More

    ಮತದಾನ ಹೆಚ್ಚಳಕ್ಕೆ ಸ್ವೀಪ್ ಸರ್ಕಸ್

    ಶಿವಮೊಗ್ಗ:ಮತದಾನ ಹೆಚ್ಚಳದ ದೃಷ್ಟಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ವಿವಿಧೆಡೆ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಬೈಕ್ ರ‌್ಯಾಲಿ, ಬೀದಿ ನಾಟಕ, ವಿವಿಧ ಆಟೋಟ ಸ್ಪರ್ಧೆಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮುಂದುವರಿದಿದೆ. ಮಂಗಳವಾರ ಶಿವಮೊಗ್ಗ, ಸಾಗರ, ಶಿಕಾರಿಪುರ, ಹೊಸನಗರ, ಮುಂಬಾರು ಮುಂತಾದ ಕಡೆಗಳಲ್ಲಿ ಬೈಕ್ ರ‌್ಯಾಲಿ ನಡೆಸಲಾಯಿತು.

    ಮಂಗಳವಾರ ಡಿಸಿ ಕಚೇರಿ ಆವರಣದಿಂದ ಹಳೇ ಜೈಲು ಆವರಣದವರೆಗೆ ಬೈಕ್ ರ‌್ಯಾಲಿ ನಡೆಯಿತು. ರ‌್ಯಾಲಿಗೆ ಚಾಲನೆ ನೀಡಿದ ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಸ್ವತಃ ಬೈಕ್ ಚಲಾಯಿಸುವ ಮೂಲಕ ರ‌್ಯಾಲಿಯಲ್ಲಿ ಪಾಲ್ಗೊಂಡರು. ಮತದಾನದ ಜಾಗೃತಿ ಕುರಿತ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಡಿಸಿ ಕಚೇರಿಯಿಂದ ಸೀನಪ್ಪ ಶೆಟ್ಟಿ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಪ್ರವಾಸಿ ಮಂದಿರ, ಜೈಲ್ ವೃತ್ತ, ಲಕ್ಷ್ಮೀ ಟಾಕೀಸ್ ಮೂಲಕ ಹಳೇ ಜೈಲು ಆವರಣ ತಲುಪಲಾಯಿತು.
    ನಾವು ಶಿವಮೊಗ್ಗ ಜನ, ಮಾಡೇ ಮಾಡ್ತಿವಿ ಮತದಾನ ಹಾಗೂ ಜೋಗ ನೋಡೋದು ವೈಭೋಗ ಮತದಾನ ಮಾಡೋದು ಸುಯೋಗ ಎಂಬ ಘೋಷಣೆಗಳು ಗಮನಸೆಳೆದವು. ಡಿಸಿ ಕಚೇರಿ ಆವರಣದಲ್ಲಿ ಇರಿಸಲಾಗಿರುವ ಸೆಲ್ಫಿ ಕಾರ್ನನ್‌ನಲ್ಲಿ ನಿಂತು ಅನೇಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಜಿಪಂ ಯೋಜನಾ ನಿರ್ದೇಶಕ ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ ಮುಂತಾದವರಿದ್ದರು.
    ಹೊಸನಗರದಲ್ಲಿ ನಡೆದ ಬೈಕ್ ರ‌್ಯಾಲಿಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಕುಮಾರ್, ತಹಸೀಲ್ದಾರ್ ರಶ್ಮಿ, ಪಪಂ ಮುಖ್ಯಾಧಿಕಾರಿ ಮಾರುತಿ, ಬಿಇಒ ಕೃಷ್ಣಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಸಚಿನ್ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts