More

    ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳು ಕೋಟ್ಯಧೀಶ್ವರರು

    ಗಂಗಾಧರ್ ಬೈರಾಪಟ್ಟಣ

    ರಾಮನಗರ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ರಂಗು ಪಡೆದಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ಸೇರಿ ಒಟ್ಟು 13 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ ಅಂತಿಮ ಕಣದಲ್ಲಿ ಯಾರು ಉಳಿಯಲಿದ್ದಾರೆ ಎನ್ನುವುದು ಇನ್ನಷ್ಟೇ ಖಾತ್ರಿ ಆಗಬೇಕಿದೆ.

    ಆದರೆ, ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರದಲ್ಲಿ ಆಶ್ಚರ್ಯಕರ ಮಾಹಿತಿಗಳು ಹೊರ ಬಿದ್ದಿವೆ. ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಮತ್ತು ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಕೋಟ್ಯಧೀಶರಾದರೆ, ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಕುಮಾರ್ (ಪ್ರವೀಣ್ ಪೀಟರ್) ಅವರ ಬಳಿ ಸ್ವಂತ ಮನೆಯೂ ಇಲ್ಲ.

    ಪುಟ್ಟಣ್ಣ ವಿವರ: ಎಂ.ಎ (ಇತಿಹಾಸ) ಸ್ನಾತಕೋತ್ತರ ಪ್ರದವೀಧರರಾಗಿರುವ ಪುಟ್ಟಣ್ಣ ಮತ್ತು ಪತ್ನಿ ಕೆ.ಎಸ್.ವಿದ್ಯಾಮಣಿ ಹೆಸರಲ್ಲಿ ಒಟ್ಟು 48.68 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಇದೆ. ಪುಟ್ಟಣ್ಣ ಹೆಸರಲ್ಲಿ ಒಂದು ಬೆಂಜ್ ಕಾರು, 21 ಲಕ್ಷ ರೂ. ಮೌಲ್ಯದ ಫಾರ್ಚೂನರ್ ಕಾರು ಇದ್ದರೆ, ಪತಿ-ಪತ್ನಿ ಇಬ್ಬರ ಬಳಿ 69 ಲಕ್ಷ ರೂ. ಮೌಲ್ಯದ 1.45 ಕೆ.ಜಿ. ಚಿನ್ನಾಭರಣ, 3.60 ಲಕ್ಷ ರೂ. ಮೌಲ್ಯದ ಬೆಳ್ಳಿ ಇದೆ. ಇನ್ನು ಠೇವಣಿ, ಸಾಲ ಮತ್ತು ಮುಂಗಡವಾಗಿ ಇಬ್ಬರೂ 19 ಕೋಟಿ ರೂ.ಗಳನ್ನು ಬೇರೆಯವರಿಗೆ ನೀಡಿದ್ದಾರೆ. ಪುಟ್ಟಣ್ಣ ಹೆಸರಲ್ಲಿ ಕೆಂಗೇರಿ ಸೇರಿ ವಿವಿಧೆಡೆ 10 ಎಕರೆಗೂ ಹೆಚ್ಚು ಕೃಷಿ ಮತ್ತು ಕೃಷಿಯೇತರ ಭೂಮಿ ಇದ್ದು, ಒಂದು ಮನೆ, ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ಇದರ ಒಟ್ಟು ಮೌಲ್ಯ 26.23 ಕೋಟಿ ರೂ.ಗಳು. ಜತೆಗೆ ಪುಟ್ಟಣ್ಣ 9.07 ಕೋಟಿ ರೂ. ಸಾಲಗಾರನಾಗಿದ್ದು, ಪತ್ನಿ ವಿದ್ಯಾಮಣಿ 1.81 ಕೋಟಿ ರೂ. ಸಾಲ ಹೊಂದಿದ್ದಾರೆ. ಪುಟ್ಟಣ್ಣ 2019-20ನೇ ಸಾಲಿನಲ್ಲಿ ಘೊಷಿಸಿರುವಂತೆ ಅವರ ಆದಾಯ 63 ಲಕ್ಷ ರೂ. ಇದ್ದರೆ, ಪತ್ನಿ ಆದಾಯ 31 ಸಾವಿರ ರೂ.

    ಎ.ಪಿ.ರಂಗನಾಥ್ ಆಸ್ತಿ: ಎ.ಪಿ. ರಂಗನಾಥ್ ಸಹ ಕೋಟ್ಯಧೀಶ್ವರರೇ. ಎಲ್​ಎಲ್​ಬಿ ಪದವೀಧರಾಗಿರುವ ರಂಗನಾಥ್ ಮತ್ತು ಪತ್ನಿ ಹಾಗೂ ಇವರ ಮಕ್ಕಳ ಹೆಸರಲ್ಲಿ ಒಟ್ಟು 66.25 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. ಇದರಲ್ಲಿ ಪ್ರಮುಖವಾಗಿ 33.35 ಲಕ್ಷ ರೂ. ಮೌಲ್ಯದ 700 ಗ್ರಾಂ ಚಿನ್ನಾಭರಣ, 6.5 ಕೆಜಿ ತೂಕದ 3.97 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳು ಇವೆ. ಇನ್ನು ರಂಗನಾಥ್ ಬಳಿ 23.66 ಲಕ್ಷ ರೂ. ಮೌಲ್ಯದ ಒಂದು ಇನ್ನೋವಾ ಕ್ರಿಸ್ಟಾ ಕಾರು ಇದೆ.

    ಇದರ ಜತೆಗೆ ಜಂಟಿ ಖಾತೆಯಲ್ಲಿ ಬೆಂಗಳೂರಿನ ಅಗರದಲ್ಲಿ 7 ಎಕರೆ ಕೃಷಿ ಭೂಮಿ ಇದ್ದು, ತಮ್ಮದೇ ಹೆಸರಲ್ಲಿ ಸರ್ಕಾರದಿಂದ ಮಂಜೂರಾದ 4 ಎಕರೆ ಜಮೀನು ಇದೆ. ಜತೆಗೆ 28 ಲಕ್ಷ ರೂ. ಮೌಲ್ಯದ ಮನೆ ಇದ್ದು, ಇವುಗಳ ಒಟ್ಟಾರೆ ಮೌಲ್ಯ 10.07 ಕೋಟಿ ರೂ. ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೆ, 24 ಲಕ್ಷ ರೂ. ಸಾಲ ಹೊಂದಿರು ವುದಾಗಿಯೂ ತಿಳಿಸಿರುವ ರಂಗನಾಥ್, 2019-20ರಲ್ಲಿ ಆದಾಯ 5.99 ಲಕ್ಷ ರೂ. ಎಂದು ದಾಖಲಿಸಿದ್ದಾರೆ.

    ಸ್ವಂತ ಮನೆ ಇಲ್ಲದ ಅಭ್ಯರ್ಥಿ

    ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಕೋಟ್ಯಧೀಶರಾಗಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಕುಮಾರ್ ಅವರ ಆಸ್ತಿ ಕೋಟಿ ಲೆಕ್ಕದಲ್ಲಿ ಇಲ್ಲವೇ ಇಲ್ಲ. ವಿಪರ್ಯಾಸವೆಂದರೆ ಇವರಿಗೆ ಸ್ವಂತ ಮನೆಯೇ ಇಲ್ಲ. ಪಿಯುಸಿ ವ್ಯಾಸಂಗ ಮಾಡಿರುವ ಇವರ ಬಳಿ 8.5 ಲಕ್ಷ ರೂ. ಮೌಲ್ಯದ ಒಂದು ಇನ್ನೋವಾ ಕಾರು, ಪತಿ ಮತ್ತು ಪತ್ನಿ ಬಳಿ ಇರುವ 20 ಲಕ್ಷ ರೂ. ಮೌಲ್ಯದ 500 ಗ್ರಾಂ. ಚಿನ್ನಾಭರಣ, 45 ಸಾವಿರ ರೂ. ಮೌಲ್ಯದ ಒಂದು ಕೆಜಿ ಬೆಳ್ಳಿ ಸೇರಿ ಒಟ್ಟು 40 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. ಇದು ಬಿಟ್ಟರೆ ಇವರ ಬಳಿ ಒಂದು ಗುಂಟೆಯೂ ಕೃಷಿ, ಕೃಷಿಯೇತರ ಜಮೀನು ಇಲ್ಲ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದು, 16 ಸಾವಿರ ರೂ. ಸಾಲ ಹೊಂದಿರುವುದಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts