More

    ಸೋರುತಿಹುದು ಪೊಲೀಸ್ ಕ್ವಾರ್ಟರ್ಸ್

    ರಿಪ್ಪನ್‌ಪೇಟೆ: ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪೊಲೀಸ್ ವಸತಿಗೃಹಗಳು ಸೋರುತ್ತಿದ್ದು ಸಿಬ್ಬಂದಿ ರಕ್ಷಣೆಗಾಗಿ ಟಾರ್ಪಾಲ್ ಮೊರೆ ಹೋಗಿದ್ದಾರೆ.
    ಕಳೆದ 20 ವರ್ಷಗಳ ಹಿಂದೆ ನಿರ್ಮಿಸಿದ್ದ ವಸತಿಗೃಹಗಳ ಛಾವಣಿ ಶಿಥಿಲಗೊಂಡಿದ್ದು ಮಳೆ ಬಂದರೆ ಇಲ್ಲಿನ ನಿವಾಸಿಗಳ ಸ್ಥಿತಿ ಹೇಳತೀರದಾಗಿದೆ. ಅಲ್ಲದೆ ಮೂಲ ಸೌಕರ್ಯಗಳಿಂದಲೂ ವಂಚಿತವಾಗಿದ್ದು ರಸ್ತೆ, ಕುಡಿಯುವ ನೀರು, ಶೌಚಗೃಹ, ಚರಂಡಿ ನಿರ್ವಹಣೆ, ಬೀದಿದೀಪಗಳ ನಿರ್ವಹಣೆ ಮತ್ತು ಸ್ವಚ್ಛತೆ ದೂರದ ಮಾತಾಗಿದೆ.
    2003ರಲ್ಲಿ ಅಂದಿನ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಡಾ. ಜಿ.ಡಿ.ನಾರಾಯಣಪ್ಪ ಅವಧಿಯಲ್ಲಿ ಈ ವಸತಿಗೃಹ ಉದ್ಘಾಟನೆಗೊಂಡಿತ್ತು. ಉದ್ಘಾಟನೆಗೊಂಡ ವಸತಿಗೃಹಗಳ ನಿಜ ಬಣ್ಣ ಕೇವಲ ಐದು ವರ್ಷಗಳಲ್ಲಿ ಬಯಲಾಗಿತ್ತು. ಸಣ್ಣ ಸಣ್ಣದಾಗಿ ಸೋರಲು ಶುರುವಾದ ಛಾವಣಿ ಈಗ ಸಂಪೂರ್ಣ ಬಿರುಕು ಬಿಟ್ಟಿದ್ದು ಎಲ್ಲೆಂದರಲ್ಲಿ ಮಳೆ ನೀರು ಸೋರುತ್ತಿದೆ.
    ಅವೈಜ್ಞಾನಿಕವಾಗಿ ನಿರ್ಮಾಣದಿಂದ 22 ವಸತಿಗೃಹಗಳ, 22 ಶೌಚಗೃಹಕ್ಕೆ ಒಂದೇ ಸಂಪರ್ಕ ಕಲ್ಪಿಸಿದ್ದು, ಪೈಪ್ ಬ್ಲಾಕ್ ಆದರೆ ಅಥವಾ ಒಡೆದರೆ ದುರ್ನಾತದಿಂದ ಪೊಲೀಸ್ ಕುಟುಂಬಗಳು ನರಕ ಯಾತನೆ ಅನುಭವಿಸಬೇಕಾಗುತ್ತದೆ.
    ಮಳೆ, ಬಿಸಿಲು, ಚಳಿ, ಹಗಲು, ರಾತ್ರಿ ಎನ್ನದೆ ಸಾರ್ವಜನಿಕರ ಸೇವೆ ಮಾಡುವ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಿಬ್ಬಂದಿಗೆ ನಿರಂತರ ಒಂದಿಲ್ಲೊಂದು ತಲೆನೋವು ಇದ್ದೇ ಇರುತ್ತದೆ. ಬಂದೋಬಸ್ತ್, ಸಂಚಾರ ದಟ್ಟಣೆ, ಕೆಲಸದ ಒತ್ತಡ ಹೀಗೆ ನೂರೆಂಟು ಗೌಜುಗಳನ್ನು ಮುಗಿಸಿಕೊಂಡು ಮನೆಗೆ ಹೋದರೆ ಅಲ್ಲಿಯೂ ನೂರೆಂಟು ಸಮಸ್ಯೆಗಳು ದುತ್ತೆಂದು ಎದುರಾಗುತ್ತವೆ.
    ಸೋರುತ್ತಿರುವ ಮನೆ, ಕುಡಿಯಲು ಶುದ್ಧ ನೀರಿಲ್ಲ, ಇರುವ ಒಂದು ಬಾವಿಯಲ್ಲಿ ಗಿಡಗಂಟಿಗಳು ಬೆಳೆದು ಪಾಳು ಬಿದ್ದಂತಿದೆ, ವಸತಿಗೃಹದ ಸುತ್ತಲೂ ಆಳೆತ್ತರದ ಪೊದೆಗಳು ಬೆಳೆದಿದ್ದು ವಿಷಜಂತುಗಳ ಭಯ ಇನ್ನಷ್ಟು ಆತಂಕಕ್ಕೆ ಎಡೆ ಮಾಡಿದೆ. ರಸ್ತೆ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಕೆಲವು ಸಿಬ್ಬಂದಿ ದ್ವಿಚಕ್ರ ವಾಹನದಲ್ಲಿ ಓಡಾಡುವಾಗ ಬಿದ್ದ ಉದಾಹರಣೆಗಳು ಇವೆ. ಹದಗೆಟ್ಟ ಬೀದಿದೀಪಗಳ ನಿರ್ವಹಣೆ ಕೂಡ ಮಾಡಿಲ್ಲ. ಗ್ರಾಪಂ ಕೂಡ ಇತ್ತ ಗಮನ ಹರಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುವರೇ ಎಂಬುದನ್ನು ಕಾದುನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts