More

    ತಾಲೂಕು ಅಧಿಕಾರಿಗಳಿಗೆ ತರಾಟೆ

    ಸವದತ್ತಿ: ತಾಲೂಕಿನಲ್ಲಿ 95242 ಪಡಿತರದಾರರಿಗೆ ಅಕ್ಕಿ, ಬೆಳೆ, ಸೀಮೆ ಎಣ್ಣೆ, ಗೋಧಿ ಸಾಮಗ್ರಿಗಳನ್ನು ಯಾವ ಮಾನದಂಡದ ಮೇಲೆ ನೀಡುತ್ತೀರಿ? ಸಮರ್ಪಕ ಮಾಹಿತಿ ಇಲ್ಲದೆ ವರ್ಷದಲ್ಲಿ ಮೊದಲ ಕೆಡಿಪಿ ಸಭೆಗೆ ಹಾಜರಾದ ನಿಮಗೆ ಎಲ್ಲ ಪ್ರಶ್ನೆಗಳಿಗೂ ಮೌನ ಒಂದೇ ಉತ್ತರವಾಗಿದೆ ಎಂದು ಅಹಾರ ನಿರೀಕ್ಷಕ ಐ.ಕೆ. ಕುಂದುನಾಯಕ ಅವರನ್ನು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ತರಾಟೆಗೆ ತೆಗೆದುಕೊಂಡರು.

    ಇಲ್ಲಿನ ತಾಪಂ ಸಭಾಭವನದಲ್ಲಿ ಶನಿವಾರ ಜರುಗಿದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ನಿವೃತ್ತಿ ಅಂಚಿನಲ್ಲಿರುವ ನಿಮ್ಮಂತಹ ಹಿರಿಯ ಅಧಿಕಾರಿಗಳೇ ಅಸಮರ್ಪಕ ಉತ್ತರ ನೀಡಿದರೆ ಹೇಗೆ? ಕೋವಿಡ್ ವೇಳೆ ನೀಡಿದ ಪಡಿತರವನ್ನೇ ಈಗಲೂ ನೀಡುತ್ತಿದ್ದೀರೋ ಅಥವಾ ಪ್ರಮಾಣವನ್ನಾದರೂ ತಿಳಿಸಿ ಎಂದರು. ತಡವರಿಸಿದ ಅಧಿಕಾರಿ ಒಟ್ಟು 130 ನ್ಯಾಯಬೆಲೆ ಅಂಗಡಿ, 2 ಸಗಟು ಮಳಿಗೆ, 2 ಸೀಮೆಎಣ್ಣೆ, 4 ಗ್ಯಾಸ್ ಎಜೆನ್ಸಿಗಳಿವೆ ಎಂದು ಉತ್ತರಿಸಿದರು. ಜಲಜೀವನ್ ಮಿಷನ್ ಅಡಿ 69.15 ಕೋಟಿ ರೂ. ಅನುದಾನದಲ್ಲಿ 78 ಕಾಮಗಾರಿಗಳ ಟೆಂಡರ್ ಕರೆಯಲಾಗಿದೆ. ಅದರಲ್ಲಿ 30 ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದವುಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಅಧಿಕಾರಿ ಎಂ.ಜಿ.ರೇವಣಕರ ಸಭೆಗೆ ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಮಹೇಶ ಚಿತ್ತರಗಿ ಮಾತನಾಡಿ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 1,458 ರ ಪೈಕಿ 1,128 ಸಿಬ್ಬಂದಿಗೆ ವ್ಯಾಕ್ಸಿನ್ ನೀಡಿದ್ದು, ಅಡ್ಡ ಪರಿಣಾಮ ಕಂಡುಬಂದಿಲ್ಲ. ಗಂಟಲು ದ್ರವ ಮಾದರಿ ಪರೀಕ್ಷೆ ಚಾಲ್ತಿಯಲ್ಲಿದೆ. ಸದ್ಯ ಕೋವಿಡ್ ಪ್ರಕರಣಗಳು ಇಲ್ಲವೆಂದು ತಿಳಿಸಿದರು. ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಶಾಲಾ ಕೊಠಡಿಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ಬಿಇಒ ಹಾಗೂ ತಹಸೀಲ್ದಾರ್‌ಗೆ ಲಿಖಿತವಾಗಿ ತಿಳಿಸಿ ಎಂದು ಶಾಸಕ ಮಾಮನಿ ಸೂಚಿಸಿದರು. ಅರಣ್ಯ ಇಲಾಖೆಯಿಂದ ಸಾಕಷ್ಟು ಅನುದಾನ ವ್ಯಯ ಮಾಡಿ ಸಸಿ ನೆಡಲಾಗಿದೆ. ಇತರ ಇಲಾಖೆಗಳೊಂದಿಗೆ ಸಹಕರಿಸಿ ಅವುಗಳಿಗೆ ನೀರಿನ ಸೌಲಭ್ಯ ಒದಗಿಸಿ ಎಂದು ಆರ್‌ಎಫ್‌ಒ ಸುನೀತಾ ನಿಂಬರಗಿ ಅವರಿಗೆ ತಿಳಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 9 ನಿಲಯಗಳನ್ನು ಕೋವಿಡ್ ಸಲುವಾಗಿ ನೀಡಲಾಗಿತ್ತು. ಇದೀಗ ಪುರಸಭೆಯಿಂದ ಸ್ವಚ್ಛಗೊಳಿಸಲಾಗಿದೆ. ಒಟ್ಟು 20 ನಿಲಯಗಳಲ್ಲಿ 15 ಸರ್ಕಾರ ಸ್ವಂತ ಕಟ್ಟಡಗಳಾಗಿದ್ದು, ಇನ್ನೂ 5 ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿ ಬಿ.ಕೆ. ಜಟಗೊಂಡ ತಿಳಿಸಿದರು. ಜಿಪಂ ಸದಸ್ಯರಾದ ಎಂ.ಎಸ್. ಹಿರೇಕುಂಬಿ, ಜಿ.ಎಸ್. ಗಂಗಲ, ವಿದ್ಯಾರಾಣಿ ಸೊನ್ನದ, ಇಒ ಯಶವಂತಕುಮಾರ ಇದ್ದರು. ನಿವೃತ್ತ ಅಭಿಯಂತ ಬಿ.ಟಿ.ಭಾವಿಕಟ್ಟಿ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts