More

    30 ಲಕ್ಷಕ್ಕೆ ಕಾದಿದೆ ತಾಲೂಕಾಡಳಿತ

    ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

    ವಾಣಿಜ್ಯ ನಗರಿ ಹುಬ್ಬಳ್ಳಿಯ ಮಿನಿ ವಿಧಾನಸೌಧವು ಲಿಫ್ಟ್, ಸೂಕ್ತ ಶೌಚಗೃಹ ಮತ್ತಿತರ ವ್ಯವಸ್ಥೆ ಇಲ್ಲದೇ ಸೊರಗುತ್ತಿದ್ದು, ಸಮಸ್ಯೆ ಪರಿಹಾರಕ್ಕಾಗಿ ಬರಬೇಕಾದ 30 ಲಕ್ಷ ರೂ. ಅನುದಾನಕ್ಕಾಗಿ ತಾಲೂಕು ಆಡಳಿತ ಶಬರಿಯಂತೆ ಕಾದು ಕುಳಿತಿದೆ.

    2009ರಲ್ಲಿ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆಗೊಂಡಾಗ ಅಳವಡಿಸಿದ್ದ ಲಿಫ್ಟ್ ಮೂರ್ನಾಲ್ಕು ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿದೆ. ಇದರಿಂದ ಅಂಗವಿಕಲರು, ವೃದ್ಧರು, ಮಹಿಳೆಯರಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಮಿನಿ ವಿಧಾನಸೌಧದ ಮೊದಲ ಮಹಡಿಯಲ್ಲಿ ಉಪ ನೋಂದಣಾಧಿಕಾರಿ ಕಚೇರಿ, ಗ್ರಾಮೀಣ ಪೊಲೀಸ್ ಠಾಣೆ, ತಾಲೂಕು ಪಂಚಾಯಿತಿ ಕಚೇರಿ, ಎರಡನೇ ಮಹಡಿಯಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆ, ಭೂಮಾಪನ ಇಲಾಖೆ ಸೇರಿ ಹತ್ತಾರು ಇಲಾಖೆಗಳ ಕಚೇರಿಗಳು ಇವೆ.

    ನಿತ್ಯ ನೂರಾರು ವೃದ್ಧರು, ಅಂಗವಿಕಲರು, ಅಂಧರು, ಅಶಕ್ತರು ಇಲ್ಲಿಗೆ ಬರುತ್ತಾರೆ. ಲಿಫ್ಟ್ ಬಂದ್ ಇರುವ ಕಾರಣ ಮೆಟ್ಟಿಲು ಹತ್ತಿ ಹೋಗುವುದು ಅನಿವಾರ್ಯವಾಗಿದೆ. ಹಲವು ಬಾರಿ ಅಂಗವಿಕಲರು ಇಲ್ಲಿ ಕಾಲುಜಾರಿ ಬಿದ್ದ ಉದಾಹರಣೆಗಳಿವೆ. ಮೆಟ್ಟಿಲು ಹತ್ತಲು ಸಾಧ್ಯವಾಗದೇ ಕೆಲಸ ಆಗದೇ ವಾಪಸಾಗಿದ್ದೂ ಇದೆ. ಲಿಫ್ಟ್ ದುರಸ್ತಿ ಮಾಡಿ ಎಂದು ಹಲವು ಬಾರಿ ಮನವಿ ಮಾಡಿದರೂ, ಈವರೆಗೆ ಸಮಸ್ಯೆಗೆ ಪರಿಹಾರ ದೊರೆತಿಲ್ಲ.

    ಇತ್ತೀಚೆಗೆ ಕಚೇರಿಗೆ ಆಗಮಿಸಿದ್ದ ತಾಲೂಕಿನ ಶಿರಗುಪ್ಪಿ ಗ್ರಾಮದ ಅಂಗವಿಕಲ, ಕಾಲು ಸ್ವಾಧೀನ ಕಳೆದುಕೊಂಡಿರುವ ಮಾಬುಸಾಬ ಎಂಬಾತ ಎರಡನೇ ಮಹಡಿಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿಗೆ ಹೋಗಲು ಹರಸಾಹಸ ಪಡುವಂತಾಗಿತ್ತು. ಆತನ ಕಷ್ಟ ಕಂಡು ಉಳಿದವರು ಮರುಗಿದರು. ಮೇಲೆ ಹತ್ತಲು ಸಾಧ್ಯವಾಗದವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಆದಷ್ಟು ಬೇಗ ಲಿಫ್ಟ್ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲಿಯ ಅಧಿಕಾರಿಗಳು ಹಿಂದೆಯೇ ಪ್ರಸ್ತಾವನೆ ಕಳುಹಿಸಿದ್ದರು. ಅದರಂತೆ ಸರ್ಕಾರ 30 ಲಕ್ಷ ರೂ. ಮಂಜೂರಿ ಸಹ ಮಾಡಿದೆ. ಆ ಮೊತ್ತ ಬಂದ ಕೂಡಲೆ ಕೆಲಸ ಮಾಡಲು ಕಾಯುತ್ತಿದ್ದಾರೆ.

    ಗಬ್ಬು ನಾರುವ ಶೌಚಗೃಹ: ಮಿನಿ ವಿಧಾನಸೌಧ ಆವರಣ ಕಚೇರಿ ಪಕ್ಕದಲ್ಲೇ ನಿರ್ವಿುಸಿರುವ ಶೌಚಗೃಹ ಸದಾ ಗಬ್ಬೆದ್ದು ನಾರುತ್ತದೆ. ಅಕ್ಕಪಕ್ಕದ ಕಚೇರಿ ಅಧಿಕಾರಿ, ಸಿಬ್ಬಂದಿ ಮೂಗು ಮುಚ್ಚಿಕೊಂಡೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಶೌಚಗೃಹ ಸ್ಥಳ ಬದಲಾವಣೆ ಮಾಡುವಂತೆ ಅಥವಾ ಪರ್ಯಾಯ ವ್ಯವಸ್ಥೆ ಮಾಡುವಂತೆ ಸಿಬ್ಬಂದಿಯೇ ಮನವಿ ಮಾಡಿಕೊಂಡಿದ್ದಾರೆ.

    ಮಿನಿ ವಿಧಾನಸೌಧ ಕಟ್ಟಡಕ್ಕೆ ಹೊಸ ಲಿಫ್ಟ್ ಅಳವಡಿಕೆ, ಶೌಚಗೃಹ ದುರಸ್ತಿ ಸೇರಿ ಮತ್ತಿತರ ನಿರ್ವಹಣೆಗಾಗಿ ಸರ್ಕಾರದಿಂದ ಹಣ ಮಂಜೂರಾಗಿದೆ. ಕರೊನಾ ಮತ್ತಿತರ ಕಾರಣದಿಂದ ತಡವಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗಿದೆ.

    | ಶಶಿಧರ ಮಾಡ್ಯಾಳ, ತಹಸೀಲ್ದಾರ್, ಹುಬ್ಬಳ್ಳಿ ಶಹರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts