More

    ಶಂಕಿತ ಐದೂ ವರದಿ ನೆಗೆಟಿವ್

    ಬೆಳಗಾವಿ: ಜಿಲ್ಲೆಯಲ್ಲಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ಕರೊನಾ ವೈರಸ್ ಶಂಕಿತ ಐದು ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ ಎಂದು ಡಿಸಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

    ನಗರದ ಡಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸದಾಗಿ ಮತ್ತೊಂದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದರು.


    ಆತಂಕ ಬೇಡ: ಬೈಲಹೊಂಗಲ ಭಾಗದಲ್ಲಿ ಕರೊನಾ ಶಂಕಿತರೊಬ್ಬರ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಆ ಭಾಗದ ವರದಿಯೂ ನೆಗೆಟಿವ್ ಬಂದಿದ್ದರಿಂದ ಜನರು ಆತಂಕ ಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲೆಗೆ ಇಲ್ಲಿಯವರೆಗೆ 229 ಜನರು ವಿದೇಶದಿಂದ ಆಗಮಿಸಿದ್ದಾರೆ. ಈ ಪೈಕಿ 194 ಜನರು ಮನೆಯಲ್ಲೇ ತೀವ್ರ ನಿಗಾದಲ್ಲಿದ್ದಾರೆ. 34 ಜನರು 14 ದಿನಗಳ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಇಬ್ಬರು ಐಸೋಲೇಷನ್ ವಾರ್ಡ್‌ನಲ್ಲಿದ್ದು, ಗಂಟಲು ದ್ರವ ಮಾದರಿ ಕಳುಹಿಸಲಾದ ವ್ಯಕ್ತಿಗಳು ಆರೋಗ್ಯವಾಗಿದ್ದಾರೆ. ಬಿಮ್ಸ್‌ನಲ್ಲಿ 80 ಮತ್ತು ಕೆಎಲ್‌ಇ ಆಸ್ಪತ್ರೆಯಲ್ಲಿ 60 ಜನರನ್ನು ನಿಗಾದಲ್ಲಿ ಇರಿಸಲು ಅವಕಾಶವಿದೆ ಎಂದು ಬೊಮ್ಮನಹಳ್ಳಿ ತಿಳಿಸಿದರು.

    ಜಿಲ್ಲೆಯಲ್ಲಿ ಸರ್ಕಾರದ ಹೊಸ ನಿಬಂಧನೆಗಳನ್ನು ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ. ಅತ್ಯವಶ್ಯಕ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಜನರ ಸಂಚಾರಕ್ಕೆ ನಿರ್ಬಂಧವಿಲ್ಲ. ಆದರೆ, ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಈ ಸಂಬಂಧ ಚರ್ಚಿಸಲು ನಗರ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

    ಅಂತರ್ ಜಿಲ್ಲಾ ಗಡಿಯಲ್ಲೂ ತಪಾಸಣೆ: ಜಿಲ್ಲೆಯ ಗಡಿಭಾಗದಲ್ಲಿ ಆರೋಗ್ಯ ಇಲಾಖೆ ತಂಡಗಳನ್ನು ನಿಯೋಜಿಸಿ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿದೆ.

    ಧಾರವಾಡ, ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿ ತಪಾಸಣೆ ಕೇಂದ್ರ ಸ್ಥಾಪಿಸಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ವಿವರಿಸಿದರು.

    ಪುಣೆಯಿಂದ ಬಂದವರ ತಪಾಸಣೆಗೆ ಒತ್ತಾಯ

    ಅಥಣಿ: ಮಹಾರಾಷ್ಟ್ರದ ಪುಣೆ ನಗರದಿಂದ ಸೋಮವಾರ ಅಥಣಿ ತಾಲೂಕಿನ ಸತ್ತಿ ಗ್ರಾಮಕ್ಕೆ ಆಗಮಿಸಿದ್ದ ಕುಟುಂಬವೊಂದರ ಸದಸ್ಯರ ಆರೋಗ್ಯ ತಪಾಸಣೆ ಮಾಡಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
    ಮೂಲತಃ ಸತ್ತಿ ಗ್ರಾಮದ ಈ ಕುಟುಂಬ ಉದ್ಯೋಗಕ್ಕಾಗಿ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿತ್ತು. ಆದರೆ, ಕರೊನಾ ಹರಡುವ ಭೀತಿಯಿಂದ ನಾಲ್ಕು ದಿನಗಳ ಹಿಂದೆ ಕುಟುಂಬಸ್ಥರು ಗ್ರಾಮಕ್ಕೆ ಆಗಮಿಸಿದ್ದರೆ. ಅವರನ್ನು ಕಂಡ ಗ್ರಾಮಸ್ಥರು ಆತಂಕಗೊಂಡು ಕರೊನಾ ತಗುಲಿರುವ ಶಂಕೆಯಿಂದ ಕುಟುಂಬಸ್ಥರನ್ನು ತಪಾಸಣೆ ನಡೆಸಬೇಕೆಂದು ಒತ್ತಾಯಿಸಿದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ಸತ್ತಿ ಗ್ರಾಮದ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯ ಡಾ.ಅನೂಪ ಗಸ್ತಿ ಕುಟುಂಬ ಸದಸ್ಯರನ್ನು ಪರೀಕ್ಷಿಸಿದರು. ಆದರೆ, ಅವರಲ್ಲಿ ಕರೊನಾ ಸೋಂಕಿನ ಲಕ್ಷಣಗಳಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಮಸ್ಯೆ ಕಂಡುಬಂದಲ್ಲಿ ತಾಲೂಕು ಆಸ್ಪತ್ರೆಗೆ ಕಳುಹಿಸಿ ಕೊಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts