More

    ಬೆಂಬಲ ಬೆಲೆಗಾಗಿ ಪ್ರತಿಭಟನೆ

    ಅಥಣಿ: ರೈತರು ಬೆಳೆದಿರುವ ಗೋವಿನ ಜೋಳಕ್ಕೆ ಬೆಂಬಲ ಬೆಲೆ ನೀಡಿ ಎಪಿಎಂಸಿ ಮೂಲಕ ಖರೀದಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ರಸ್ತೆ ತಡೆದು ರೈತ ಸಂಘಟನೆಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಬಳಿಕ ತಾಲೂಕು ತಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸರ್ಕಾರಗಳು ರೈತರ ವಿರೋಧಿಯಾಗಿದೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿಗೊಳಿಸಿದ್ದರಿಂದ ರೈತರಿಗೆ ಅನ್ಯಾಯಾಗುತ್ತಿದೆ. ಗೋವಿನ ಜೋಳ,ಎಣ್ಣೆ ಕಾಳಿನ ಪದಾರ್ಥಗಳನ್ನು ಸರ್ಕಾರವು ಉದ್ದೇಶಪೂರ್ವಕವಾಗಿ ಬೆಂಬಲ ಬೆಲೆ ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ. ಸರ್ಕಾರವು ಎಪಿಎಂಸಿಯಲ್ಲಿಯೇ ಗೋವಿನಜೋಳಕ್ಕೆ ಬೆಂಬಲ ಬೆಲೆ ನೀಡಿ ಖರೀದಿಸಬೇಕು ಎಂದು ರೈತರು ಒತ್ತಾಯಿಸಿದರು.

    ಸರ್ಕಾರ ಅವೈಜ್ಞಾನಿಕ ಕಾನೂನು ಜಾರಿಗೆ ತಂದಿರುವುದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗೋವಿನ ಜೋಳ ಹಾಗೂ ಎಣ್ಣೆಕಾಳಿನ ಪದಾರ್ಥಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಧ್ಯವರ್ತಿಗಳು ಖರೀದಿಸುತ್ತಿರುವುದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಹಾಗಾಗಿ ಸರ್ಕಾರವು ತಕ್ಷಣವೇ ಬೆಂಬಲ ಬೆಲೆ ನೀಡಿ ಎಪಿಎಂಸಿ ಮೂಲಕ ಖರೀದಿಸಲು ಜಿಲ್ಲಾಡಳಿತಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮೂಲಕ ವಿನಂತಿಸಿದರು. 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಟನ್ ಕಬ್ಬಿಗೆ ಸರ್ಕಾರ ನಿಗದಿಪಡಿಸಿದ ದರವನ್ನು ಸಕ್ಕರೆ ಕಾರ್ಖಾನೆಗಳು ನೀಡುತ್ತಿಲ್ಲ. ಇದರಿಂದ ಕಬ್ಬು ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ. ಹಾಗಾಗಿ ಸರ್ಕಾರವು ಮಧ್ಯ ಪ್ರವೇಶಿಸಿ ಸಕ್ಕರೆ ಕಾರ್ಖಾನೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಅಲ್ಲದೆ, ಹಾಳಾಗಿರುವ ರಸ್ತೆಗಳ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಪಾರೀಶ ಯಳಗೂಡ, ಚಿನಗೌಡ ಇಮಗೌಡರ, ಬಾಳಪ ಲಂಗೋಟಿ,ರಾಮು ಗಾಳಿ, ಭರಮಾ ಅಡಹಳ್ಳಿ, ರುದ್ರಪ್ಪ ಕುಂಬಾರ, ಈರಪ್ಪ ಅಂಗಡಿ, ಹನುಮಂತ ನಾಯಿಕ, ರಮೇಶ ಮಡಿವಾಳ, ಸಂಗಪ್ಪ ತರಿಗಾರ, ತಮ್ಮಣ್ಣ ಪೂಜಾರಿ, ಸುರೇಶ ಮೇತ್ರಿ, ಮಹಾದೇವ ಕುಂಚನೂರ, ಬಾಹುಬಲಿ ಐಗಳಿ, ಲಕ್ಕಪ್ಪ ಪೂಜಾರಿ, ಅಪ್ಪಾಸಾಬ ರಬಕವಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts