More

    ದಾಸೋಹ ಮಹಾಮನೆಯಾದ ತುಮಕೂರು ; ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ 114ನೇ ಜನ್ಮದಿನಾಚರಣೆ

    ತುಮಕೂರು: ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 114ನೇ ಹುಟ್ಟು ಹಬ್ಬದ ಆಂಗವಾಗಿ ತುಮಕೂರು ನಗರವು ದಾಸೋಹದ ಮಹಾಮನೆಯಾಗಿ ಪರಿವರ್ತನೆಯಾಗಿತ್ತು. ನಗರದೆಲ್ಲೆಡೆ ನಾಗರಿಕರು ದಾಸೋಹ ಏರ್ಪಡಿಸಿ ಸ್ವಾಮೀಜಿ ಅವರ ಕಾಯಕನಿಷ್ಠೆ ಸ್ಮರಿಸಿದರು.
    ಸಿದ್ಧಗಂಗಾ ಮಠದಲ್ಲಿ ಸಂಭ್ರಮದಿಂದ ಸ್ವಾಮೀಜಿ ಅವರನ್ನು ಸ್ಮರಿಸಲಾಯಿತು. ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭ ಇರಲಿಲ್ಲವಾದರೂ ಭಕ್ತ ಸಾಗರವೇ ಹರಿದುಬಂದಿತ್ತು. ಸಾವಿರಾರು ಜನರು ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು.
    ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಹರಗುರುಚರಮೂರ್ತಿಗಳು ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯ ನೆರವೇರಿಸಿದರು. ಗುರುವಾರ ಮುಂಜಾನೆಯೇ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿ ವಿಶೇಷವಾಗಿ ಫುಷ್ಪಗಳಿಂದ ಅಲಂಕೃತರಾಗಿದ್ದ ಶ್ರೀಗಳ ಗದ್ದುಗೆಗೆ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ಶ್ರೀಮಠದ ರುದ್ರಾಕ್ಷಿ ಮಂಟಪದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಮೆರವಣಿಗೆ ಗದ್ದುಗೆ ಮಂದಿರದ ಮುಂಭಾಗದಿಂದ ವಸ್ತು ಪ್ರದರ್ಶನದ ಆವರಣದವರೆಗೂ ವಿಜೃಂಭಣೆಯಿಂದ ಸಾಗಿತು.

    ಶ್ರೀಮಠದ ಮಕ್ಕಳ ಹರ್ಷೋದ್ಘಾರ, ಭಕ್ತರ ಜೈಕಾರದೊಂದಿಗೆ ನಡೆದ ಮೆರವಣಿಗೆಯಲ್ಲಿ ವೀರಗಾಸೆ, ನಂದಿಧ್ವಜ, ಜವಳಿ ಕುಣಿತ, ಡೊಳ್ಳು ಕುಣಿತ ಬ್ಯಾಂಡ್ ಮತ್ತಿತರರ ಕಲಾ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆದವು.
    ಚಿತ್ರಾನ್ನ, ಪಾಯಸ, ಮೈಸೂರು ಪಾಕ್ ಸೇರಿ ವಿವಿಧ ಬಗೆಯ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

    ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ರಾಮಚಂದ್ರೇಗೌಡ, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಮಸಾಲೆ ಜಯರಾಂ, ನಟ ದುನಿಯಾ ವಿಜಯ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಕೆಪಿಟಿಸಿಎಲ್ ಎಂಡಿ ಜಿ.ಎಂ.ಗಂಗಾಧರಸ್ವಾಮಿ ಮತ್ತಿತರರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆಯ ದರ್ಶನ ಪಡೆದರು.

    ಭಾವನೆಯ ಭಕ್ತಿಯೊಂದಿಗೆ ಸ್ಮರಿಸಿ: ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕಿದ್ದು, ಪೂಜ್ಯರ ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸಿದ್ದೇವೆ, ಕಳೆದ 3 ವರ್ಷಗಳಿಂದ ಪೂಜ್ಯರ ಭೌತಿಕ ದರ್ಶನ ನಮಗೆ ಇಲ್ಲದಿದ್ದರೂ ಅವರ ಭಾವನಾತ್ಮಕವಾದ ಭಾವನೆಯ ಭಕ್ತಿಯೊಂದಿಗೆ ಸ್ಮರಣೆ ಮಾಡುವ ಮೂಲಕ ಬದುಕು ಹಸನು ಮಾಡಿಕೊಳ್ಳೋಣ ಎಂದು ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
    ಶ್ರೀಗಳು ಎಂದೂ ವೈಯಕ್ತಿಕವಾಗಿ ಅದ್ದೂರಿ ಆಡಂಬರದ ಆಚರಣೆ ಮಾಡಿಕೊಳ್ಳುವಂತವರೂ ಅಲ್ಲ, ಭಕ್ತರ ಒತ್ತಾಯದ ಮೇರೆಗೆ ಶ್ರೀಗಳ ಹುಟ್ಟುಹಬ್ಬ ಆಚರಣೆಯನ್ನು ಗುರುವಂದನಾ ಮಹೋತ್ಸವವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು, 111 ವರ್ಷ ಬದುಕನ್ನು ತಪೋಮಯವಾಗಿಸುವ ಜತೆಗೆ ಜ್ಯೋತಿರ್ಮಯವಾಗಿ ಬೆಳಗಿ ಲಕ್ಷಾಂತರ ಜನರ ಮನೆಯ ನಂದಾದೀಪವಾಗಿ ಬೆಳಗುತ್ತಿದ್ದಾರೆ ಎಂದರು.

    114 ಮಕ್ಕಳಿಗೆ ನಾಮಕರಣ : ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್ ವತಿಯಿಂದ ಜಯಂತ್ಯುತ್ಸವದ ಅಂಗವಾಗಿ 114 ಮಕ್ಕಳಿಗೆ ಶಿ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಶ್ರೀಮಠದಲ್ಲಿ ನಾಮಕರಣ ಮಾಡಲಾಯಿತು. ಉಚಿತ ನಾಮಕರಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವರಿಗೆ ಹೊಸ ತೊಟ್ಟಿಲು, ತೊಟ್ಟಿಲ ಹಾಸಿಗೆ, ತೊಟ್ಟಿಲ ದಿಂಬು ಹಾಗೂ ಶ್ರೀಗಳ ಭಾವಚಿತ್ರ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts