More

    ಸೇವೆಗೆ ಆದ್ಯತೆ ಇರಲಿ, ವೇತನಕ್ಕಲ್ಲ ; ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಸಲಹೆ

    ಚಿಕ್ಕಬಳ್ಳಾಪುರ: ಮಕ್ಕಳ ಅಭಿರುಚಿ ಸಕಾಲಕ್ಕೆ ಗ್ರಹಿಸಿ, ಪರಿಣಾಮಕಾರಿ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿ ಸಮಾಜದ ಉತ್ತಮ ಮತ್ತು ಉನ್ನತ ವ್ಯಕ್ತಿಗಳನ್ನಾಗಿ ರೂಪಿಸುವುದೇ ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿರಬೇಕು ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ತಿಳಿಸಿದರು.

    ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಗುರು ಪರಂಪರೆ ಭಾರತೀಯ ಸಂಸ್ಕೃತಿಯ ಪ್ರತೀಕ. ಪೂಜನೀಯ ಸ್ಥಾನ ನೀಡಲಾಗಿದೆ. ಚಾಣುಕ್ಯನ ಮಾರ್ಗದರ್ಶನದಲ್ಲಿ ಚಂದ್ರಗುಪ್ತ ಮೌರ್ಯ ಸಾಮ್ರಾಜ್ಯ ಕಟ್ಟಿ, ಅರಸನಾದ. ಹಾಗೆಯೇ ಶಿಕ್ಷಕರು ಸಮಾಜಮುಖಿ, ಮಾನವೀಯತೆ, ಮೌಲ್ಯಾಧಾರಿತ ಕಲಿಕೆ ಮೂಲಕ ಮಕ್ಕಳನ್ನು ಜ್ಞಾನ ಸಂಪನ್ನರಾಗಿಸಬೇಕು. ಹಾಗೆಯೇ ಇವರಿಬ್ಬರ ನಡುವೆ ಪ್ರೀತಿ, ವಾತ್ಸಲ್ಯ ಮತ್ತು ಬಾಂಧವ್ಯವೂ ಇರಬೇಕು ಎಂದು ಸಲಹೆಗಳನ್ನು ನೀಡಿದರು.

    ಜೀವನೋಪಾಯಕ್ಕೆ ಹಣ ಮುಖ್ಯ. ಆದರೆ, ಇದರಿಂದಲೇ ನಿಜವಾದ ನೆಮ್ಮದಿ ಪಡೆಯಲು ಸಾಧ್ಯವಿಲ್ಲ. ಇತರರಿಗೆ ನೆರವು ನೀಡಿದಾಗ, ನಮ್ಮಲ್ಲಿನ ಜ್ಞಾನವನ್ನು ಪಸರಿಸಿದಾಗ ಸಿಗುವ ಸಂತೋಷವು ಯಾವುದಕ್ಕೂ ಸಾಟಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಕರು, ವೈದ್ಯರು, ಪೊಲೀಸರು, ಸಮಾಜಮುಖಿ ಸೇವೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸಚಿವ ಸುಧಾಕರ್ ಹೇಳಿದರು.

    ಜಿಲ್ಲಾಮಟ್ಟದ ಪ್ರಶಸ್ತಿ ಪುರಸ್ಕೃತ 18 ಮಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಸಿಇಒ ಪಿ.ಶಿವಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತಿತರರು ಇದ್ದರು.

    ಶಿಕ್ಷಕರ ಶ್ರಮವೇ ಕಾರಣ: ಕಳೆದ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನಗಳಿಸಲು, ಈ ಬಾರಿ ಉತ್ತಮ ಶ್ರೇಣೆಯಲ್ಲಿ ಹೆಚ್ಚು ಮಕ್ಕಳು ಉತ್ತೀರ್ಣರಾಗಲು ಹಾಗೂ 30 ವಿದ್ಯಾರ್ಥಿಗಳು ಪೂರ್ಣ 625 ಅಂಕಗಳನ್ನು ಪಡೆಯಲು ಶಿಕ್ಷಕರ ಪರಿಶ್ರಮ ಮುಖ್ಯ ಕಾರಣ ಎಂದು ಜಿಲ್ಲಾಧಿಕಾರಿ ಆರ್.ಲತಾ ಮೆಚ್ಚುಗೆ ವ್ಯಕ್ತಪಡಿಸಿದರು.

    ನಮ್ಮಪ್ಪ ಹೊಡಿಯೋಕ್ಕೆ ಫೇಮಸ್!: ಶಿಕ್ಷಕರಾದ ನಮ್ಮಪ್ಪ ಹೊಡಿಯೋಕ್ಕೆ ಫೇಮಸ್. ಇದೇ ಕಾರಣಕ್ಕೆ ಮನೆಯಲ್ಲಿ ತಂದೆಯ ಬದಲಿಗೆ ತಾಯಿಯ ಬಳಿಯೇ ಓದಲು ಬಯಸುತ್ತಿದ್ದೆ ಎಂದು ಸಚಿವ ಸುಧಾಕರ್ ಬಾಲ್ಯವನ್ನು ಸ್ಮರಿಸಿಕೊಂಡರು. ಹೊಡೆಯದೇ ಪಾಠ ಹೇಳಿಕೊಡುತ್ತಿದ್ದ ನಮ್ಮ ತಾಯಿಯೇ ನನ್ನ ಮೊದಲು ಗುರು. ನಮ್ಮ ಮೇಡಂ ಲೀಲಾವತಿ ಅವರು ಬಹಳ ಹೊಡೆಯೋರು, ಚೆನ್ನಾಗಿ ಕಿವಿ ಹಿಂಡುತ್ತಿದ್ದರು ಎನ್ನುತ್ತಿದ್ದಂತೆ ಸಭೆ ನಗೆಗಡಲಿನಲ್ಲಿ ತೇಲಿತು.

    ಗುರು ಭವನಕ್ಕೆ ಭೂಮಿ ಪೂಜೆ: ನಗರದ ಜೈನ್ ಆಸ್ಪತ್ರೆಯ ಬಳಿ ಗುರುಭವನ ನಿರ್ಮಾಣಕ್ಕೆ ಸಚಿವ ಡಾ.ಕೆ.ಸುಧಾಕರ್ ಭೂಮಿಪೂಜೆ ನೆರವೇರಿಸಿದರು. ಜಿಲ್ಲೆಯಲ್ಲಿ ಕಳೆದೊಂದು ದಶಕದಿಂದಲೂ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಗುರು ಭವನ ನಿರ್ಮಾಣಕ್ಕೆ ಅಡ್ಡಿಗಳುಂಟಾಗಿದ್ದವು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಗುರುತಿಸಲಾದ ಜಾಗ ವಿವಾದಕ್ಕೆ ಗುರಿಯಾಗಿದ್ದು ಶಿಕ್ಷಕ ವಲಯದಲ್ಲಿ ಬೇಸರಕ್ಕೆ ಕಾರಣವಾಗಿತ್ತು. ಈಗ ಜೈನ್ ಆಸ್ಪತ್ರೆಯ ಬಳಿ 4 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts