More

    ಕೆಎಚ್​ ನಿರ್ಲಕ್ಷ್ಯಕ್ಕೆ ಬೆಂಬಲಿಗರ ಆಕ್ಷೇಪ: ಡಿಕೆಶಿ ಭೇಟಿಯಾದ ಎಸ್ಸಿ ಘಟಕದ ಮುಖಂಡರು

    ಕೋಲಾರ: ಕೇಂದ್ರ ಮಾಜಿ ಸಚಿವ ಕೆ.ಎಚ್​.ಮುನಿಯಪ್ಪ ಅವರನ್ನು ರ್ನಿಲಕ್ಷಿಸಿ ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್​, ಡಾ.ಎಂ.ಸಿ.ಸುಧಾಕರ್​ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡದ್ದರ ಕುರಿತು ಕಾಂಗ್ರೆಸ್​ ಎಸ್ಸಿ ಘಟಕದ ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಬೆಂಗಳೂರಿನಲ್ಲಿ ಭಾನುವಾರ ಭೇಟಿಯಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


    ಎಸ್ಸಿ ಘಟಕದ ಅಧ್ಯಕ್ಷ ಆರ್​.ಧರ್ಮಸೇನಾ ಮಾತನಾಡಿ, ಪಕ್ಷದಲ್ಲಿ ಒಬ್ಬ ದಲಿತ ನಾಯಕನಿಗೆ ಅನ್ಯಾಯವಾಗಿದೆ. ಆದರೆ ಪಕ್ಷದಿಂದ ಅವರನ್ನು ಭೇಟಿಯಾಗಿ ಸಮಾಧಾನಪಡಿಸುವ ಪ್ರಯತ್ನವೂ ನಡೆಸಿಲ್ಲ. ಹಾಗಾದರೆ ದಲಿತ ನಾಯಕರು ಪಕ್ಷಕ್ಕೆ ಅಗತ್ಯವಿಲ್ಲವೇ? 7 ಬಾರಿ ಸಂಸದರಾಗಿದ್ದು, ಕಳೆದ ಬಾರಿ ಚುನಾವಣೆಯಲ್ಲಿ 5 ಲಕ್ಷ ಮತ ಪಡೆದಿದ್ದ ಕೆ.ಎಚ್​.ಮುನಿಯಪ್ಪ ಅವರನ್ನು ಪಕ್ಷ ನಡೆಸಿಕೊಳ್ಳುತ್ತಿರುವ ರೀತಿ ನೋವುಂಟು ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ಬಹಿರಂಗವಾಗಿಯೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮುನ್ನ ಮುನಿಯಪ್ಪ ಅವರೊಂದಿಗೆ ಏಕೆ ಚರ್ಚಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.


    ಕೆ.ಎಚ್​.ಮುನಿಯಪ್ಪ ರಾಷ್ಟ್ರಮಟ್ಟದ ದಲಿತ ನಾಯಕರಾಗಿದ್ದು, ಅವರ ಅಗತ್ಯ ಪಕ್ಷಕ್ಕಿಲ್ಲ ಎನ್ನುವಂತೆ ವರ್ತನೆ ತೋರಲಾಗುತ್ತಿದೆ. ಇದನ್ನು ಸರಿಪಡಿಸುವ ಪ್ರಯತ್ನ ಏಕೆ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


    ಇದಕ್ಕೆ ಸ್ಪಂದಿಸಿದ ಡಿ.ಕೆ.ಶಿವಕುಮಾರ್​, ನಾನು ಮತ್ತು ಎಚ್​.ಕೆ.ಪಾಟೀಲ್​ ಜತೆಯಾಗಿ ಕೆ.ಎಚ್​.ಮುನಿಯಪ್ಪ ಮನೆಗೆ ಹೋಗಿ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದೇವೆ. ಅವರು ನಮ್ಮ ನಾಯಕರು, ಅವರೆಂದೂ ಪಕ್ಷ ಬಿಡುವುದಿಲ್ಲ. ಅವರೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ.


    ಮುನಿಯಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ವಿರುದ್ಧ ವಾಗ್ಧಾಳಿ ನಡೆಸಿದ್ದೇಕೆ ಎಂದು ಡಿ.ಕೆ.ಶಿವಕುಮಾರ್​ ಮುಖಂಡರನ್ನು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಜಿಲ್ಲಾ ಕಾಂಗ್ರೆಸ್​ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್​, ಮೊದಲು ಕೊತ್ತೂರು ಮಂಜುನಾಥ್​, ಸುಧಾಕರ್​ ಸುದ್ದಿಗೋಷ್ಠಿ ನಡೆಸಿ ಅತ್ಯಂತ ಕೀಳುಮಟ್ಟದ ಪದಗಳನ್ನು ಕೆ.ಎಚ್​.ಮುನಿಯಪ್ಪ ವಿರುದ್ಧ ಬಳಸಿದ್ದರು. ಆ ನಂತರವೇ ಸುದ್ದಿಗೋಷ್ಠಿ ಮಾಡಿ ರಮೇಶ್​ಕುಮಾರ್​ ವಿರುದ್ಧ ಮಾತನಾಡಿದ್ದು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.


    ನಂತರ ಡಿ.ಕೆ.ಶಿವಕುಮಾರ್​ ಮಾತನಾಡಿ, ಕೆ.ಎಚ್​.ಮುನಿಯಪ್ಪ ರಾಷ್ಟ್ರಮಟ್ಟದ ನಾಯಕರಾಗಿದ್ದಾರೆ. ಪಕ್ಷಕ್ಕೆ ಅವರ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಅವರಿಗೆ ಮುಜುಗರವಾಗುವಂತಹ ಯಾವುದೇ ಪ್ರಕ್ರಿಯೆ ನಡೆಸುವುದಿಲ್ಲ. ಅವರು ಕಾಂಗ್ರೆಸ್​ನ ನಿಷ್ಠಾವಂತ ನಾಯಕರಾಗಿದ್ದು, ಕೆಲವೊಂದು ಬಾರಿ ನನ್ನ ವಿರುದ್ಧವೂ ಮಾತನಾಡಿದ್ದಾರೆ. ಆದರೆ ಹಿರಿಯರಾದ ಅವರ ಮಾತುಗಳನ್ನು ಆಶೀರ್ವಾದ ಎಂದು ತಿಳಿದಿದ್ದೇನೆ ಎಂದರು.


    ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ಪರಿಶಿಷ್ಟ ವಿಭಾಗದ ಉಪಾಧ್ಯಕ್ಷ ಶ್ರೀಧರ್​, ದೇವನಹಳ್ಳಿ ಕ್ಷೇತ್ರದ ಎಸ್ಸಿ ಘಟಕ ಅಧ್ಯಕ್ಷ ರಾಮಪ್ಪ, ಕೋಗಿಲ ವೆಂಕಟೇಶ್​, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ನಾಗರಾಜ್​ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts