More

    ಮಕ್ಕಳ ಗ್ರಾಮಸಭೆಗೆ ಕಾಯಕಲ್ಪ: ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ

    ತುಮಕೂರು: ಮಕ್ಕಳಲ್ಲಿ ಪೌರಪ್ರಜ್ಞೆ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷದ ನವೆಂಬರ್ ತಿಂಗಳಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿಸುತ್ತಿದ್ದ ಮಕ್ಕಳ ವಿಶೇಷ ಗ್ರಾಮಸಭೆಗೆ ಕಾಯಕಲ್ಪ ನೀಡಲಾಗಿದ್ದು, ಈ ವರ್ಷ ಮಕ್ಕಳಸ್ನೇಹಿ ಗ್ರಾಪಂ ಅಭಿಯಾನ ಹಾಗೂ ಮಕ್ಕಳ ಗ್ರಾಮಸಭೆ ರೂಪಿಸಿ ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ.

    ನ.4ರಂದು ಸರ್ಕಾರ ಹೊಸ ಆದೇಶ ಹೊರಡಿಸಿದ್ದು ನ.14ರಿಂದ 2021 ಜ.24ರ ವರೆಗೆ 10 ವಾರ ‘ಮಕ್ಕಳ ಸ್ನೇಹಿ ಗ್ರಾಪಂ ಅಭಿಯಾನ’ ಮತ್ತು ಮಕ್ಕಳ ಗ್ರಾಮಸಭೆ ನಡೆಸಲು ರಾಜ್ಯದ 6022 ಗ್ರಾಪಂಗಳಿಗೆ ಸೂಚಿಸಲಾಗಿದೆ.
    ಅಭಿಯಾನದಲ್ಲಿ ಬಾಲಮಿತ್ರ ನೇಮಕ, ಓದುವ ಬಳಕು, ಮಕ್ಕಳ ಕೋರಿಕೆ ಪತ್ರ, ಮಕ್ಕಳ ದನಿ ಬಾಕ್ಸ್, ಎರಡು ವರ್ಷದ ನಡಾವಳಿ ವರದಿ ಹಾಗೂ ಅನುಪಾಲನಾ ವರದಿ ಸಲ್ಲಿಕೆ ಸೇರಿ 6 ಚಟುವಟಿಕೆಗಳನ್ನು ರೂಪಿಸುವ ಮೂಲಕ ಗ್ರಾಪಂಗಳನ್ನು ಮಕ್ಕಳಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ದಾಪುಗಾಲಿಟ್ಟಿದೆ.

    ಕಡ್ಡಾಯವಾಗಿ ಗ್ರಾಮಸಭೆ ನಡೆಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು, ಆದರೆ ಬಹುತೇಕ ಜಿಪಂ ಉದಾಸೀನತೆ ಮುಂದುವರಿಸಿದ್ದರಿಂದ ಇಲಾಖೆ ಮಕ್ಕಳ ಗ್ರಾಮಸಭೆಯನ್ನು ಒಂದು ಚಟುವಟಿಕೆಯಾಗಿ ಮಾಡಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಗೊಳಿಸಲು ಕೇಂದ್ರ ಸರ್ಕಾರವು 1992ರಲ್ಲಿ ವಿಶ್ವಸಂಸ್ಥೆಗೆ ತನ್ನ ಬದ್ಧತೆ ವ್ಯಕ್ತಪಡಿಸಿದೆ. ಆದರೆ, ಮೇಲ್ಮಟ್ಟದ ನಿರ್ಧಾರಗಳು ಅನುಷ್ಠಾನವಾಗದಿರುವುದು ಸರ್ಕಾರದ ಸೂಚನೆಗಳನ್ನು ಅಧಿಕಾರಿಗಳು ಕಳೆದ 10 ವರ್ಷದಲ್ಲಿ ಧಿಕ್ಕರಿಸಿರುವುದು ಸ್ಪಷ್ಟವಾಗಿದೆ.

    ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಿಪಂ ಅಧಿಕಾರಿಗಳ ನಿರ್ಲಕ್ಷೃದಿಂದ ಹಳ್ಳಹಿಡಿಯುತ್ತಿದ್ದು, ಪ್ರಸ್ತುತ ವರ್ಷದಲ್ಲಾದರೂ ಗ್ರಾಪಂಗಳಲ್ಲಿ ಕಡ್ಡಾಯವಾಗಿ ‘ಮಕ್ಕಳ ಸ್ನೇಹಿ ಗ್ರಾಪಂ ಅಭಿಯಾನ’ ಹಾಗೂ ಮಕ್ಕಳ ವಿಶೇಷ ಗ್ರಾಮಸಭೆ ನಡೆಸಲು ಜಿಲ್ಲಾಡಳಿತಗಳು ಸೂಕ್ತ ಕ್ರಮಕೈಗೊಳ್ಳಬೇಕಿದೆ.

    ಏನಿದು ಮಕ್ಕಳ ವಿಶೇಷ ಗ್ರಾಮಸಭೆ?: ಸ್ಥಳೀಯ ಗ್ರಾಪಂ ವ್ಯಾಪ್ತಿಯಲ್ಲಿ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು, ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿ, ಶಾಲೆ, ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು ಹಾಗೂ ಗ್ರಾಪಂ ಅಧ್ಯಕ್ಷರ ಜತೆಗೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆಯಲ್ಲವೇ ಎಂದು ನಿರ್ಲಕ್ಷೃ ತೋರುವುದಾಗಲಿ, ಉಡಾಫೆ ಮಾಡುವಂತಿಲ್ಲ. ಸಾಮಾನ್ಯ ಗ್ರಾಮಸಭೆಗಿರುವಷ್ಟು ಕಿಮ್ಮತ್ತು, ವಿಶೇಷ ಮಾನ್ಯತೆ ಈ ಮಕ್ಕಳ ಗ್ರಾಮಸಭೆಗೂ ಇದೆ.

    ಹೊಸ ರೂಪ…: ಎಲ್ಲ ಗ್ರಾಪಂಗಳು ಮಕ್ಕಳ ವಿಶೇಷ ಗ್ರಾಮಸಭೆ ಕಡ್ಡಾಯವಾಗಿ ನಡೆಸಬೇಕು ಎಂದು 2006ರಿಂದ ಪ್ರತಿವರ್ಷ ಸುತ್ತೋಲೆ ಹೊರಡಿಸಿ, ಮರೆಯಲಾಗುತ್ತಿದೆ. ಮಕ್ಕಳ ಕಲ್ಯಾಣ ಕಾರ್ಯಕ್ರಮದ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶವನ್ನು ಮಕ್ಕಳಿಂದ ಕಿತ್ತುಕೊಳ್ಳಲಾಗಿದೆ. ಸುತ್ತೋಲೆಯಲ್ಲಿ ಗ್ರಾಮಸಭೆ ಕಡ್ಡಾಯಗೊಳಿಸಲಾಗಿದ್ದು ವರದಿ ಜಿಪಂ ಸಿಇಒ ಮೂಲಕ ಮಕ್ಕಳ ರಕ್ಷಣಾ ಆಯೋಗಕ್ಕೆ ನೀಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಕೆಲವು ಕಡೆ ಗ್ರಾಮಸಭೆ ನಡೆಸಲಾಗಿತ್ತು, ಈ ಕಾರ್ಯಕ್ರಮಕ್ಕೆ ಹೊಸ ರೂಪ ನೀಡಿದ್ದು ಮಕ್ಕಳಿಗೆ ಅನುಕೂಲವಾಗಬೇಕಿದೆ.

    ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಕ ಹಾಗೂ ಸರ್ವರೂ ಖುಷಿಪಡಬೆಕಾದ ವಿಷಯ, ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಅನುಭವವನ್ನು ಆರ್‌ಡಿಪಿಆರ್ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಶೇಷ ಮುತುವರ್ಜಿಯಿಂದ 34 ಪುಟಗಳ ಸುತ್ತೋಲೆಯಲ್ಲಿ ‘ಮಕ್ಕಳ ಸ್ನೇಹಿ ಗ್ರಾಪಂ ಅಭಿಯಾನ’ ಘೋಷಣೆಯಾಗಿದ್ದು ಇದು ಕೆಳ ಹಂತದಲ್ಲಿ ಅನುಷ್ಠಾನವಾಗಬೇಕು.
    ಕೆ.ಟಿ.ತಿಪ್ಪೇಸ್ವಾಮಿ ಸಾಮಾಜಿಕ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts