More

    ಸಿದ್ದರಾಮೇಶ್ವರ ವಚನ ಕ್ರಾಂತಿಯ ಶರಣ: ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಣ್ಣನೆ

    ತುಮಕೂರು: ವಚನ ಕ್ರಾಂತಿಯೊಂದಿಗೆ ಸಮಾಜದ ಪರಿವರ್ತನೆಗೆ ಶ್ರಮಿಸಿ, ನಾಡಿನೆಲ್ಲೆಡೆ ಕೆರೆ ಕಟ್ಟಿ ನೀರಿನ ಮಹತ್ವವನ್ನು 12ನೇ ಶತಮಾನದಲ್ಲಿಯೇ ಸಾರಿದ ಕಾಯಕ ಯೋಗಿ ಗುರು ಸಿದ್ದರಾಮೇಶ್ವರ ಸಂದೇಶಗಳು ಇಂದಿಗೂ ಪ್ರಸ್ತುತ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

    ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಭಾನುವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಭೋವಿ ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಸಿದ್ದರಾಮೇಶ್ವರರು ಯಾವ ಜಾತಿಗೂ ಸೀಮಿತರಲ್ಲ. ಸಾಮಾಜಿಕ ಕ್ರಾಂತಿಯಲ್ಲಿ ಭಾಗವಹಿಸಿ ವಚನ ಕ್ರಾಂತಿಯನ್ನು ಮನೆಮನೆಗೆ ತಲುಪಿಸಿದ ಆದ್ಯ ಶರಣರು. ಅವರು ನೀಡಿದ ಸಂದೇಶ ಇಂದಿನ ಸಮಾಜಕ್ಕೂ ಅವಶ್ಯಕವಾಗಿದೆ ಎಂದರು.

    ಭೋವಿ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ಸಮುದಾಯದಲ್ಲಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಸಮುದಾಯದ ಯುವಕ-ಯುವತಿಯರಿಗೆ ವಿದ್ಯಾಭ್ಯಾಸಕ್ಕೆ ಪೂರಕವಾದಂತಹ ವಾತಾವರಣವನ್ನು ನಿರ್ಮಿಸುವಂತೆ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

    ಸಮುದಾಯದ ಹಿತವನ್ನು ಕಾಯುವ ನಿಟ್ಟಿನಲ್ಲಿ ಸಮುದಾಯದ ಎಲ್ಲರು ಒಗ್ಗಟ್ಟಾಗಬೇಕಿದೆ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸಿ ಒಟ್ಟಾಗಿ ವಿರೋಧಿಸಬೇಕಿದೆ, ಇಲ್ಲದೆ ಹೋದಲ್ಲಿ ಸಮುದಾಯ ಹಿಂದುಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

    ಸಮುದಾಯ ಎಂದಾಗ ಎಲ್ಲರೂ ಪಕ್ಷಾತೀತವಾಗಿ ಒಂದಾಗುವಂತೆ ಕರೆಯಿತ್ತರು. ತುಮಕೂರು ಉಪವಿಭಾಗಧಿಕಾರಿ ನಟರಾಜ್, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಎಚ್.ಉಮೇಶ್ , ಜೆಡಿಎಸ್ ಮುಖಂಡ ಎನ್.ಗೋವಿಂದರಾಜು, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಪಾಲಿಕೆ ಸದಸ್ಯರಾದ ಎಸ್ ಮಂಜುನಾಥ್, ವಿಶ್ವನಾಥ್, ಹರಿಕಥಾ ವಿದ್ವಾಂಸ ಲಕ್ಷ್ಮಣ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.

    ದೈವತ್ವಕ್ಕೆ ಏರಿದ ಅನುಭಾವಿ: ಸಿದ್ದರಾಮೇಶ್ವರರು ದೇವರಲ್ಲ. 12ನೇ ಶತಮಾನದ ಚಾರಿತ್ರಿಕ ವ್ಯಕ್ತಿ ಮಾನವತ್ವದಿಂದ ದೈವತ್ವಕ್ಕೆ ಏರಿದ ಅನುಭಾವಿ ಶರಣ, ಭಾರತ ಪ್ರಪಂಚಕ್ಕೆ ನೀಡಿದ ಬುದ್ಧ ಹಾಗೂ ಶರಣರ ಅನುಭವ ಮಂಪಟದಿಂದಲೇ ಪ್ರಜಾಪ್ರಭುತ್ವ ರಚನೆಯಾಯಿತು ಎಂದು ತುಮಕೂರು ವಿವಿ ಕನ್ನಡ ಪ್ರಾಧ್ಯಾಪಕ ನಾಗಭೂಷಣ್ ಬಗ್ಗನಡು ಹೇಳಿದರು. ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ ಸಿದ್ದರಾಮರು ಬುದ್ಧನಂತೆ ಸಮಾಜಕ್ಕೆ ಬೆಳಕು ತೋರಬಲ್ಲ ವ್ಯಕ್ತಿತ್ವವುಳ್ಳವರು, ವಚನಗಳ ಮೂಲಕ ಸಮಾಜದ ಮೇಲೆ ಬೀರಿದ ಪ್ರಭಾವವನ್ನು ಪವಾಡವನ್ನು ಬಿಟ್ಟು ಸಾಮಾಜಿಕ ನೆಲೆಗಟ್ಟಿನಲ್ಲಿ ಅಭ್ಯಸಿಸಬೇಕಾದ ಅನಿವಾರ್ಯತೆ, ಸಿದ್ದರಾಮೇಶ್ವರರ ವಚನಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

    ಹಲವರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಎತ್ತಿನಹೊಳೆ ಭೂಸ್ವಾಧೀನ ಅಧಿಕಾರಿ ಮಂಜುನಾಥ್, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಏಕೇಶ್ ಬಾಬು, ಸರ್ಕಾರಿ ನೌಕರರ ಸಂಘದ ಖಜಾಂಚಿ ಡಾ.ಚೌಡಯ್ಯ ಹಾಗೂ ಗುತ್ತಿಗೆದಾರ ಟಿ.ಎಲ್.ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್ ಹಾಲ್‌ನಿಂದ ಪ್ರಾರಂಭವಾದ ಸಿದ್ದರಾಮೇಶ್ವರರ ಭಾವಚಿತ್ರ ಹಾಗೂ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮೆರವಣಿಗೆಗೆ ಸಂಸದ ಜಿ.ಎಸ್.ಬಸವರಾಜು ಚಾಲನೆ ನೀಡಿದರು.

    15 ಟಿಎಂಕೆ ಬೋವಿ ಸಂಘ: ತುಮಕೂರಿನಲ್ಲಿ ರಾಜ್ಯ ಮಟ್ಟದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತ್ಯೋತ್ಸವಕ್ಕೆ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಜಿ.ಬಿ.ಜ್ಯೋತಿಗಣೇಶ್, ಎಚ್.ಉಮೇಶ್, ನಟರಾಜ್, ಲಕ್ಷ್ಮಣ್‌ದಾಸ್, ನಾಗಭೂಷಣ್ ಬಗ್ಗನಡು, ಮಂಜುನಾಥ್, ಏಕೇಶ್ ಬಾಬು, ಚೌಡಯ್ಯ, ರಾಜೇಂದ್ರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts