More

    ಹರಿಜನ ಶಾಲೆ ಮಕ್ಕಳ ಕಣ್ಣೀರು

    ಹುಬ್ಬಳ್ಳಿ: ಇಲ್ಲಿಯ ಗದಗ ರಸ್ತೆ ರಾಮನಗರ- ನೆಹರು ನಗರದಲ್ಲಿರುವ ಜಿಲ್ಲಾ ಪಂಚಾಯಿತಿ ಅನುದಾನಿತ ನಗರ ಹಿತವರ್ಧಕ ಯುವಕ ಸಂಘದ ಹರಿಜನ ಹೆಣ್ಣು ಮಕ್ಕಳ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಬಾಲವಾಡಿಯನ್ನು ಬುಧವಾರ ತೆರವು ಮಾಡಲು ಬಂದಾಗ ಕೆಲಕಾಲ ಬಿಗುವಿನ ವಾತಾವರಣ ನಿರ್ವಣವಾಗಿತ್ತು.

    ಗಾಂಧಿವಾಡಾ ಕೋ- ಆಪ್ ಸೊಸೈಟಿಯವರು ಈ ಜಾಗವನ್ನು ಪಡೆದುಕೊಂಡಿದ್ದು, ಇದೀಗ ಇಲ್ಲಿಯ 2ನೇ ಅಧಿಕ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್​ಸಿ ಕೋರ್ಟ್​ನಲ್ಲಿ ದಾವೆ ಹೂಡಿ ತೆರವಿಗೆ ಆದೇಶ ತಂದಿದ್ದಾರೆ. ಅದರಂತೆ ಬುಧವಾರ ಶಾಲೆ ತೆರವು ಮಾಡಲು ಪೊಲೀಸ್ ನೆರವಿನೊಂದಿಗೆ ಸ್ಥಳಕ್ಕೆ ಬಂದಾಗ ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ಪಾಲಕರು ತೆರವು ಮಾಡದಂತೆ ಮನವಿ ಮಾಡಿದರು. ಒಂದಿಷ್ಟು ಸಮಯ ನೀಡಬೇಕೆಂದೂ ಕೋರಿದರು.

    ಕರೊನಾದಿಂದಾಗಿ ಈಗಷ್ಟೇ ಎರಡು ತಿಂಗಳಿಂದ ಶಾಲೆ ಆರಂಭವಾಗಿವೆ. ಈ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಮಕ್ಕಳು ಕಲಿಯಲು ಅವಕಾಶ ನೀಡಬೇಕು. ಇಲ್ಲದಿದ್ದರೆ 140ಕ್ಕೂ ಹೆಚ್ಚು ಮಕ್ಕಳು ಬೀದಿಗೆ ಬೀಳುತ್ತಾರೆ ಎಂದು ಶಾಲೆಯ ಪ್ರಧಾನ ಗುರುಗಳಾದ ವೀರಪ್ಪ ಹಂಚಿನಮನಿ ಗೋಗರೆದರು.

    ನಾವು ಬಡವರ ಮಕ್ಕಳು, ಸಮೀಪದಲ್ಲಿ ಬೇರೆ ಶಾಲೆ ಇಲ್ಲ. ನಮಗೆ ಇದೇ ಶಾಲೆ ಬೇಕು. ನಮ್ಮನ್ನು ಹೊರಗೆ ಹಾಕಬೇಡಿ ಎಂದು ವಿದ್ಯಾರ್ಥಿನಿಯರು ಕಣ್ಣೀರುಗರೆದರು.

    ಶಿಕ್ಷಣ ಪ್ರತಿಯೊಬ್ಬ ಮಗುವಿನ ಹಕ್ಕು. ಈ ಜಾಗ ಯಾರೇ ಪಡೆದುಕೊಂಡಿದ್ದರೂ ಇಲ್ಲಿರುವ ಜಾಗವನ್ನು ಶಾಲೆಗೇ ಬಿಟ್ಟು ಕೊಡಬೇಕು. ಈ ಬಗ್ಗೆ ಎಲ್ಲರಿಗೂ ಮನವಿ ಮಾಡುವುದಾಗಿ ಸ್ಥಳೀಯ ಮುಖಂಡ ಸುನೀಲ ಸಾಂಡ್ರಾ ಹೇಳಿದರು.

    ಬೇಲೀಫರು ಹಾಗೂ ಅಧಿಕಾರಿಗಳು, ಇದು ಕೋರ್ಟ್ ಆದೇಶ. ನಾವು ಪಾಲನೆ ಮಾಡುತ್ತಿದ್ದೇವೆ ಅಷ್ಟೇ. ಶಾಲೆಯಲ್ಲಿನ ಪಾಠೋಪಕರಣ, ಇತರೆ ವಸ್ತುಗಳನ್ನು ಹೊರಗೆ ಇಡಲು ಬಿಡಿ ಎಂದು ಆದೇಶ ಪಾಲನೆಗೆ ಮುಂದಾದರು.

    ಶಾಲೆ ಮಕ್ಕಳಿಗೆ ತೊಂದರೆ

    1960ರ ದಶಕದಲ್ಲಿ ಆರಂಭವಾದ ಈ ಶಾಲೆ ಅನುದಾನಿತವಾಗಿದೆ. ಒಂದರಿಂದ 7ನೇ ತರಗತಿ ವರೆಗೆ ವರ್ಗಗಳು ನಡೆಯುತ್ತಿವೆ. ನಗರ ಹಿತವರ್ಧಕ ಯುವಕ ಸಂಘ ಹಾಗೂ ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿ ಮಧ್ಯದ ವಿವಾದದಲ್ಲಿ ಶಾಲೆ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಜಾಗ ಯಾರಿಗೇ ಸೇರಿದರೂ ಅವರು ಇದನ್ನು ಶಾಲೆಗೆ ಬಿಟ್ಟು ಕೊಡಬೇಕು ಎಂದು ಸ್ಥಳೀಯರು ಹಾಗೂ ಪಾಲಕರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts