More

    ಅಂಗನವಾಡಿಗೆ ನುಗ್ಗುತ್ತಿದೆ ಜೌಳು ನೀರು

    ಶಶಿಧರ ಕುಲಕರ್ಣಿ ಮುಂಡಗೋಡ
    ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಜೌಳು ನೀರು ನುಗ್ಗಿ ಸಮಸ್ಯೆ ಸೃಷ್ಟಿಯಾಗಿದೆ.
    ಪ್ರತಿ ವರ್ಷ ಮಳೆಗಾಲದ ವೇಳೆ ಜೌಳು ನೀರು ನುಗ್ಗಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಗೆ ನೆಲ ಒರೆಸುವುದೇ ಬಹುದೊಡ್ಡ ಕೆಲಸವಾಗಿದೆ. ಈ ವರ್ಷವೂ ಇದು ಪುನರಾವರ್ತನೆಯಾಗಿದೆ.
    ಈ ಅಂಗನವಾಡಿ ಕಟ್ಟಡದಲ್ಲಿ ಎರಡು ಕೊಠಡಿಗಳಿವೆ. ಎರಡೂ ಕೊಠಡಿಗಳಲ್ಲಿ ಜೌಳು ನೀರು ನಿಲ್ಲುತ್ತದೆ. ಈಗಂತೂ ಮಕ್ಕಳು ಬರುತ್ತಿಲ್ಲ. ಈ ಹಿಂದೆ ಮಕ್ಕಳು ಜೌಳು ನೀರು ಹೋಗುವವರೆಗೆ ಎದ್ದು ನಿಲ್ಲಬೇಕಾಗಿತ್ತು. ನೀರು ಕಡಿಮೆಯಾದ ನಂತರ ನೆಲ ಒರೆಸಿದ ಮೇಲೆ ಮಕ್ಕಳು ಕುಳಿತುಕೊಳ್ಳಬೇಕಾಗಿತ್ತು. ಈಗ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ನಿತ್ಯ ಕೋವಿಡ್ ಕರ್ತವ್ಯ ನಿರ್ವಹಿಸಲು ಅಂಗನವಾಡಿಗೆ ಬರುತ್ತಿದ್ದಾರೆ. ಕೊಠಡಿಗಳ ಒಳಗೆ ನೀರು ನಿಲ್ಲುತ್ತಿರುವುದರಿಂದ ಅವರಿಗೂ ಸಮಸ್ಯೆಯಾಗಿದೆ.
    ಇದಕ್ಕೂ ಮೊದಲು ಪ.ಪಂ. ಆವರಣದಲ್ಲಿ ಒಂದು ಕೊಠಡಿ ನೀಡಿದ್ದರು. ಆದರೆ, ಅದು ಇದಕ್ಕಿಂತಲೂ ತೀರಾ ಕಳಪೆಯಾಗಿತ್ತು. ನಂತರ ಅದರ ಮುಂದೆಯೇ ಇದ್ದ ಈಗಿರುವ ಕಟ್ಟಡ ನೀಡಿದ್ದಾರೆ. ಕಳೆದ 4-5 ವರ್ಷಗಳಿಂದ ಇದೇ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. ಈ ಕಟ್ಟಡವೂ ತೀರಾ ದುಸ್ಥಿತಿಯಲ್ಲಿದ್ದ ಕಾರಣ 2 ವರ್ಷಗಳ ಹಿಂದೆ ನೆರೆ ಅನುದಾನದಲ್ಲಿ ಜಿ.ಪಂ. ವತಿಯಿಂದ ಗೋಡೆ, ಮೇಲ್ಛಾವಣಿ ದುರಸ್ತಿ ಮತ್ತು ಬಣ್ಣ ಮಾಡಿಸಿಕೊಟ್ಟಿದ್ದಾರೆ. ಆದರೆ, ಕೊಠಡಿಗಳ ಒಳಗೆ ಜೌಳು ನೀರು ನುಗ್ಗುವುದನ್ನು ತಡೆಯಲು ಸಾಧ್ಯವಾಗಿಲ್ಲ.


    ಮಕ್ಕಳ ಅಂಗನವಾಡಿ ಕೇಂದ್ರಕ್ಕೆ ಪ್ರಶಸ್ತವಾದ ಸ್ಥಳ ಇದಲ್ಲ. ಇಲ್ಲಿ ಸಮಸ್ಯೆಗಳು ಬಹಳ ಇವೆ. ಎದುರಿಗೆ ಗ್ಯಾರೇಜ್ ಮತ್ತು ಇಂದಿರಾ ಕ್ಯಾಂಟೀನ್ ಇವೆ. ಜನದಟ್ಟಣೆ ಬಹಳ ಇದೆ. ಮಳೆಗಾಲದಲ್ಲಿ ಕೇಂದ್ರದೊಳಗೆ ಜೌಳು ನೀರು ತುಂಬಿಕೊ ಂಡು ನಿಲ್ಲುತ್ತದೆ. ಒಟ್ಟಿನಲ್ಲಿ ಈ ಅಂಗನವಾಡಿ ಕೇಂದ್ರ ಇದ್ದೂ ಇಲ್ಲದಂತೆ ಆಗಿದೆ.
    | ಸಂತೋಷ ಕುಂಬಾರ ಪಾಲಕರು


    ತುರ್ತು ಮಟ್ಟಿಗೆ ಜೌಳು ನೀರು ಬರದಂತೆ ದುರಸ್ತಿ ಮಾಡಿಕೊಡಲಾಗುವುದು. ಮುಂದೆ ಕೆಲವು ದಿನಗಳಲ್ಲಿ ಈಗಿರುವ ಅಂಗನವಾಡಿ ಕೇಂದ್ರ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡಲಾಗುವುದು.
    | ಸಂಗನಬಸಯ್ಯ
    ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts