More

    ತೆರಿಗೆ ಸಂಗ್ರಹವೇ ಗುರಿ ಆಗದಿರಲಿ

    ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರು ಪಾವತಿಸುವ ತೆರಿಗೆಗೆ ತಕ್ಕಂತೆ ರಸ್ತೆ, ಕುಡಿಯುವ ನೀರು, ಪಾರ್ಕಿಂಗ್ ಇನ್ನಿತರ ಸೌಲಭ್ಯ ಕಲ್ಪಿಸುವ ಯೋಜನೆ ಹಾಕಿಕೊಳ್ಳಿ. ಕೇವಲ ತೆರಿಗೆ ವಸೂಲಿಗೆ ಮಾತ್ರ ಬಜೆಟ್ ಮಂಡಿಸಬೇಡಿ…

    ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 2020-21ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಾಗರಿಕರು, ಉದ್ಯಮಿಗಳು, ಹೋಟೆಲ್ ಮಾಲೀಕರು, ಪಾಲಿಕೆಯ ಮಾಜಿ ಸದಸ್ಯರು ಹೀಗೆ ಸಲಹೆ ನೀಡಿದರು.

    ಮಹಾನಗರ ಪಾಲಿಕೆ ಅಧಿಕಾರಿಗಳು ಆಸ್ತಿ, ಕಟ್ಟಡ, ಕಸ ವಿಲೇವಾರಿ ತೆರಿಗೆ ಸೇರಿ ವಿವಿಧ ತೆರಿಗೆ ವಸೂಲಿ ಮಾಡುತ್ತಾರೆ. ಆದರೆ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. ಉದ್ಯಮಬಾಗದಲ್ಲಿ 30 ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇವೆ. ಆದರೆ, ಇಲ್ಲಿಯವರೆಗೆ ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಬೀದಿ ದೀಪದ ಸೌಲಭ್ಯಗಳು ಇಲ್ಲ. ಮಹಿಳಾ ಉದ್ಯೋಗಿಗಳು ಓಡಾಡಲು ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಮೇಲಿಂದ ಮೇಲೆ ಮನವಿ ಕೊಟ್ಟರೂ ಪ್ರಯೋಜನವಾಗುತ್ತಿಲ್ಲ. ಈ ಬಾರಿ ಬಜೆಟ್‌ನಲ್ಲಾದರೂ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಉದ್ಯಮಿಗಳು ಒತ್ತಾಯಿಸಿದರು.

    ವಿಶೇಷ ತೆರಿಗೆ ವಿಧಿಸಿ: 2020-21ನೇ ಸಾಲಿನ ಪಾಲಿಕೆ ಬಜೆಟ್‌ನಲ್ಲಿ ಕೈಗಾರಿಕೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಸ್ಮಾರ್ಟ್ ಕೈಗಾರಿಕೆ ಪ್ರದೇಶ ಯೋಜನೆ ಘೋಷಿಸಿ ವಿಶೇಷ ಅನುದಾನ ಮೀಸಲಿಡಬೇಕು. ಜತೆಗೆ ಹೊಸ ಕೈಗಾರಿಕೆಗೆ ಪ್ರದೇಶ ಸ್ಥಾಪನೆ ಮಾಡುವ ಬದಲು ಸದ್ಯ ಲಭ್ಯವಿರುವ ಕೈಗಾರಿಕೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕು. ಪಾಲಿಕೆ ಆದಾಯ ಹೆಚ್ಚಿಸುವ ಜಾಹೀರಾತಿಗೆ ವಿಶೇಷ ತೆರಿಗೆ ವಿಧಿಸಬೇಕು ಎಂದು ತಿಳಿಸಿದರು.

    ಅದಕ್ಕೆ ಸ್ಪಂದಿಸಿದ ಪಾಲಿಕೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ, ಪಾಲಿಕೆ ವ್ಯಾಪ್ತಿಯಲ್ಲಿ ಕಾಮಗಾರಿಗಳಲ್ಲಿ ಮತ್ತು ಇನ್ನಿತರ ಯೋಜನೆಗಳಲ್ಲಿ ನಿಯಮ ಉಲ್ಲಂಘಿಸಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪರವಾನಗಿ ರದ್ದುಪಡಿಸಿ. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ನಗರದಲ್ಲಿ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಪಾಲಿಕೆ ಜಾಗ ಲಭ್ಯವಿರುವ ಕಡೆಗಳಲ್ಲೆಲ್ಲ ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಹಾಗಾಗಿ ಅಧಿಕಾರಿಗಳು ಜಾಗ ಲಭ್ಯತೆಗೆ ಬಗ್ಗೆ ವರದಿ ಸಿದ್ಧಪಡಿಸಬೇಕು. ಬೀದಿ ವ್ಯಾಪಾರಿಗಳು ಪರ್ಯಾಯ ಸ್ಥಳಕ್ಕೆ ಒಂದು ವಾರದೊಳಗೆ ಸ್ಥಳಾಂತರಗೊಳ್ಳಬೇಕು. ಹಂತ ಹಂತವಾಗಿ ಯೋಜನೆಗಳ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

    ಏಪ್ರಿಲ್ 15ರ ಒಳಗಾಗಿ ಚರಂಡಿ ಸ್ವಚ್ಛಗೊಳಿಸಿ: ನಗರದಲ್ಲಿ ನಾಲ್ಕೈದು ವರ್ಷಗಳಿಂದ ಚರಂಡಿ ಸ್ವಚ್ಛಗೊಳಿಸದಿರುವ ಹಿನ್ನೆಲೆಯಲ್ಲಿ ಅತಿವೃಷ್ಟಿ ಸಂದರ್ಭದಲ್ಲಿ ಚರಂಡಿ ನೀರು ರಸ್ತೆ, ಮನೆ, ಅಂಗಡಿಗಳಿಗೆ ನುಗ್ಗಿತ್ತು. ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಕೋಟ್ಯಂತ ರೂ. ಹಾನಿ ಉಂಟಾಯಿತು ಎಂದು ಉದ್ಯಮಿಗಳು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಏಪ್ರಿಲ್ 15ರ ಒಳಗಾಗಿ ನಗರದಲ್ಲಿ ಎಲ್ಲ ಚರಂಡಿಗಳು ಸ್ವಚ್ಛವಾಗಬೇಕು. ಚರಂಡಿಗಳು ಬ್ಲಾಕ್ ಆದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದರು.

    ವ್ಯಾಪಾರ ನಷ್ಟ: ನಗರದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಪರಿಣಾಮ ವ್ಯಾಪಾರ-ವಹಿವಾಟಿನಲ್ಲಿ ಶೇ. 50ರಷ್ಟು ನಷ್ಟ ಉಂಟಾಗಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದ ಸಾಕಷ್ಟು ನಷ್ಟ ಎದುರಿಸುತ್ತಿದ್ದೇವೆ. ಯಾವುದೇ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಹಳೇ ಚರಂಡಿ, ರಸ್ತೆಗಳ ಮೇಲೆ ಕಾಂಕ್ರೀಟ್ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಾಲಿಕೆಗೆ ನಿರ್ವಹಣೆ ಮಾಡುವುದು ಕಷ್ಟವಾಗಲಿದೆ. ಹಾಗಾಗಿ ಮುಂಗಡವಾಗಿ ನಿರ್ವಹಣೆ ವಸೂಲಿ ಮಾಡಲು ಕ್ರಮ ವಹಿಸಬೇಕು ಎಂದು ಪಾಲಿಕೆ ಮಾಜಿ ಸದಸ್ಯರು, ವ್ಯಾಪಾರಿಗಳು ದೂರಿದರು. ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್., ಉಪ ಆಯುಕ್ತ ಎಸ್.ಬಿ. ದೊಡ್ಡಮನಿ, ಎಲ್.ಎಂ. ಸುಳಗೇಕರ್, ಡಾ.ಕವಿತಾ ಯೋಗಪ್ಪನವರ, ಆನಂದ ಬಿ. ಹೊಂಗಲ್ ಇತರರು ಇದ್ದರು.

    ರಸ್ತೆ ಪಾರ್ಕಿಂಗ್‌ಗೆ ತೆರಿಗೆ

    ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ನಗರದ ಪ್ರಮುಖ ರಸ್ತೆಗಳಲ್ಲಿ, ಮನೆ, ಅಂಗಡಿಗಳ ಮುಂಭಾಗದಲ್ಲಿ ವಾಹನ ಪಾರ್ಕಿಂಗ್ ಮಾಡುವವರಿಗೆ ದಂಡದ ರೂಪದಲ್ಲಿ ತೆರಿಗೆ ವಿಧಿಸಬೇಕು ಎಂದು ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಡಿಸಿ ಡಾ. ಬೊಮ್ಮನಹಳ್ಳಿ, ಮನೆ, ಅಂಗಡಿಕಾರರು ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದೆ ರಸ್ತೆಯ ಮೇಲೆ ಪಾರ್ಕಿಂಗ್ ಮಾಡುತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಪಾರ್ಕಿಂಗ್‌ಗೆ ತೆರಿಗೆ ರೂಪದಲ್ಲಿ ದಂಡ ವಸೂಲಿ ಮಾಡಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

    ದಂಡ ವಸೂಲಿ ನಿಲ್ಲಿಸಿ

    ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ವಾಹನ ಸಂಚಾರ ದಟ್ಟಣೆಯಿಂದ ಸವಾರರು ಸಮಸ್ಯೆ ಎದುರಿಸುತ್ತಿದ್ದರೂ ಸಂಚಾರಿ ಪೊಲೀಸರು ಮಾತ್ರ ಸಮಸ್ಯೆ ಬಗೆಹರಿಸದೆ ದಂಡ ವಸೂಲಿಯಲ್ಲಿ ತೊಡಗಿಕೊಂಡಿದ್ದಾರೆ. ಸ್ಮಾರ್ಟ್ ಸಿಟಿ ಕಾಮಗಾರಿ ಮುಗಿಯುವವರೆಗೆ ಪೊಲೀಸರಿಗೆ ದಂಡ ವಿಧಿಸುವದನ್ನು ಕೈಬಿಡುವಂತೆ ಸೂಚನೆ ನೀಡಬೇಕು ಎಂದು ವ್ಯಾಪಾರಿಗಳು, ಉದ್ಯಮಿಗಳು ಡಿಸಿಗೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts