More

    ಗೋರಕ್ಷಣೆಗೆ ಸ್ವಾಮೀಜಿಗಳೆಲ್ಲ ಒಂದಾಗಬೇಕಿದೆ

    ಅಕ್ಕಿಆಲೂರ: ಗೋವು ಆರಾಧನೆ ಹಿಂದುಗಳ ಧಾರ್ವಿುಕ ಭಾವನೆಯಾಗಿದ್ದು, ಗೋವು ರಕ್ಷಣೆಗೆ ನಾಡಿನ ಕಾವಿಕುಲ ಒಂದಾಗಬೇಕಿದೆ ಎಂದು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಲಿಂ. ಕುಮಾರ ಸ್ವಾಮೀಜಿ ಹಾಗೂ ಲಿಂ. ಚನ್ನವೀರ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಮತ್ತು ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಅಕ್ಕಿಆಲೂರ ಉತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾನುವಾರು ಜಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

    ಮುಕ್ಕೋಟಿ ದೇವರನ್ನು ಒಳಗೊಂಡಿರುವ ಮಾತೆಯ ಸ್ವರೂಪದಲ್ಲಿ ಆರಾಧಿಸುವ ಗೋವು ಹಿಂದುಗಳ ಆರಾಧ್ಯ ದೈವ. ಗೋವುಗಳ ಪೂಜೆ ಕೇವಲ ಅದೊಂದು ಆಧ್ಯಾತ್ಮಿಕ ಆಚರಣೆ ಯಲ್ಲ. ಮನುಷ್ಯನನ್ನು ಸಕಾರಾತ್ಮವಾಗಿ ಯಶಸ್ವಿಗೊಳಿಸುವ ವೈಜ್ಞಾನಿಕ ಶಕ್ತಿ ಗೋಮಾತೆಯಲ್ಲಿದೆ ಎಂಬುದನ್ನು ಜಗತ್ತಿನ ಅನೇಕ ವಿಜ್ಞಾನಿಗಳು ಪ್ರಸ್ತುತಪಡಿಸಿದ್ದಾರೆ. ಇಂಥ ಶ್ರೇಷ್ಠ ಪ್ರಾಣಿಯನ್ನು ಹತ್ಯೆಗೈಯುತ್ತಿರುವುದು ಧಾರ್ವಿುಕ ಭಾವನೆಗೆ ಧಕ್ಕೆ ತರುತ್ತಿದೆ. ನಾಡಿನ ಎಲ್ಲ ಯುವ ಯತಿಗಳು ಕೈಜೋಡಿಸಿ ಗೋವು ಹತ್ಯೆ ಸಂಪೂರ್ಣ ನಿಷೇಧಿಸಲು ಸರ್ಕಾರಕ್ಕೆ ಆಗ್ರಹಿಸಬೇಕು ಎಂದರು.

    ವಿರಕ್ತಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಹಾನಗಲ್ಲ ಕುಮಾರ ಶಿವಯೋಗಿಗಳು ಮತ್ತು ರಾಮಚಂದ್ರಾಪುರಮಠದ ಪೂಜ್ಯರು, ಪಂಚಪೀಠಾಧೀಶ್ವರರು ಗೋವುಗಳ ರಕ್ಷಣೆಗೆ ಎಲ್ಲ ಯೋಜನೆ ಮಾಡಿದ್ದಾರೆ. ಆದರೆ, ಅದು ಇಚ್ಛಾಶಕ್ತಿಯ ಕೊರತೆಯಿಂದ ಜಾರಿಗೊಳ್ಳುತ್ತಿಲ್ಲ. ಪ್ರತಿಮಠಗಳಲ್ಲಿಯೂ ಗೋಶಾಲೆ ಸ್ಥಾಪನೆಗೆ ಸಮುದಾಯದ ಸಹಕಾರ ಅಗತ್ಯವಾಗಿದೆ. ಜಾನುವಾರು ಜಾತ್ರೆಯ ಮೂಲಕವೇ ಗೋವುಗಳ ಹಿತಾಸಕ್ತಿ ಬಯಸುವ ಕಾರ್ಯ ಅಕ್ಕಿಆಲೂರ ಉತ್ಸವದ ಮೂಲಕ ನಡೆಯುತ್ತಿದೆ ಎಂದರು. ಎಪಿಎಂಸಿ ಅಧ್ಯಕ್ಷ ಶೇಖಪ್ಪ ಮಹಾರಾಜಪೇಟೆ ಮಾತನಾಡಿ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗಾಗಿ ಸಾಕಷ್ಟು ಯೋಜನೆಗಳಿದ್ದು, ರೈತರು ಅವುಗಳ ಉಪಯೋಗ ಪಡೆಯಬೇಕು ಎಂದರು. ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಬಸವರಾಜ ಪರಮಶೆಟ್ಟರ್ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷ ಪ್ರದೀಪ ಶೇಷಗಿರಿ, ಎಪಿಎಂಸಿ ಉಪಾಧ್ಯಕ್ಷೆ ಸುಜಾತ ಪಸಾರದ, ದೇವಿಂದ್ರಪ್ಪ ಕಡ್ಲೇರ, ಗಿರೀಶ ರೆಡ್ಡೇರ, ಮಂಜುನಾಥ ಬಣಕಾರ, ಶಿವಕುಮಾರ ಲಕ್ಕಟ್ಟಿ, ರೈತ ಸಂಘದ ಅಧ್ಯಕ್ಷ ಮಹೇಶ ವಿರುಪಣ್ಣನವರ, ಮಠದ ಸೇವಾ ಸಮಿತಿ ಅಧ್ಯಕ್ಷ ಕೊಟ್ರಪ್ಪ ಬೆಲ್ಲದ, ಉದಯಕುಮಾರ ವಿರುಪಣ್ಣನವರ ಇದ್ದರು.

    ಜನಮನ ಸೆಳೆದ ಗೋವು ಮೇಳ: ಅಕ್ಕಿಆಲೂರ ಉತ್ಸವದ ಜಾನುವಾರು ಜಾತ್ರೆಯಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕೃಷಿ, ರೇಷ್ಮೆ, ಪಶುಸಂಗೋಪನೆ, ತೋಟಗಾರಿಕೆ, ಕೃಷಿ ಮಾರಾಟ ಇಲಾಖೆ ಸೇರಿ ಹಲವಾರು ಮಳಿಗೆಗಳನ್ನು ತೆರೆಯಲಾಗಿತ್ತು. ಸಾವಯವ ಕೃಷಿ ಪದ್ಧತಿ, ತೋಟಗಾರಿಕೆ ನಿಯಮಗಳು, ರೇಷ್ಮೆ ಕೃಷಿ ಉತ್ತೇಜನ, ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ ನೀಡುವ ವಿಧಾನ, ರೈತರು ಬೆಳೆದ ಬೆಳೆಗಳನ್ನು ದಾಸ್ತಾನು ಮಾಡಲು ಕೈಗೊಳ್ಳಬೇಕಾದ ಕಾನೂನಾತ್ಮಕ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು. ಆಯಾ ಮಳಿಗೆಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ವಿವಿಧ ಮಾಹಿತಿಯುಳ್ಳ ಕರಪತ್ರ ಹಂಚಿದರು. ಹಾವೇರಿ ಸೇರಿ ಉತ್ತರ ಕರ್ನಾಟಕದ ವಿವಿಧೆಡೆಯಿಂದ ಕಿಲಾರಿ, ಹಳ್ಳಿಕಾರ, ಅಮೃತ ಮಹಾಲ್, ದೇವನಿ, ಕಾಂಕ್ರೇಜ್ ಸೇರಿ ವಿವಿಧ ತಳಿಯ ಜಾನುವಾರು ನೋಡುಗರನ್ನು ಆಕರ್ಷಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts