More

    ಸೋಲರಿಯದ ಸರದಾರ ವಿವಾದಗಳಿಂದ ದೂರ…

    ಸತತ ನಾಲ್ಕು ಚುನಾವಣೆಗಳಲ್ಲಿ ಜಯ ದಾಖಲಿಸಿ ಸೋಲರಿಯದ ಸರದಾರ ಎಂಬ ಬಿರುದು ತಮ್ಮದಾಗಿಸಿಕೊಂಡಿದ್ದ ಸುರೇಶ ಅಂಗಡಿ ಅವರದು ರಾಜಕೀಯದಲ್ಲಿ ಮೂರು ದಶಕಗಳ ಪರಿಶ್ರಮದ ಹಾದಿ. ಕಳೆದ ಶತಮಾನದ ತೊಂಬತ್ತರ ದಶಕದಲ್ಲಿ ಗಡಿನಾಡು ಬೆಳಗಾವಿಯಲ್ಲಿ ಕಮಲ ಪಡೆಯನ್ನು ಶಕ್ತಿಶಾಲಿಯಾಗಿಸುವ ನಿಟ್ಟಿನಲ್ಲಿ ದಣಿವರಿಯದೇ ದುಡಿದಿದ್ದ ಅವರು, ನರೇಂದ್ರ ಮೋದಿ ಸಂಪುಟದಲ್ಲಿ ಮಂತ್ರಿಯಾಗುವ ಮಟ್ಟಿಗೆ ಬೆಳೆದಿದ್ದು ಕಾರ್ಯಕರ್ತರ ಪಡೆಗೆ ಅನುಕರಣೀಯ.

    ಆರಂಭದಲ್ಲೇ ಬೆಳಗಾವಿ ಜಿಲ್ಲೆಯ ಕೃಷಿ ಮತ್ತು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅಂಗಡಿ, ಸಮಾಜಸೇವೆಯಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದರು. ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು. ಅವರ ಕಾರ್ಯಕ್ಷಮತೆಯನ್ನು ಗಮನಿಸಿದ ಬಿಜೆಪಿ ವರಿಷ್ಠರು, 1996ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಹುದ್ದೆ ನೀಡಿದರು. ಆಗ, ಬೆಳಗಾವಿಯಲ್ಲಿ ಬಿಜೆಪಿ ಅಷ್ಟೊಂದು ಪ್ರಬಲವಾಗಿರಲಿಲ್ಲ. ಅಲ್ಲಿ ಕಮಲವನ್ನು ಅರಳಿಸುವುದು ಸುಲಭದ ಮಾತಾಗಿರಲಿಲ್ಲ. ಆದರೆ, ಉತ್ಸಾಹಿ ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡು ಅಂಗಡಿ ಅವರು ಪಕ್ಷ ಸಂಘಟಿಸಿದರು. ಬೂತ್​ವುಟ್ಟದಲ್ಲಿ ಬಿಜೆಪಿಯ ಅಲೆ ಸೃಷ್ಟಿಸಿದರು. ಐದೇ ವರ್ಷಗಳಲ್ಲಿ (2001) ಬಿಜೆಪಿಯ ಬೆಳಗಾವಿ ಜಿಲ್ಲಾಧ್ಯಕ್ಷರಾದರು. ಮೂರು ವರ್ಷಗಳ ಕಾಲ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ, 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಸಲ ಲೋಕಸಭೆ ಪ್ರವೇಶಿಸಿದರು. ಅಂದು ವಿಜಯಮಾಲೆ ಧರಿಸಿದವರು ಮತ್ತೆ ಹಿಂತಿರುಗಿ ನೋಡಿದ ಉದಾಹರಣೆಯೇ ಇಲ್ಲ.

    ಕೃಷಿಯಿಂದ ರಾಜಕಾರಣಕ್ಕೆ

    ಅಂಗಡಿಯವರದ್ದು ಕೃಷಿ ಕುಟುಂಬ. ಬೆಳಗಾವಿ ತಾಲೂಕಿನ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಚನ್ನಬಸಪ್ಪ-ಸೋಮವ್ವ ದಂಪತಿಯ ಪುತ್ರನಾಗಿ 1955ರ ಜೂ.1ರಂದು ಜನಿಸಿದ ಅವರು, ಬಿ.ಕಾಂ., ಎಲ್​ಎಲ್​ಬಿ (ಸ್ಪೆಷಲ್) ಪದವಿ ಗಳಿಸಿದ್ದಾರೆ. ಕಲಿಕೆ ಮುಗಿದ ನಂತರ, ಕೃಷಿ ಕಾಯಕಕ್ಕೆ ಅಣಿಯಾದರು. ಕೆಲಕಾಲ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದು, ಉದ್ಯಮ ಕ್ಷೇತ್ರದತ್ತ ಮುಖ ಮಾಡಿದರು. ಆಗ, ಅವರ ಕೈಹಿಡಿದು ನಡೆಸಿದ್ದು ಸಿಮೆಂಟ್ ಮತ್ತು ನೀರಿನ ಪಂಪ್​ಗಳ ವ್ಯವಹಾರ. ಅತ್ತ ಉದ್ಯಮವನ್ನು ನಿಭಾಯಿಸುತ್ತ, ಇತ್ತ ಪಕ್ಷ ಸಂಘಟನೆ ಮಾಡುತ್ತ ಬೆಳೆದ ಅಂಗಡಿ ರಾಷ್ಟ್ರಮಟ್ಟಕ್ಕೂ ಬೆಳೆದರು. ಅವರದ್ದು ಸೌಮ್ಯ ಸ್ವಭಾವ, ಜಾತ್ಯತೀತ ಮತ್ತು ಭಾಷಾತೀತ ನಿಲುವು. ರೈತರು, ಕಾರ್ವಿುಕರು, ಮಹಿಳೆಯರು, ಮಕ್ಕಳು ಹಾಗೂ ಯುವಕರ ಅಭಿವೃದ್ಧಿಯತ್ತ ವಿಶೇಷ ಒಲವು. 15 ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಅಂಗಡಿ, ಉತ್ತಮ ರಾಜಕಾರಣಿಯಾಗಿ ಹೊರಹೊಮ್ಮಿದ್ದರು. ಅವರ ಅವಶ್ಯಕತೆ ಇಡೀ ನಾಡಿಗೆ, ದೇಶಕ್ಕೆ ಇನ್ನೂ ಇದೆ ಎನ್ನುವಾಗಲೇ ಅಸ್ತಂಗತರಾಗಿಬಿಟ್ಟರು.

    ಅಭಿವೃದ್ಧಿಯತ್ತ ಹೆಜ್ಜೆ…

    • 1996ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ, 2001ರಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಸೇವೆ.
    • 2004ರಲ್ಲಿ ಆಹಾರ ಮತ್ತು ಸಾರ್ವಜನಿಕರ ಪಡಿತರ ವಿತರಣೆ ಸ್ಥಾಯಿ ಸಮಿತಿ, ಹಣಕಾಸು ಇಲಾಖೆ ಕನ್ಸೂಲೇಟಿವ್ ಸಮಿತಿ ಸದಸ್ಯರಾಗಿ ಸೇವೆ.
    • 2009ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ, ಪಿಂಚಣಿ, ವೇತನ ಮತ್ತು ಸಂಸತ್ ಸದಸ್ಯರ ಭತ್ಯೆ ಸಮಿತಿ ಸದಸ್ಯರಾಗಿ ನೇಮಕ. ಕೇಂದ್ರ ನೇರ ತೆರಿಗೆ ಸಲಹಾ ಸಮಿತಿ ಸದಸ್ಯರಾಗಿ ಸೇವೆ.

    ಅಜಾತಶತ್ರು

    ರಾಜಕೀಯದಲ್ಲಿ ವಿವಾದಗಳು ಸಾಮಾನ್ಯ. ಆದರೆ ಸುರೇಶ ಅಂಗಡಿ ಇದಕ್ಕೆ ಅಪವಾದ. ಒಂದೇ ಒಂದೂ ವಿವಾದದ ಕಳಂಕವನ್ನು ತಮ್ಮ ರಾಜಕೀಯ ಬದುಕಿಗೆ ಅಂಟಿಸಿಕೊಂಡವರಲ್ಲ. ಪ್ರಾಮಾಣಿಕತೆ ತಳಹದಿಯಲ್ಲೇ ಬೆಳೆದು ಬಂದ ಸಜ್ಜನ ರಾಜಕಾರಣಿ. ಸಮಾಜದಲ್ಲಿ ಯಾವುದೇ ಸ್ತರದ ಜನರಿಗೆ ಅನ್ಯಾಯವಾದಾಗ, ಬೀದಿಗಿಳಿದು ಹೋರಾಟ ಮಾಡುತ್ತ ಬಂದಿದ್ದರು.

    ಶಿಕ್ಷಣ ಕ್ರಾಂತಿ

    ಬೆಳಗಾವಿ ಹೊರವಲಯದ ಸಾವಗಾಂವ ರಸ್ತೆಯಲ್ಲಿ ಸುರೇಶ ಅಂಗಡಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದ ಅವರು, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬರುವ ನಗರ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಿಇ, ಪಿಯುಸಿ, ಡಿಪ್ಲೊಮಾ ಶಿಕ್ಷಣ ನೀಡುತ್ತಿದ್ದರು. ಕೇಂದ್ರ ಸರ್ಕಾರದ ಕೌಶಲ ಭಾರತ ಯೋಜನೆಯಡಿ ಕಾರ್ಯಾಗಾರ ಆಯೋಜಿಸಿ, ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳ ವೃತ್ತಿಕೌಶಲ ಅಭಿವೃದ್ಧಿಪಡಿಸಲು ಶ್ರಮಿಸಿದ್ದರು.

    ಬೇಗ ಗುಣವಾಗಿ ಮರಳಿ ಬನ್ನಿ ಎಂದು ಹಲವರಿಗೆ ಹಾರೈಸಿದ್ದವರೇ ಮರಳಿ ಬಾರದ ಲೋಕಕ್ಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts