More

    ಕರಿತಿಮ್ಮರಾಯ ಸ್ವಾಮಿ ತೆಪ್ಪೋತ್ಸವ: ಟಿ.ಬೇಗೂರಿನ ದೊಡ್ಡಕೆರೆಗೆ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು

    ನೆಲಮಂಗಲ: ತಾಲೂಕಿನ ಟಿ.ಬೇಗೂರಿನ ದೊಡ್ಡಕೆರೆಯಲ್ಲಿ ಎಂಟು ವರ್ಷಗಳ ಬಳಿಕ ಏರ್ಪಡಿಸಿದ್ದ ಕರಿತಿಮ್ಮರಾಯ ಸ್ವಾಮಿ ತೆಪ್ಪೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.


    ತಿಂಗಳಿಂದ ತಾಲೂಕಿನಾದ್ಯಂತ ಭಾರಿ ಮಳೆಯಾಗಿದ್ದು, ದೊಡ್ಡಕೆರೆ ತುಂಬಿ ಹರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂಪ್ರದಾಯದಂತೆ ತೆಪ್ಪೋತ್ಸವ ಆಯೋಜಿಸಿದ್ದರು.
    ಬೆಳಗ್ಗೆ ಗ್ರಾಮದ ಕರಿತಿಮ್ಮರಾಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕೆರೆ ದಂಡೆಗೆ ತಂದು, ಬಿದಿರಿನಿಂದ ನಿರ್ಮಿಸಿ, ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ತೆಪ್ಪದಲ್ಲಿ ದೇವರನ್ನು ಪ್ರತಿಷ್ಠಾಪಿಸಿದರು. ಬಳಿಕ ಉತ್ಸವಕ್ಕೆ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಚಾಲನೆ ನೀಡಿದರು.


    ಟಿ.ಬೇಗೂರಿನ ದೊಡ್ಡಕೆರೆ ಎರಮಂಚನಹಳ್ಳಿ, ತೊಣಚಿನಕುಪ್ಪೆ ಗ್ರಾಮಗಳಿಗೂ ಆವರಿಸಿದ್ದು, ಮೂರು ಗ್ರಾಮಗಳ ಗ್ರಾಮಸ್ಥರು ಸೇರಿ ವಾಡಿಕೆಯಂತೆ ತೆಪ್ಪೋತ್ಸವ ನೆರವೇರಿಸಿ ಸಂತಸಪಟ್ಟರು.


    ಹರಿದು ಬಂದ ಜನಸಾಗರ: 8 ವರ್ಷಗಳ ಬಳಿಕ ಆಯೋಜಿಸಿದ್ದ ತೆಪೋತ್ಸವದ ಕ್ಷಣಗಳನ್ನು ವೀಕ್ಷಿಸಲೆಂದು ಮೂರು ಗ್ರಾಮಗಳ ಜತೆಗೆ ತಾಲೂಕಿನಾದ್ಯಂತ ಜನಸಾಗರವೇ ಹರಿದು ಬಂದು, ವಿಶಾಲವಾದ ಕೆರೆಯಲ್ಲಿ ನಡೆದ ವಿಜೃಂಭಣೆಯ ತೆಪ್ಪೋತ್ಸವ ಕಣ್ತುಂಬಿಕೊಂಡಿತು.

    ಮಳೆಯ ಸಿಂಚನ: ಮಧ್ಯಾಹ್ನ 12 ಗಂಟೆಗೆ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಆದರೆ 1 ಗಂಟೆ ಸುಮಾರಿಗೆ ಮಳೆರಾಯ ಅಬ್ಬರಿಸಿದ. ಈ ವೇಳೆ ನರೆದಿದ್ದ ಜನರು ಪರದಾಡುವಂತಾಯಿತು. ಕೆಲವರು ಮಳೆಯಲ್ಲಿಯೇ ನಿಂತು ಸಂತಸದ ಕ್ಷಣ ವೀಕ್ಷಿಸಿದರು.

    ಗ್ರಾಮದ ಹೆಸರೇ ಬದಲು: ಕೆಲವು ದಶಕಗಳಿಂದಲೂ ಗ್ರಾಮದಲ್ಲಿನ ದೊಡ್ಡಕೆರೆ ತುಂಬಿಹರಿಯುವ ವೇಳೆ ತೆಪ್ಪೋತ್ಸವ ಆಯೋಜಿಸಲಾಗುತ್ತಿತ್ತು. ಆದ್ದರಿಂದ ಈ ಮೊದಲು ಗ್ರಾಮಕ್ಕಿದ್ದ ಬೇಗೂರು ಎಂಬ ಹೆಸರಿನ ಬದಲಾಗಿ ತೆಪ್ಪದ ಬೇಗೂರು ಎಂದು ಪ್ರಸಿದ್ಧಿ ಪಡೆದುಕೊಂಡಿತು ಎಂದು ಮುಖಂಡ ಮನಿಯಪ್ಪ ತಿಳಿಸಿದರು.

    ನೀರಿಗೆ ಬಿದ್ದ ಮೂವರ ರಕ್ಷಣೆ: ತೆಪ್ಪೋತ್ಸವದ ವೇಳೆ ತೆಪ್ಪದಲ್ಲಿ ಜನಸಂಖ್ಯೆ ಹೆಚ್ಚಾಗಿ ನೂಕುನುಗ್ಗಲು ಉಂಟಾದ್ದರಿಂದ ಮಗು ಹಾಗೂ ಒಬ್ಬ ವ್ಯಕ್ತಿ, ಪುರೋಹಿತರೊಬ್ಬರು ಆಯತಪ್ಪಿ ನೀರಿಗೆ ಬಿದ್ದರು. ಈ ವೇಳೆ ತಕ್ಷಣವೇ ಮೂವರನ್ನೂ ಸ್ಥಳೀಯರು ರಕ್ಷಿಸಿದರು.\

    ನೀರಿನ ಸಮಸ್ಯೆಗೆ ಪರಿಹಾರ: ಕೆಲವು ವರ್ಷಗಳಿಂದಲೂ ಕ್ಷೇತ್ರದಾದ್ಯಂತ ಉತ್ತಮ ಮಳೆಯಾಗದೆ ನೀರಿನ ಸಮಸ್ಯೆ ಎದುರಾಗಿತ್ತು. ಆದರೆ ಈ ಬಾರಿ ವರುಣರಾಯನ ಕೃಪೆಯಿಂದ ಕೆರೆಗಳು ತುಂಬಿ ಹರಿಯುತ್ತಿದ್ದು, ನೀರಿನ ಸಮಸ್ಯೆ ಪರಿಹಾರವಾಗಿದೆ. ಅಂತರ್ಜಲ ವೃದ್ಧಿಯಾಗಲಿದೆ. ಪ್ರತಿವರ್ಷವೂ ಕೆರೆಗಳು ತುಂಬಿಹರಿಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.


    ತಹಸೀಲ್ದಾರ್ ಕೆ.ಮಂಜುನಾಥ್, ತಾಪಂ ಇಒ ಮೋಹನ್‌ಕುಮಾರ್, ರಾಜಸ್ವ ನಿರೀಕ್ಷಕ ಸುದೀಪ್, ಅಶ್ವತ್ಥ್, ಮಾಜಿ ಶಾಸಕ ಎಂ.ವಿ.ನಾಗರಾಜು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊಂಬಯ್ಯ, ಅನುಸೂಚಿತ ಜಾತಿ ಬುಡಕಟ್ಟು ಆಯೋಗದ ಸದಸ್ಯ ವೆಂಕಟೇಶ್ ಎಚ್.ದೊಡ್ಡೇರಿ, ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮರಾಜು, ಮುಖಂಡರಾದ ಸಪ್ತಗಿರಿಶಂಕರ್‌ನಾಯಕ್, ಕನಕರಾಜು, ಬೂದಿಹಾಳ್‌ಕಿಟ್ಟಿ ಇತರರು ಭೇಟಿ ನೀಡಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts