More

    ಸಮಾಜೋದ್ಧಾರಕ್ಕೆ ಶ್ರಮಿಸಿದ ಯೋಗಿಪುಂಗವರು

    ಹಾವೇರಿ: ಸಾಧುಸಂತರ ಯೋಗಿಕ ಮತ್ತು ತಪಸ್ಸಿನ ಶಕ್ತಿಯಿಂದ ಅನುಭಾವಿಕ ಸಿದ್ಧಿ ಉಂಟಾಗುತ್ತದೆ. ಇಂತಹ ಅನುಸಂಧಾನದಿಂದ ಅಸಾಧ್ಯವಾದುದು ಸಾಧ್ಯವಾಗುತ್ತದೆ. ಅಂತಹ ಪಂಚಸಿದ್ಧಿಯನ್ನು ಸಾಧಿಸಿದ ಲಿಂ. ಶಿವಬಸವ ಸ್ವಾಮೀಜಿ ತಮ್ಮ ಶಕ್ತಿಯನ್ನು ಸಮಾಜದ ಸುಧಾರಣೆಗೆ ಧಾರೆ ಎರೆದ ಯೋಗಿಪುಂಗವರು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

    ಶನಿವಾರ ನಮ್ಮೂರ ಜಾತ್ರೆಯ 2ನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕಾರ್ಯಸಿದ್ಧಿ ಸಾಧನೆಯಿಂದ ಅಂತಕರಣ ಶುದ್ಧಿಯಾಗುತ್ತದೆ. ಅಂತಹ ಸಾಧನೆಯನ್ನು ಮಾಡಿದ್ದ ಹುಕ್ಕೇರಿಮಠದ ಲಿಂ. ಪೂಜ್ಯದ್ವಯರು ತಮ್ಮ ಕಾರ್ಯಕ್ಷೇತ್ರವನ್ನು ಪವಿತ್ರ ಸ್ಥಳವಾಗಿಸಿ ಭಕ್ತರ ಅಭ್ಯುದಯಕ್ಕೆ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದರು ಎಂದರು.

    ಅಧ್ಯಕ್ಷತೆ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿಗಳನ್ನು ಸನ್ಮಾನಿಸಲಾಯಿತು. ಬೆಟದೂರನ ಪ್ರಭುಲಿಂಗೇಶ್ವರಮಠದ ಮಹಾದೇವ ದೇವರು, ಮಾದನಹಿಪ್ಪರಗಿಯ ಶಿವಲಿಂಗೇಶ್ವರ ಮಠದ ಅಭಿನವ ಶಿವಲಿಂಗ ಸ್ವಾಮೀಜಿ, ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿದರು.

    ಗುಡ್ಡದಆನ್ವೇರಿಯ ಶಿವಯೋಗಿ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಶಿವಾಚಾರ್ಯರು, ರಾವೂರಿನ ಸಿದ್ಧಲಿಂಗದೇವರು, ಅಡವೇಶ್ವರ ದೇವರು, ಶಿವಕುಮಾರ ದೇವರು, ವೀರಬಸವ ದೇವರು, ಚಂದ್ರಶೇಖರ ದೇವರು, ಮಲ್ಲಿಕಾರ್ಜುನ ದೇವರು, ಆನಂದ ದೇವರು, ಶಿವಪ್ರಸಾದ ದೇವರು, ಶಿವಬಸವ ದೇವರು, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇತರರಿದ್ದರು. ಆಕಾಶವಾಣಿ ಕಲಾವಿದ ಶಿವಕುಮಾರ ಹಡಗಲಿ ಪ್ರಾರ್ಥಿಸಿದರು. ವೀರಣ್ಣ ಅಂಗಡಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರ್ವಹಿಸಿದರು. ಬಿ. ಬಸವರಾಜ ವಂದಿಸಿದರು.

    ಕಂಗೊಳಿಸಿದ ಉಭಯ ಶ್ರೀಗಳ ಗದ್ದುಗೆ

    ಹಾವೇರಿ ನಗರದ ಹುಕ್ಕೇರಿಮಠದ ಲಿಂ. ಶಿವಬಸವ ಶ್ರೀಗಳ 75ನೇ ಹಾಗೂ ಲಿಂ. ಶಿವಲಿಂಗ ಶ್ರೀಗಳ 12ನೇ ಪುಣ್ಯಸ್ಮರಣೆಯ ನಮ್ಮೂರ ಜಾತ್ರಾ ಮಹೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸರಳವಾಗಿ ಜರುಗಿತು.

    ಬೆಳಗ್ಗೆ ಮಠದಲ್ಲಿ ಲಿಂಗೈಕ್ಯ ಉಭಯ ಶ್ರೀಗಳ ಗದ್ದುಗೆಗೆ, ಮೂರ್ತಿಗಳಿಗೆ ವೈವಿಧ್ಯಮಯ ಹೂಗಳಿಂದ ಆಕರ್ಷಕ ರೀತಿಯಲ್ಲಿ ಶೃಂಗಾರ ಮಾಡಲಾಗಿತ್ತು. ಮಠದಲ್ಲಿ ಮಹಾರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ಬಳಿಕ ಮಹಾಗಣಾರಾಧನೆ ನಡೆಯಿತು. ಭಕ್ತಾದಿಗಳು ಬೆಳಗ್ಗೆಯಿಂದಲೇ ನೈವೇದ್ಯ ಮಾಡಿಕೊಂಡು ಮಠಕ್ಕೆ ಬಂದು ಉಭಯ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಸದಾಶಿವ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.

    ಸಂಜೆ 5 ಗಂಟೆಗೆ ಮಠದ ಆವರಣದಲ್ಲಿ ಸದಾಶಿವ ಸ್ವಾಮೀಜಿ, ಲಿಂ. ಶಿವಬಸವ ಹಾಗೂ ಲಿಂ. ಶಿವಲಿಂಗ ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ನಗರದಾದ್ಯಂತ ಸಂಚರಿಸುತ್ತಿದ್ದ ಉಭಯ ಶ್ರೀಗಳ ಭಾವಚಿತ್ರದ ಮೆರವಣೆಗೆಯನ್ನು ಹುಕ್ಕೇರಿಮಠದ ಆವರಣಕ್ಕಷ್ಟೇ ಸೀಮಿತಗೊಳಿಸಲಾಯಿತು. ವಿವಿಧ ವಾದ್ಯ ವೈಭೋಗದೊಂದಿಗೆ ಶ್ರೀಮಠದ ಆವರಣದಿಂದ ಆರಂಭಗೊಂಡ ಮೆರವಣಿಗೆ ಅಕ್ಕಮಹಾದೇವಿ ದೇವಸ್ಥಾನದವರೆಗೆ ತೆರಳಿ ಪುನಃ ಹುಕ್ಕೇರಿಮಠಕ್ಕೆ ಮರಳಿತು. ಭಕ್ತರು ಉಭಯ ಶ್ರೀಗಳ ಭಾವಚಿತ್ರಕ್ಕೆ ಕೈ ಮುಗಿದು ಭಕ್ತಿ ಸಮರ್ಪಿಸಿದರು.

    ಕನ್ನಡನಾಡಿನ ಮಠಮಾನ್ಯಗಳು ಅನ್ನ, ಅರಿವು, ಆಶ್ರಯವನ್ನು ನೀಡಿ ದಾಸೋಹ ಪರಂಪರೆಯನ್ನು ಮುಂದುವರಿಸಿವೆ. ಅದರಂತೆ ಹಾವೇರಿಯಲ್ಲಿ ಜರುಗುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶ್ರೀಮಠದಿಂದ ಸಂಪೂರ್ಣ ಸಹಾಯ ಸಹಕಾರ ನೀಡಲಾಗುವುದು.
    | ಸದಾಶಿವ ಸ್ವಾಮೀಜಿ, ಹುಕ್ಕೇರಿ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts