More

    ಬೇಡಿಕೆ ಇದ್ದರೂ ಸಿಗುತ್ತಿಲ್ಲ ಸ್ವರ್ಣಧಾರ ಕೋಳಿಮರಿ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಕರ್ನಾಟಕ ಹಾಗೂ ಹತ್ತಿರದ ರಾಜ್ಯಗಳಲ್ಲಿ ಕೂಡ ಅತ್ಯಧಿಕ ಬೇಡಿಕೆ ಇರುವ ಸ್ವರ್ಣಧಾರ ಕೋಳಿ ಮರಿಗಳು ಆಸಕ್ತ ಸಾಕಣೆದಾರರಿಗೆ ಲಾಕ್‌ಡೌನ್ ಬಳಿಕ ಸಿಗುತ್ತಿಲ್ಲ.
    ಸ್ವರ್ಣಧಾರ ತಳಿ ಅಭಿವೃದ್ಧಿಪಡಿಸಿದ ಬೆಂಗಳೂರು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ ಲಾಕ್‌ಡೌನ್ ಬಳಿಕ ಕೋಳಿ ಮರಿ ಉತ್ಪಾದನೆ ಸ್ಥಗಿತಗೊಂಡಿದೆ. ಇನ್ನೆರಡು ತಿಂಗಳಲ್ಲಿ ಕೋಳಿ ಮರಿಗಳು ಲಭ್ಯವಾಗಬಹುದು ಎನ್ನುವ ಉತ್ತರ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ದೊರೆಯುತ್ತದೆ.

    ಹೆಚ್ಚಿದ ಬೇಡಿಕೆ: ಲಾಕ್‌ಡೌನ್ ಬಳಿಕ ಉದ್ಯೋಗ ನಷ್ಟ, ವೇತನ ಕಡಿತ ಮುಂತಾದ ಸ್ಥಿತ್ಯಂತರಗಳು ಜಗತ್ತಿನಾದ್ಯಂತ ಸಂಭವಿಸಿದ ಹಿನ್ನೆಲೆಯಲ್ಲಿ ಕನಿಷ್ಠ ಹೂಡಿಕೆ ಹಾಗೂ ಕಡಿಮೆ ಮಾನವ ಸಂಪನ್ಮೂಲ ಅವಶ್ಯಕತೆ ಇರುವ ಮತ್ತು ಮೊಟ್ಟೆ ಮತ್ತು ಮಾಂಸ ಮಾರಾಟಕ್ಕೆ ಅಧಿಕ ಬೇಡಿಕೆ ಇರುವ ಸ್ವರ್ಣಧಾರ ಕೋಳಿ ಸಾಕಣೆಯ ಬಗ್ಗೆ ಕೃಷಿಕರಲ್ಲಿ ಹೆಚ್ಚಿನ ಒಲವು ಕಂಡುಬಂದಿದೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಇರುವ ಬೇಡಿಕೆ ಪಟ್ಟಿ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಮಂಗಳೂರು ಕೃಷಿ ವಿಜ್ಞಾನ ಕೇಂದ್ರವೊಂದರಲ್ಲೇ 25 ಸಾವಿರಕ್ಕೂ ಅಧಿಕ ಮರಿಗಳಿಗೆ ಕೃಷಿಕರು ಹೆಸರು ನೋಂದಣಿ ಮಾಡಿ ಕಾಯುತ್ತಿದ್ದಾರೆ.

    ಸ್ವರ್ಣಧಾರ ಯಾಕೆ?: ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಕುಕ್ಕುಟ ವಿಭಾಗದ ವಿಜ್ಞಾನಿಗಳು ಜನಪ್ರಿಯ ಗಿರಿರಾಜ ತಳಿಯನ್ನು ಅಭಿವೃದ್ಧಿಪಡಿಸಿ 2005ರಲ್ಲಿ ಅಧಿಕ ಮೊಟ್ಟೆ ಇಡುವ ಮತ್ತು ರುಚಿಕರ ಮಾಂಸದ ಸ್ವರ್ಣಧಾರ ತಳಿ ಕೋಳಿಯನ್ನು ಬಿಡುಗಡೆ ಮಾಡಿದ್ದರು. ಇದು ಪುಕ್ಕ, ಬಣ್ಣ, ರೂಪ ಮತ್ತು ಸ್ವಭಾವದಲ್ಲಿ ನಾಟಿ ಕೋಳಿಯನ್ನೇ ಹೋಲುತ್ತದೆ.
    ವಾರ್ಷಿಕವಾಗಿ ನಾಟಿ ಕೋಳಿ 60- 70 ಮೊಟ್ಟೆ ಇಟ್ಟರೆ, ಗಿರಿರಾಜ 145- 150 ಮೊಟ್ಟೆ ಇಡುತ್ತದೆ. ಆದರೆ ಸ್ವರ್ಣಧಾರ 180- 190 ಮೊಟ್ಟೆ ಇಡುತ್ತದೆ. ಮೊಟ್ಟೆ ಗಾತ್ರದಲ್ಲೂ ನಾಟಿ ಕೋಳಿಗಿಂತ ಸುಮಾರು 10 ಗ್ರಾಂ ಅಧಿಕ ತೂಗುತ್ತದೆ. ಸ್ವರ್ಣಧಾರ ಕೋಳಿಗೆ ಯಾವುದೇ ಆಧುನಿಕ ವ್ಯವಸ್ಥೆ, ಸಮತೋಲನ ಆಹಾರ ಅವಶ್ಯಕತೆ ಇರುವುದಿಲ್ಲ. ಹಿತ್ತಿಲಿನಲ್ಲಿ ಅಡ್ಡಾಡಿ ಆಹಾರ ಸಂಪಾದಿಸಿಸಬಲ್ಲವು.

    ಯಾಕೆ ಅಲಭ್ಯ?
    ಲಾಕ್‌ಡೌನ್ ಬಳಿಕ ಅಗತ್ಯ ಮಾನವ ಸಂಪನ್ಮೂಲ ಹಾಗೂ ಪೂರಕ ವ್ಯವಸ್ಥೆ ಕೊರತೆಯಿಂದ ಹೆಬ್ಬಾಳದಲ್ಲಿ ಈ ಕೋಳಿ ತಳಿಗಳ ಉತ್ಪಾದನೆ ನಡೆಯುತ್ತಿಲ್ಲ. ಇತರ ಪಶುವೈದ್ಯಕೀಯ ಕಾಲೇಜುಗಳು, ಜಿಲ್ಲಾ ಕೇಂದ್ರಗಳು ಸ್ವರ್ಣಧಾರ ಕೋಳಿ ಮರಿಗಳ ಉತ್ಪಾದನೆಗೆ ಆಸಕ್ತಿ ತೋರಿಸುತ್ತಿಲ್ಲ. ಎಲ್ಲರೂ ಹೆಬ್ಬಾಳದಿಂದಲೇ ಮರಿಗಳನ್ನು ತರಿಸಿಕೊಂಡು ವಿತರಣೆಗೆ ಕಾಯುತ್ತಿದ್ದಾರೆ.

    ಸ್ವರ್ಣಧಾರ ಮರಿಗಳಿಗೆ ರಾಜ್ಯಾದ್ಯಂತ ಬೇಡಿಕೆ ಇದೆ. ಲಾಕ್‌ಡೌನ್ ಬಳಿಕ ಬೇಡಿಕೆ ಹೆಚ್ಚಿದೆ. ಮೂರು ತಿಂಗಳಿಂದ ನಮ್ಮ ಕೇಂದ್ರದಲ್ಲಿ ಮರಿ ಉತ್ಪಾದನೆ ಸ್ಥಗಿತಗೊಂಡಿದೆ. ಜಿಲ್ಲಾ ಕೇಂದ್ರಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು ಮರಿ ಉತ್ಪಾದಿಸಿ ಸ್ಥಳೀಯ ಬೇಡಿಕೆಗಳನ್ನು ಪೂರೈಸಲು ಮುಂದಾದರೆ ನಮ್ಮ ಕೇಂದ್ರದಿಂದ ಅಗತ್ಯ ಸಹಕಾರ ಒದಗಿಸಲು ಸಿದ್ಧ.
    – ಡಾ.ಇಂದ್ರೇಶ್ ಗೌಡ, ಅಸಿಸ್ಟೆಂಟ್ ಪ್ರೊಫೆಸರ್, ಪಶುವೈದ್ಯಕೀಯ ಕಾಲೇಜು, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts