನದಲ್ಲಿ ಕಾಲೇಜಿನ 10 ವಿಭಾಗಗಳ ವಿದ್ಯಾರ್ಥಿಗಳು 64 ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು.

    ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆ ಬದಿಯಲ್ಲಿಯೆ ರಿಚಾರ್ಜ್ ಮಾಡಲು ಸೋಲಾರ್ ಯಂತ್ರ, ಅಡಕೆ ನಾರಿನಿಂದ ಡೈಪರ್‌ಗಳ ತಯಾರಿಕೆ, ತರಕಾರಿಗಳ ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದು, ಕೊಳಚೆ ನೀರು ಸಂಸ್ಕರಿಸಿ ಕೃಷಿಗೆ ಬಳಸಿಕೊಳ್ಳುವುದು ಹೀಗೆ ಸಮಾಜಕ್ಕೆ ಉಪಯುಕ್ತವಾದ ಸಂಶೋಧನೆಗಳ ಪಕ್ಷಿನೋಟ ಅಲ್ಲಿತ್ತು.

    ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅಮೃತ್, ಎಸ್.ಕೆ. ಮನೋಜ್, ಪಾಟೀಲ್ ಇವರ ತಂಡವು ಚರಂಡಿ ನೀರನ್ನೆ ಸಂಸ್ಕರಿಸಿ ಒಣ ಭೂಮಿಯಲ್ಲಿನ ಬೆಳೆಗೆ ಹಾಯಿಸುವ ಪ್ರಾಜೆಕ್ಟ ತಯಾರಿಸಿದ್ದು ಗಮನ ಸೆಳೆಯಿತು.

    ಯಾವ ಮಣ್ಣಿಗೆ ಯಾವ ಬೆಳೆ ಸೂಕ್ತ, ಏನು ಗೊಬ್ಬರ ಹಾಕಬೇಕು, ರೋಗ ನಿಯಂತ್ರಣ ಹೇಗೆ ಇದಕ್ಕೆಲ್ಲ ಉತ್ತರವಾಗಿ ‘ಕೃಷಿ ಮಿತ್ರ’ ಎಂಬ ಆ್ಯಪ್ ಅನ್ನು ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ.

    ಆಸ್ಪತ್ರೆಗಳಲ್ಲಿ ರೋಬೋಟ್‌ಗಳನ್ನು ಸೇವೆಗೆ ಉಪಯೋಗಿಸಿಕೊಳ್ಳುವ ಮಾದರಿ ಉಪಯುಕ್ತ ಎನಿಸಿತು. ಅದರಿಂದಲೇ ಆಹಾರ, ಔಷಧ ರವಾನೆ ಮಾಡುವುದು, ಮಾಹಿತಿ ಸಂಗ್ರಹಿಸುವ ಕೆಲಸ ನಡೆಯುತ್ತದೆ ಎಂದು ವಿದ್ಯಾರ್ಥಿಗಳು ವಿವರಿಸಿದರು.

    ಪ್ರದರ್ಶನವನ್ನು ಬೆಂಗಳೂರಿನ ಡಿಎಂಜಿ ಎಮ್‌ಒಆರ್‌ಐನ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ರಾವ್ ಮತ್ತು ಉಪಾಧ್ಯಕ್ಷ ಪ್ರಶಾಂತ್ ಗುರುಪ್ರಸಾದ್ ಉದ್ಘಾಟಿಸಿದರು. ಪ್ರಾಂಶುಪಾಲ ಪ್ರೊ.ಎಚ್.ಬಿ.ಅರವಿಂದ್, ಡೀನ್ ಡಾ.ಜಿ.ಪಿ. ದೇಸಾಯಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts