More

    ತಾಲೂಕು ಎಪಿಎಂಸಿಯಲ್ಲೇ ತರಕಾರಿ ಮಾರಾಟ ಮಾಡಿ

    ಬೆಳಗಾವಿ: ಬೆಳಗಾವಿ ಜಿಲ್ಲಾ ಎಪಿಎಂಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುತ್ತಿದ್ದು, ಅದನ್ನು ತಪ್ಪಿಸಲು ರೈತರು ಆಯಾ ತಾಲೂಕಿನ ಎಪಿಎಂಸಿ ಅಥವಾ ಸ್ಥಳೀಯ ಮಾರುಕಟ್ಟೆಯಲ್ಲಿಯೇ ಕೃಷಿ ಉತ್ಪನ್ನ ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ರೈತರಲ್ಲಿ ಮನವಿ ಮಾಡಿದರು.

    ಜಿಲ್ಲೆಯಲ್ಲಿ ಈವರೆಗೆ ಕೋವಿಡ್-19 ಹರಡದಂತೆ ಹಲವಾರು ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ರೈತರು ತರಕಾರಿ ಮತ್ತಿತರ ಕೃಷಿ ಉತ್ಪನ್ನಗಳನ್ನು ಜಿಲ್ಲಾ ಎಪಿಎಂಸಿ ಪ್ರಾಂಗಣಕ್ಕೆ ತರುತ್ತಿದ್ದಾರೆ. ಇದರಿಂದ ಅತಿಯಾದ ಜನಸಂದಣಿ ಉಂಟಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ರೈತರು ಜಿಲ್ಲಾ ಕೇಂದ್ರ ಸ್ಥಾನಕ್ಕೆ ಆಗಮಿಸದೆ ಆಯಾ ತಾಲೂಕಿನಲ್ಲಿರುವ ಮಾರುಕಟ್ಟೆಗಳಿಗೆ ತಮ್ಮ ಕೃಷಿ ಉತ್ಪನ್ನ ಸಾಗಿಸಬೇಕು ಎಂದು ಸೂಚನೆ ನೀಡಿದರು.

    ನಿರ್ದಿಷ್ಟ ಸ್ಥಳ ನಿಗದಿ: ಜಿಲ್ಲಾ ಮುಖ್ಯ ಎಪಿಎಂಸಿ ಪ್ರಾಂಗಣದಲ್ಲಿ ಮಾರಾಟಗಾರರಿಗೆ ನಿರ್ದಿಷ್ಟ ಸ್ಥಳ ಒದಗಿಸಲಾಗಿದೆ. ಮಾರಾಟಗಾರರು ತಮಗೆ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ವ್ಯಾಪಾರ ನಡೆಸಬೇಕು. ಇದನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕೂಡ ನಿಯಮಾವಳಿ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.

    ಇನ್ನು ಸಾರ್ವಜನಿಕರು ನೇರವಾಗಿ ಎಪಿಎಂಸಿ ಪ್ರವೇಶಿಸುವುದನ್ನು ಕೂಡ ನಿಷೇಧಿಸಲಾಗಿದೆ. ಹಾಪ್‌ಕಾಮ್ಸ್ ಹಾಗೂ ವರ್ತಕರ ಸಂಘದ ವತಿಯಿಂದ ತರಕಾರಿ ಮಾರಾಟಗಾರರಿಗೆ ತಳ್ಳುವ ಗಾಡಿ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಪ್ರಾಂಗಣದಿಂದ ತಳ್ಳುವಗಾಡಿ ಮತ್ತಿತರ ವಾಹನಗಳ ಮೂಲಕ ತಮ್ಮ ತಮ್ಮ ಬಡಾವಣೆಗೆ ಬರುವ ವ್ಯಾಪಾರಿಗಳಿಂದಲೇ ಸಾರ್ವಜನಿಕರು ತರಕಾರಿ ಖರೀದಿಸಬೇಕು ಎಂದು ಅವರು ತಿಳಿಸಿದ್ದಾರೆ.

    ಕರೊನಾ ವೈರಸ್ ನಿಯಂತ್ರಣಕ್ಕೆ ಸಹಕರಿಸಿ

    ದಿನನಿತ್ಯ ಬಳಕೆಯ ವಸ್ತುಗಳ ಕೊರತೆ ಉಂಟಾಗದಂತೆ ಜಿಲ್ಲಾಡಳಿತ ಎಲ್ಲ ಕ್ರಮ ಕೈಗೊಂಡಿದ್ದು, ನಾಗರಿಕರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ. ಲಾಕ್‌ಡೌನ್ ಮಾರ್ಗಸೂಚಿಯ ಪ್ರಕಾರ ತಮ್ಮ ಮನೆಯಲ್ಲೇ ಉಳಿದುಕೊಂಡು ಕರೊನಾ ವೈರಸ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ರೈತ ಸಮುದಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts