More

    ಕೆಕೆಆರ್‌ಡಿಬಿ ಕ್ರಿಯಾಯೋಜನೆ ರೂಪಿಸಿ

    ಕಲಬುರಗಿ: ಅಭಿವೃದ್ಧಿಯಲ್ಲಿ ಮೊದಲು ೧೫೩ ಕೋಟಿ ರೂ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಬಿಡುಗಡೆ ಆಗಿತ್ತು. ಇದೀಗ ೩೦೦೦ ಕೋಟಿ ರೂ. ಬಿಡುಗಡೆ ಆಗುತ್ತಿದೆ. ಆದರೆ ಕೊಟ್ಟಷ್ಟು ಬಳಕೆ ಆಗುತ್ತಿಲ್ಲ. ಬಳಕೆಗೆ ಕ್ರಿಯಾಯೋಜನೆ ರೂಪಿಸಬೇಕು ಎಂದು ಅರ್ಥಶಾಸ್ತ್ರಜ್ಞೆ ಪ್ರೊ.ಸಂಗೀತಾ ಕಟ್ಟಿಮನಿ ಹೇಳಿದರು.

    ದೇವರಾಜ ಅರಸು ಮತ್ತು ಎಸ್.ಬಂಗಾರಪ್ಪ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕರ್ನಾಟಕ ನಾಮಕರಣಕ್ಕೆ ೫೦ರ ಸಂಭ್ರಮ ನಿಮಿತ್ತ ಭಾನುವಾರ ಆಯೋಜಿಸಿದ್ದ ೩೭೧(ಜೆ) ವಿಧಿ ಜಾರಿ ದಶಮಾನೋತ್ಸವ ಒಂದು ಅವಲೋಕನ ಹಾಗೂ ಸಾಧಕರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಕೆಕೆಆರ್‌ಡಿಬಿಯನ್ನು ಶಕ್ತಿಯುತ ಮಾಡಿದರೆ ಅಭಿವೃದ್ಧಿ ಸಾಧ್ಯ. ಪ್ರತ್ಯೇಕ ಸ್ಥಾನಮಾನ ನಂತರ ೧೦ ವರ್ಷದಲ್ಲಿ ೬,೭೯೬ ಮೆಡಿಕಲ್ ಸೀಟ್ ಪಡೆದಿದ್ದರೆ. ಇಂಜನಿಯರಿಂಗ್‌ನಲ್ಲಿ ೧೦ ವರ್ಷದಲ್ಲಿ ೫೮,೨೨೮ ಸಿಇಟಿ ಸೀಟ್ ಅಲಾಟ್‌ಮೆಂಟ್ ಆಗಿವೆ. ಇದರಲ್ಲೂ ಅರ್ಧದಷ್ಟು ಸೀಟ್ ಉಳಿಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

    ಪ್ರಾಥಮಿಕ, ಪ್ರೌಢ ಶಿಕ್ಷಣದಲ್ಲಿ ರಾಜ್ಯಕ್ಕೆ ಹೋಲಿಸಿದರೆ ನಮ್ಮ ಭಾಗದ ಜಿಲ್ಲೆಗಳು ಕೊನೇ ಸ್ಥಾನದಲ್ಲಿ ಉಳಿಯುತ್ತಿವೆ. ಶಿಕ್ಷಕರಿಲ್ಲದ ಶಾಲೆ, ಏಕೋಪಾಧ್ಯಾಯ ಶಾಲೆ, ಶಿಥಿಲಾವಸ್ಥೆ ಶಾಲಾ ಕೊಠಡಿಗಳು ಹೆಚ್ಚಿವೆ. ಶಾಲೆಯಿಂದ ಹೊರಗೆ ಉಳಿಯುತ್ತಿರುವುದು ಹೆಚ್ಚುತ್ತಿದೆ. ಇಂತಹ ಸಮಸ್ಯೆಗೆ ಕೆಕೆಆರ್‌ಡಿಬಿ ವಿಶೇಷ ಕಾರ್ಯಕ್ರಮ ರೂಪಿಸಿ ಪರಿಹರಿಸಬೇಕು ಎಂದು ಸಲಹೆ ನೀಡಿದರು.

    ಕೆಕೆಆರ್‌ಡಿಬಿಗೆ ಸಚಿವಾಲಯ ನೀಡಬೇಕು. ಹೊಸ ಕೈಗಾರಿಕಾ ನೀತಿ ಘೋಷಿಸಬೇಕು. ಸ್ಟಾರ್ಟಪ್ ಕ್ಲಸ್ಟರ್ ನೀಡಬೇಕು. ಹೂಡಿಕೆದಾರರ ಸಮಾವೇಶ ನಮ್ಮ ಭಾಗದಲ್ಲಿ ನಡೆಯಬೇಕು. ತಲಾ ಆದಾಯ ಹೆಚ್ಚಿಸಬೇಕು. ಬಡತನ ನಿರ್ಮೂಲನೆ ಆಗಿ ಹಸಿರೀಕರಣ ಹೆಚ್ಚಿಸುವ ಅಗತ್ಯವಿದೆ ಎಂದರು.

    ಹೋರಾಟಗಾರ ರಜಾಕ್ ಉಸ್ತಾದ್ ಮಾತನಾಡಿ, ವಿಶಿಷ್ಟವಾದ ಮೀಸಲು ನಮ್ಮ ಭಾಗಕ್ಕೆ ದೊರಕಿದೆ. ಅದನ್ನು ಅರ್ಥ ಮಾಡಿಕೊಳ್ಳದೆ ಎಡವುತ್ತಿರುವುದರಿಂದ ಸೌಲಭ್ಯ ಕಳೆದುಕೊಳ್ಳುತ್ತಿದ್ದೇವೆ. ೩೭೧(ಜೆ) ಪ್ರಮಾಣಪತ್ರ ಪಡೆಯಲು ತೊಂದರೆಯಾಗುತ್ತಿದೆ. ನೇಮಕಗಳಲ್ಲಿ ಮನಸ್ಸಿಗೆ ಬಂದಂತೆ ಸುತ್ತೋಲೆ ಹೊರಡಿಸಿ ಗೊಂದಲ ಸೃಷ್ಟಿಸಲಾಗುತ್ತಿದೆ. ಅರ್ಜಿ ಕರೆಯುವಲ್ಲಿ, ಮೆರಿಟ್ ಪಟ್ಟಿ ಬಿಡುಗಡೆಯಲ್ಲೂ ಗೊಂದಲಗಳಿದ್ದು, ಪರಿಹರಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

    ಪ್ರತಿಷ್ಠಾನದ ಅಧ್ಯಕ್ಷ ಡಾ.ಚಿ.ಸಿ. ನಿಂಗಣ್ಣ ಮಾತನಾಡಿ, ೩೭೧(ಜೆ) ದಶಮಾನೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮದ ಚಿಂತನ ಮಂಥನ ಅಗತ್ಯವಾಗಿದೆ. ನಮ್ಮ ಸಂಘಟನೆ ಸುವರ್ಣ ಕರ್ನಾಟಕ ಪ್ರಶಸ್ತಿ ನೀಡುವುದಾಗಿ ಘೋಷಿಸಿದ ನಂತರ ಕಸಾಪದವರೂ ಅರ್ಜಿ ಆಹ್ವಾನಿಸಿರುವುದು ಉತ್ತಮ ಬೆಳವಣಿಗೆ ಎಂದರು.

    ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಎಂಎಲ್‌ಸಿ ಡಾ.ಚಂದ್ರಶೇಖರ ಪಾಟೀಲ್, ಪ್ರಾಧ್ಯಾಪಕ ಚಂದ್ರಕಾಂತ ಯಾತನೂರ, ಪ್ರಮುಖರಾದ ನೀಲಕಂಠರಾವ ಮೂಲಗೆ, ಶಿವಾನಂದ ಖಜೂರ್ಗಿ, ಪ್ರೊ.ವಾಸುದೇವ ಸೇಡಂ, ಮಾನು ಸಗರ ಇತರರಿದ್ದರು. ಪ್ರೊ.ದೇವಿದಾಸ ಪವಾರ, ಡಾ.ಶಂಕರ ಬಾಳಿ ನಿರೂಪಣೆ ಮಾಡಿದರು. ಪ್ರೊ.ಬಿ.ಎಚ್.ನಿರಗುಡಿ ಸ್ವಾಗತಿಸಿದರು. ಚಂದ್ರಕಾಂತ ಕಣವೇಶ್ವರ ವಂದಿಸಿದರು. ೫೦ ಸಾಧಕರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ೩೭೧(ಜೆ) ಜಾರಿ ಹೋರಾಟದ ಕಿರುಸಂಚಿಕೆಯನ್ನು ಬಿಜೆಪಿ ಮುಖಂಡ ಶಿವಕಾಂತ ಮಹಾಜನ್ ಬಿಡುಗಡೆ ಮಾಡಿದರು.

    ಕಲ್ಯಾಣ ಕರ್ನಾಟಕಕ್ಕೆ ೩೭೧(ಜೆ) ವಿಧಿ ಜಾರಿ ನಂತರ ಎಲ್ಲರೂ ನಿರ್ಲಕ್ಷ್ಯ ವಹಿಸುತ್ತಿದ್ದು, ಸಮರ್ಪಕ ಅನುಷ್ಠಾನಕ್ಕೆ ಗಮನಹರಿಸುವ ಅಗತ್ಯವಿದೆ.
    | ಶ್ರೀ ರೇವಣಸಿದ್ಧ ಶಿವಾಚಾರ್ಯ ಶ್ರೀನಿವಾಸ ಸರಡಗಿ

    ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಹುದ್ದೆಗಳಿದ್ದು ಭರ್ತಿ ಮಾಡಬೇಕು. ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಬೇಕು. ಕಟ್ಟಡಗಳ ಜತೆಗೆ ಬೌದ್ಧಿಕ ಪ್ರಗತಿಗೂ ಆದ್ಯತೆ ಕೊಡಬೇಕು.
    | ಶರಣಪ್ಪ ಮಟ್ಟೂರ ವಿಧಾನ ಪರಿಷತ್ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts