More

    ಡಿಎಚ್‌ಒ ಕಚೇರಿ ಎದುರು ಸಾಂಕೇತಿಕ ಹೋರಾಟ

    ವಿಜಯಪುರ: ಆರೋಗ್ಯ ಹಾಗೂ ಕ್ಷೇಮ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕಾಯಂ ಗೊಳಿಸುವುದು, ಆರೋಗ್ಯ ಕೇಂದ್ರಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ನ.18ರಂದು ರಾಜ್ಯಾದ್ಯಂತ ನಡೆಯುತ್ತಿರುವ ಒಂದು ದಿನದ ಸಾಂಕೇತಿಕ ಪ್ರತಿಭಟನೆ ಭಾಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎದುರು ಪ್ರತಿಭಟನೆ ನಡೆಸುವುದಾಗಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ದಶವಂತ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿ, ಆಯುಷ್ಮಾನ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ನಾಟಕದಾದ್ಯಂತ ಎಲ್ಲ ಆರೋಗ್ಯ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿ ಇವುಗಳ ನಿರ್ವಹಣೆಗಾಗಿ ರಾಜ್ಯದಲ್ಲಿ ಪ್ರಸ್ತುತ 6182 ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಒಳಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಈ ನೇಮಕಕ್ಕೆ ಕೇಂದ್ರ ಸರ್ಕಾರದ ಪ್ರತ್ಯೇಕ ನಿಯಮಗಳು ಇವೆ. ಅದರನ್ವಯ 6 ವರ್ಷ ಈ ಯೋಜನೆಯಡಿ ಕೆಲಸ ಮಾಡಿದ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕಾಯಂಗೊಳಿಸಬೇಕು ಎಂಬ ನಿಯಮವಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಆ ನಿಯಮವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅಲ್ಲದೇ ನೌಕರರಿಗೆ ಸರಿಯಾಗಿ ಭತ್ಯೆ ನೀಡಲಾಗುತ್ತಿಲ್ಲ. ಪಕ್ಕದ ರಾಜ್ಯದಲ್ಲಿ ಅಧಿಕಾರಿಗಳಿಗೆ 15 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಕೇವಲ 8 ಸಾವಿರ ರೂ. ನೀಡಲಾಗುತ್ತಿದ್ದು, ಇದನ್ನು ಖಂಡಿಸಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದಾಗಿ ಅವರು ತಿಳಿಸಿದರು.

    ಸರ್ಕಾರದ ಈ ಆರೋಗ್ಯ ಕೇಂದ್ರಗಳಿಂದ ಗ್ರಾಮೀಣ ಭಾಗದ ಬಡ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ಮೂಲ ಸೌಕರ್ಯಗಳನ್ನು ಕಲ್ಪಿಸಿದರೆ ರೋಗಿಗಳಿಗೆ ಗುಣಮಟ್ಟದ ಉಪಚಾರ ಮಾಡಲು ಸಾಧ್ಯವಾಗುತ್ತದೆ. ಆದರೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಚಿಕಿತ್ಸೆಗೆ ಬೇಕಾದ ಉಪಕರಣಗಳನ್ನು ಸಹಿತ ಸರಿಯಾಗಿ ಒದಗಿಸುತ್ತಿಲ್ಲ. ಅದರಲ್ಲೂ ಕೆಲವು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಔಷಧಿಗಳನ್ನು ಸಹಿತ ಸರಿಯಾಗಿ ವಿತರಣೆ ಮಾಡುತ್ತಿಲ್ಲ ಹೀಗೆ ಮುಂದುವರಿದರೆ ಈ ಮಹತ್ವದ ಆರೋಗ್ಯ ಯೋಜನೆ ವಿಫಲವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

    ಸಮುದಾಯ ಆರೋಗ್ಯ ಅಧಿಕಾರಿಗಳಾಗಿ ನೇಮಕವಾಗುವವರನ್ನು ಸರ್ಕಾರದ ಇತರೆ ಕೆಲಸಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಇದರಿಂದ ನಾವು ಬಿಎಸ್‌ಸಿ ನರ್ಸಿಂಗ್ ಮುಗಿಸಿ ವೈದ್ಯಕೀಯ ಸೇವೆ ನೀಡುವ ಬದಲು ಬೇರೆ ಕೆಲಸ ಮಾಡುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವದ ಆರೋಗ್ಯ ಯೋಜನೆಗೆ ಹೊಡೆತ ಬೀಳಲಿದೆ. ರಾಜ್ಯ ಸರ್ಕಾರ ಈ ಕೂಡಲೇ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷೃ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

    ಜಿಲ್ಲಾ ಉಪಾಧ್ಯಕ್ಷ ಗುರುರಾಜ ಅಥರ್ಗಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮಾನಂದ ಹಚ್ಚಡದ, ಜಿಲ್ಲಾ ಖಜಾಂಚಿ ಶರಣಬಸು ಗುದ್ದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts