More

    ಶಿಕ್ಷಕರು ಕ್ರಿಯಾಶೀಲರಾಗಬೇಕು: ಬಿಇಒ ಮಹೇಶ್.ವಿ.ಪೂಜಾರ

    ಹೂವಿನಹಡಗಲಿ: ತಾಲೂಕಿನ ಎಲ್ಲಾ ಶಾಲೆಗಳ ಶಿಕ್ಷಕರು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಿಯಾಯೋಜನೆಯಂತೆ ಕಾರ್ಯನಿರ್ವಹಿಸಬೇಕು ಎಂದು ಬಿಇಒ ಮಹೇಶ್.ವಿ.ಪೂಜಾರ ಹೇಳಿದರು.

    ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

    ತಾಳೂಕಿನ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಹಂತದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಪಟ್ಟಿ ತಯಾರಿಸಿ ವಿದ್ಯಾರ್ಥಿಗಳ ಈ ಬಾರಿಯ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಹೆಚ್ಚು ಆದ್ಯತೆ ನೀಡಬೇಕು. ಶಾಲೆಗೆ ನಿರಂತರವಾಗಿ ಗೈರಾಗುವ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಪಾಲಕರಲ್ಲಿ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಮೂಲಕ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತಂದು ಹೆಚ್ಚಿನ ಅಭ್ಯಾಸದೆಡೆಗೆ ತೊಡಗುವಂತೆ ಮಾಡಬೇಕು.
    ಎಸ್ಸೆಸ್ಸೆಲ್ಸಿ ಶಾಲೆಗಳಲ್ಲಿ ಗುಂಪು ಚರ್ಚೆಯೊಂದಿಗೆ ಬೆಳಗಿನ ಅವಧಿಯಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚು ಅಭ್ಯಾಸಿಸುವಂತೆ ಶಿಕ್ಷಕರು ಪ್ರೋತ್ಸಾಹಿಸಬೇಕು. ಶಾಲೆಯಲ್ಲಿ ಭಾನುವಾರವೂ ಸಹ ವಿಶೇಷ ತರಗತಿ ತೆಗೆದುಕೊಂಡು ಪ್ರತಿಬಾರಿಯೂ ಸರಣಿ ಕ್ವಿಜ್ ಕಾರ್ಯಕ್ರಮ, ಪಾಲಕರ, ತಾಯಂದಿರ ಸಭೆ ಆಯೋಜಿಸಬೇಕು. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಆಗುವಂತೆ ಕ್ರಮವಹಿಸಬೇಕು ಎಂದರು.

    ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ ಮಾತನಾಡಿ, ಎಸ್‌ಎಟಿಎಸ್ ನಲ್ಲಿ ವಿದ್ಯಾರ್ಥಿಗಳ ಹೆಸರು ಅವರ ತಂದೆ, ತಾಯಿ ಹೆಸರು ಹಾಗೂ ಜನ್ಮದಿನಾಂಕ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ, ಬದಲಾವಣೆ ಇದ್ದಲ್ಲಿ ಸರಿಪಡಿಸಿಕೊಳ್ಳುವಂತೆ ತಿಳಿಸಿದರು.

    ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ, ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಪಿ.ಪ್ರಕಾಶ್, ಎಸ್‌ಕೆಜಿಜಿ ಶಾಲೆಯ ಉಪ ಪ್ರಾಂಶುಪಾಲ ಕೆ.ಚಂದ್ರೇಗೌಡ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್ ಮಲ್ಲಿಕಾರ್ಜುನ, ಮುಖ್ಯ ಗುರುಗಳಾದ ಸುರೇಶ ಅಂಗಡಿ ಹಾಗೂ ತಾಲೂಕು ಸರ್ಕಾರಿ ಅನುದಾನಿತ ಅನುದಾನರಹಿತ ಮೊರಾರ್ಜಿ ವಸತಿ ಶಾಲೆಗಳ ಮುಖ್ಯಗುರುಗಳು ಇತರರು ಹಾಜರಿದ್ದರು.

    ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts