More

    ತಿ.ನರಸೀಪುರದಲ್ಲಿ ಅಕ್ಷರ ಜಾತ್ರೆ ಇಂದು

    ತಿ.ನರಸೀಪುರ: ಪಟ್ಟಣ ಸಮೀಪದ ಹಳೇ ತಿರುಮಕೂಡಲಿನ ಆದಿಚುಂಚನಗಿರಿ ರಜತ ಮಹೋತ್ಸವ ಭವನದ ಸಭಾಂಗಣದಲ್ಲಿ ನಿರ್ಮಿಸಿರುವ ವ್ಯಾಸರಾಯರ ಮಹಾಮಂಟಪದಲ್ಲಿ ಜ.9ರಂದು ತಾಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅಂತಿಮ ಹಂತದ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ.

    ಬೆಳಗ್ಗೆ 8 ಗಂಟೆಗೆ ತಹಸೀಲ್ದಾರ್ ಡಿ.ನಾಗೇಶ್ ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ನಂತರ 9 ಗಂಟೆಗೆ ಗುಂಜಾನರಸಿಂಹ ಸ್ವಾಮಿ ದೇವಸ್ಥಾನದ ಆವರಣದಿಂದ ಪೂರ್ಣ ಕುಂಭ ಮತ್ತು ವಿವಿಧ ಜಾನಪದ ಕಲಾತಂಡದೊಂದಿಗೆ ಸಮ್ಮೇಳನಾಧ್ಯಕ್ಷೆ, ಮೈಸೂರು ವಿವಿ ಪ್ರಾಧ್ಯಾಪಕಿ ಡಾ.ಪಿ.ಪದ್ಮಾವತಿ ಅವರನ್ನು ಮೆರವಣಿಗೆಯಲ್ಲಿ ಸಮ್ಮೇಳನ ಮಂಟಪಕ್ಕೆ ಕರೆದೊಯ್ಯಲಾಗುವುದು. ತಾಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎನ್.ಉಮೇಶ್ ಮೆರವಣಿಗೆಗೆ ಚಾಲನೆ ನೀಡುವರು.

    ಬೆಳಿಗ್ಗೆ 10.30ಕ್ಕೆ ವಾಟಾಳು ಮಠದ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಸೋಮನಾಥಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಾಹಿತಿ ಎಚ್.ಎಲ್.ಸೌಮ್ಯಾ ಆಚಾರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯತೀಂದ್ರ ಸಿದ್ದರಾಮಯ್ಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

    ಮಧ್ಯಾಹ್ನ ತಿ.ನರಸೀಪುರ ತಾಲೂಕು ಸಾಂಸ್ಕೃತಿಕ ನೆಲೆ- ಹಿನ್ನೆಲೆ ಹಾಗೂ ಕನ್ನಡ ಮತ್ತು ವರ್ತಮಾನ ಎಂಬ ಕವಿಗೋಷ್ಠಿಗಳು ನಡೆಯಲಿವೆ. ಪ್ರವಾಸಿ ತಾಣ ಅಭಿವೃದ್ಧಿ ಮತ್ತು ಕನ್ನಡ ನಾಡು, ನುಡಿ ಆತಂಕಗಳು ಕುರಿತು ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಸಾಧಕರಿಗೆ ಅಭಿನಂದನೆ ನಂತರ ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಮ್ಮೇಳನದಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್, ಪ್ರೊ.ಎಚ್.ಗೋವಿಂದಯ್ಯ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ.ಟಿ.ಸಿ.ಪೂರ್ಣಿಮಾ ಪಾಲ್ಗೊಳ್ಳಲಿದ್ದಾರೆ.

    ಕಳೆದ ಎರಡು ಸಮ್ಮೇಳನಗಳಲ್ಲೂ ಕೂಡ ಮಹಿಳಾ ಸಾಹಿತಿಗಳೇ ಅಧ್ಯಕ್ಷರಾಗಿದ್ದು, ಈ ಬಾರಿಯೂ ಕೂಡ ಮಹಿಳೆಯೇ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ರಾಜ್ಯದ ಇತಿಹಾಸದಲ್ಲಿಯೇ ಸತತ ಮೂರು ಬಾರಿ ಮಹಿಳೆಯರನ್ನು ಆಯ್ಕೆ ಮಾಡಿರುವ ಕೀರ್ತಿ ತಾಲೂಕಿಗೆ ಸಲ್ಲುತ್ತದೆ. ತಿ.ನರಸೀಪುರ ಶಾಸಕ ಎಂ.ಅಶ್ವಿನ್ ಕುಮಾರ್ ಹಾಗೂ ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಸಂಪೂರ್ಣ ಸಹಕಾರದೊಂದಿಗೆ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅವರ ಮಾರ್ಗದರ್ಶನದಡಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
    ಎಂ.ರಾಜು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts