More

    ತನಗೆ ಸಾವು ಹತ್ತಿರದಲ್ಲೇ ಇದೆ ಎಂಬ ಸತ್ಯ ಗೊತ್ತಿದ್ದೂ ಎಲ್ಲರೂ ‘ವಾವ್​’ ಎನ್ನುವಂತಹ ಕಾರ್ಯ ಮಾಡುತ್ತಿರುವ ಹೆಣ್ಣುಮಗಳು…

    ನವದೆಹಲಿ: ತಾನಿನ್ನು ಹೆಚ್ಚು ದಿನ ಬದುಕುವುದಿಲ್ಲ ಎಂಬ ವಿಷಯವನ್ನು ವೈದ್ಯರ ಬಾಯಿಂದಲೇ ಕೇಳಿದ ಈ 27 ವರ್ಷದ ಮಹಿಳೆ ಈಗ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

    ಗುಜರಾತ್​ನ ಸೂರತ್​ ನಿವಾಸಿ ಶ್ರುಚಿ ವಾಡಲಿಯಾ ಎಂಬ ಹೆಣ್ಣುಮಗಳು ಕೊನೇ ಸ್ಟೇಜ್​ನ ಬ್ರೇನ್​ ಟ್ಯೂಮರ್​ ಕಾಯಿಲೆಯಿಂದ ಬಳಲುತ್ತಿದ್ದಾರೆ. ತಮಗೆ ಮಾರಣಾಂತಿಕ ರೋಗ ಇರುವುದು ಅವರಿಗೆ ಗೊತ್ತಾಯಿತು. ಆದರೆ ಅವರು ಅಯ್ಯೋ ನಾನು ಸಾಯುತ್ತೇನೆ ಎಂದು ಕೊರಗುತ್ತ ಕುಳಿತುಕೊಳ್ಳದೆ ಪ್ರತಿಯೊಬ್ಬರೂ ‘ ವಾವ್​​’ ಎಂದು ಹುಬ್ಬೇರಿಸುವಂತಹ ಕೆಲಸ ಮಾಡಿದ್ದಾರೆ.

    ಎರಡು ವರ್ಷಗಳಿಂದಲೂ ಆಕೆಗೆ ರೋಗ ಕಾಡುತ್ತಲೇ ಇದೆ. ಅಂದಿನಿಂದಲೂ ಪರಿಸರ ರಕ್ಷಣೆ, ವಾಯುಮಾಲಿನ್ಯದ ವಿರುದ್ಧ ಹೋರಾಟದಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಶ್ರುಚಿ ವಾಡಲಿಯಾ ಅವರು ಈವರೆಗೆ ಒಟ್ಟು 30,000 ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ಅಲ್ಲದೆ ಬೇರೆಯವರನ್ನೂ ಈ ಕೆಲಸಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ. ಇನ್ನು ನಾನು ತುಂಬ ದಿನ ಬದುಕುವುದಿಲ್ಲ ಎಂದು ಕೆಲವೇ ತಿಂಗಳ ಹಿಂದೆ ಅವರಿಗೆ ಗೊತ್ತಾದ ಮೇಲಂತೂ ಪೂರ್ತಿಯಾಗಿ ಪರಿಸರ ಸಂರಕ್ಷಣೆಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಮರಗಿಡಗಳ ನಾಶವಾಗುವುದರೊಂದಿಗೆ ಪರಿಸರ ಮಾಲಿನ್ಯ ದಿನೇದಿನೆ ಹೆಚ್ಚುತ್ತಿರುವುದರಿಂದಲೇ ಮಾರಣಾಂತಿಕ ಕಾಯಿಲೆಗಳ ಪ್ರಮಾಣವೂ ಹೆಚ್ಚಾಗಿದೆ.

    ಹಾಗಾಗಿಯೇ ಇದ್ದಷ್ಟು ದಿನವಾದರೂ ಒಳ್ಳೆಯ ಕೆಲಸ ಮಾಡೋಣ, ಪರಿಸರ ರಕ್ಷಣೆ ಮಾಡೋಣ ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಶ್ರುಚಿ ಹೇಳಿದ್ದಾರೆ.

    ನಾನು ಇನ್ನೇನು ಕೆಲವೇ ದಿನಗಳಲ್ಲಿ ಸಾಯಬಹುದು. ಆದರೆ ನಾನು ನೆಟ್ಟಿರುವ ಮರಗಿಡಗಳ ಮೂಲಕ ಜನರ ಉಸಿರಾಗಿ ಇರುತ್ತೇನೆ ಎಂದು ಶ್ರುಚಿ ಹೇಳಿದ್ದಾರೆ. ಅಲ್ಲದೆ ಈ ಕಾಯಿಲೆಗಳು ಬರುವ ಪ್ರಮಾಣ ಕಡಿಮೆಯಾಗಲಿ. ಇನ್ಯಾರಿಗೂ ಬರುವುದು ಬೇಡ ಎಂಬುದೇ ನನ್ನ ಆಶಯ. ಮರಗಿಡಗಳು ಪರಿಸರವನ್ನು ಸ್ವಚ್ಛವಾಗಿಡುತ್ತವೆ, ಕ್ಯಾನ್ಸರ್​, ಬ್ರೇನ್​ ಟ್ಯೂಮರ್​ನಂತಹ ಮಾರಣಾಂತಿಕ ಕಾಯಿಲೆಗಳನ್ನು ತಡೆಯುತ್ತವೆ ಎಂದು ಹೇಳಿದ್ದಾರೆ.

    ಶ್ರುಚಿ ಅವರು ಹಳ್ಳಿಗಳು, ಶಾಲೆಗಳಿಗೆ ತೆರಳಿ ಅಲ್ಲಿನವರಿಗೂ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಹೆಚ್ಚೆಚ್ಚು ಗಿಡಗಳನ್ನು ನೆಡಲು ಪ್ರೋತ್ಸಾಹಿಸುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts